-ಕೊಪ್ಪಳ ನಗರಸಭೆಯಲ್ಲಿ ಮಹತ್ವದ ಗೊತ್ತುವಳಿ ಮಂಡನೆ
-ಸ್ಟೀಲ್ ಪ್ಲಾಂಟ್ ಪ್ರಾರಂಭವಾದರೇ ಕೊಪ್ಪಳ ತೊರೆಯಬೇಕಾಗುತ್ತದೆ-ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು
ಕನ್ನಡಪ್ರಭ ವಾರ್ತೆ ಕೊಪ್ಪಳನಗರಕ್ಕೆ ಹೊಂದಿಕೊಂಡು ಸುಮಾರು 900 ಎಕರೆ ಪ್ರದೇಶದಲ್ಲಿ ನೂತನವಾಗಿ ತಲೆ ಎತ್ತಲು ಸಿದ್ಧವಾಗಿರುವ ಸ್ಟೀಲ್ ಪ್ಲಾಂಟ್ ಕಾರ್ಖಾನೆ ಪ್ರಾರಂಭಿಸದಿರುವಂತೆ ಕೊಪ್ಪಳ ನಗರಸಭೆ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಈ ಕುರಿತು ಸದಸ್ಯರು ಪ್ರಸ್ತಾಪ ಮಾಡುತ್ತಿದ್ದಂತೆ ಕಾರ್ಖಾನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು.ಈಗಗಾಲೇ ಇರುವ ಅಭಯ ಸಾಲ್ವೆಂಟ್, ವಿವಿಧ ಕಾರ್ಖಾನೆಗಳ ದೂಳಿನಿಂದ ನಗರದಲ್ಲಿ ತೀವ್ರ ಸಮಸ್ಯೆಯಾಗುತ್ತಿದೆ. ಹೀಗಾಗಿ, ಈಗ ಎಂಎಸ್ ಪಿಎಲ್ ಕಂಪನಿ ಈಗಿರುವ ಕಾರ್ಖಾನೆಯ ಜೊತೆಗೆ ಮತ್ತೊಂದು ಸ್ಟೀಲ್ ಪ್ಲಾಂಟ್ ಹಾಕುತ್ತಿದ್ದಾರೆ. ಇದು ಅತ್ಯಂತ ದೊಡ್ಡ ಕಾರ್ಖಾನೆಯಾಗಿದ್ದು, ಕೊಪ್ಪಳದವರೆಲ್ಲ ಊರು ತೊರೆಯಬೇಕಾಗುತ್ತದೆ ಎಂದು ಅನೇಕ ಸದಸ್ಯರು ಆತಂಕ ವ್ಯಕ್ತಪಡಿಸಿದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಅಧ್ಯಕ್ಷ ಅಮ್ಜದ್ ಪಟೇಲ್ ಅವರು, ಈಗಾಗಲೇ ಸರ್ಕಾರ ಇದಕ್ಕೆ ಅನುಮತಿ ನೀಡಿದೆ ಎಂದು ಹೇಳಲಾಗುತ್ತದೆ. ಹೀಗಾಗಿ, ನಾವು ಗೊತ್ತುವಳಿ ಮಾಡಿ, ಸರ್ಕಾರದ ಮಟ್ಟದಲ್ಲಿ ತಡೆಯುವ ಪ್ರಯತ್ನ ಮಾಡಿ, ಕೊಪ್ಪಳವನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದರು. ಇದಕ್ಕೆ ಸದಸ್ಯರಾದ ಮಹೇಂದ್ರ ಛೋಪ್ರಾ, ಮುತ್ತುರಾಜ ಕುಷ್ಟಗಿ, ರಾಜಶೇಖರ ಆಡೂರು ಸೇರಿದಂತೆ ಸರ್ವ ಸದಸ್ಯರು ಧ್ವನಿ ಮತದ ಮೂಲಕ ಬೆಂಬಲಿಸಿದರು.ಈ ಕುರಿತು ಗೊತ್ತುವಳಿಯನ್ನು ಮಂಡಿಸಿ, ಸರ್ಕಾರಕ್ಕೆ ಕಳುಹಿಸಿಕೊಡಲು ತೀರ್ಮಾನಿಸಲಾಯಿತು.
ಕುಡಿಯುವ ನೀರಿಗಾಗಿ ಕಾದಾಟ:ಜಿಲ್ಲಾ ಕೇಂದ್ರವಾಗಿರುವ ಕೊಪ್ಪಳ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಪ್ಪಿಲ್ಲ. ತುಂಗಭದ್ರಾ ಜಲಾಶಯ ಪಕ್ಕದಲ್ಲಿಯೇ ಇದ್ದರೂ, ಭರ್ತಿಯಾಗಿದ್ದರೂ ನೀರಿಗೆ ಮಾತ್ರ ಗೋಳು ತಪ್ಪಿಲ್ಲ ಎಂದು ಸದಸ್ಯ ವಿರುಪಾಕ್ಷಪ್ಪ ಮೋರನಾಳ ಆಕ್ರೋಶ ವ್ಯಕ್ತಪಡಿಸಿದರು.
ಇದು ಕೆಲಕಾಲ ಸದಸ್ಯರ ಮಧ್ಯೆ ವಾಗ್ವಾದಕ್ಕೆ ಕಾರಣವಾಯಿತು. ಅಧ್ಯಕ್ಷ ಅಮ್ಜದ್ ಪಟೇಲ್ ಸೇರಿದಂತೆ ಅಧಿಕಾರಿಗಳು ಸಮುಜಾಯಿಸಿ ನೀಡಲು ಮುಂದಾದಾಗ ಅನೇಕ ಸದಸ್ಯರು ಕಿಡಿಕಾರಿದರು. ನೀವು ಏನು ಮಾಡುತ್ತಿರೋ ಗೊತ್ತಿಲ್ಲ. ನಮಗೆ ಎರಡು ದಿನಕ್ಕೊಮ್ಮೆ ನೀರು ನೀಡುವಂತೆ ಸದಸ್ಯ ಮುತ್ತುರಾಜ ಕುಷ್ಟಗಿ ಆಗ್ರಹಿಸಿದರು. ಇದಕ್ಕೆ ಅಧ್ಯಕ್ಷ ಅಮ್ಜದ್ ಪಟೇಲ್ ಶಕ್ತಿಮೀರಿ ಶ್ರಮಿಸುವುದಾಗಿ ಹೇಳಿದರು.ಸದಸ್ಯೆ ವಿದ್ಯಾ ಹೆಸರೂರು ಶೌಚಾಲಯ ಸಮಸ್ಯೆಯನ್ನು ಮುಂದೆ ಮಾಡಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಯಾವ ವಾರ್ಡಿನಲ್ಲಿಯೂ ಸಾರ್ಜಜನಿಕ ಶೌಚಾಲಯ ನೆಟ್ಟಗೆ ಇಲ್ಲ. ಮಹಿಳೆಯರ ಮಾನ ದೇವರೇ ಕಾಪಾಡಬೇಕು ಎಂದು ಆಕ್ರೋಶ ಹೊರಹಾಕಿದರು. ಅಷ್ಟೇ ಅಲ್ಲಾ, ವಿದ್ಯುತ್ ಬಿಲ್ ₹1.52 ಕೋಟಿ ಪಾವತಿ ಮಾಡಿರುವುದಕ್ಕೂ ಅವರು ಪ್ರಶ್ನೆ ಮಾಡಿದರು.
ಕೆಲವರು ಆಡಳಿತ ಪಕ್ಷದ ಪರ ಮತ್ತೆ ಕೆಲವರು ವಿರೋಧ ಪಕ್ಷದ ಪರ ವಾಗ್ವಾದ ನಡೆಸಿದರು. ಆದರೆ ಕೊನೆಗೂ ಸಮಸ್ಯೆಗೆ ಪರಿಹಾರ ಮಾತ್ರ ಸಭೆಯಲ್ಲಿ ದೊರೆಯಲೇ ಇಲ್ಲ.ಈ ನಡುವೆ ಸದಸ್ಯ ಸರ್ವೇಶಗೌಡ, 27ನೇ ವಾರ್ಡಿನಲ್ಲಿ ನಿರ್ಮಾಣ ಮಾಡಲಾಗಿರುವ ಸಾರ್ವಜನಿಕ ಶೌಚಾಲಯ ತೆರೆದು, ಸಾರ್ವಜನಿಕರಿಗೆ ಉಪಯೋಗ ಮಾಡಿಕೊಳ್ಳಲು ಅವಕಾಶ ನೀಡಿ ಎಂದು ಆಗ್ರಹಿಸಿದರು.
ಸಾಮಾನ್ಯ ಸಭೆ ಕರೆಯುವ ಕುರಿತು ವಾರ ಮೊದಲೇ ನೋಟಿಸ್ ನೀಡುತ್ತಿರಿ, ಆದರೆ, ಲೆಕ್ಕಪತ್ರದ ಪುಸ್ತಕವನ್ನು ಮಾತ್ರ ಕೊನೆಯ ದಿನ ನೀಡುತ್ತಿರಿ, ಹೀಗಾದರೇ ನಾವು ಹೇಗೆ ಓದಿಕೊಂಡು ಬಂದು ಪ್ರಶ್ನೆ ಮಾಡಬೇಕು ಎಂದು ಸದಸ್ಯ ವಿರುಪಾಕ್ಷಪ್ಪ ಪ್ರಶ್ನೆ ಮಾಡಿದರು.ಸೋಮಣ್ಣ ಹಳ್ಳಿ ಆಕ್ರೋಶ:
ನಗರಸಭೆಯ ಹೊರಗೆ ಕಲ್ಲು ಹೊತ್ತುಕೊಂಡು ಪ್ರತಿಭಟನೆ ಮಾಡಿದ ಸದಸ್ಯ ಸೋಮಣ್ಣ ಹಳ್ಳಿ, ಸಭೆಯಲ್ಲಿಯೂ ತಮ್ಮ ಹೋರಾಟ ಮುಂದುವರೆಸಿದರು. ನಮಗೆ ನ್ಯಾಯ ಸಿಗುತ್ತಿಲ್ಲ. ಪೌರಾಯುಕ್ತರು ನನ್ನ ಕರೆಯನ್ನೇ ಸ್ವೀಕಾರ ಮಾಡುವುದಿಲ್ಲ ಎಂದು ಕಿಡಿಕಾರಿದರು.ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಉಪಾಧ್ಯಕ್ಷೆ ಅಶ್ವಿನಿ ಗದುಗಿನಮಠ, ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ ಪಾಷಾ, ಪೌರಾಯುಕ್ತ ಗಣಪತಿ ಇದ್ದರು.