- ಜಿಲ್ಲಾಡಳಿತ, ಅಧಿಕಾರಿಗಳ ಧೋರಣೆಗೆ ಆಕ್ರೋಶ । ನನ್ನ ಮಾತುಗಳ ತಿರುಚಬೇಡಿ ಎಂದು ಸಲಹೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ಕಾಡಜ್ಜಿ ಕೃಷಿ ಇಲಾಖೆ ಪ್ರಯೋಗಕ್ಕೆ ಮೀಸಲಾದ ಜಾಗದ ಮಣ್ಣನ್ನು ಸಾಗಿಸುತ್ತಿದ್ದ ಬಗ್ಗೆ ನಾನು ಆಕ್ಷೇಪಿಸಿದ್ದೇನೆ. ಇದರ ಹೊರತು ರೈತರು, ಜನಸಾಮಾನ್ಯರು ಮರಳು, ಮಣ್ಣು ಒಯ್ಯುವುದಕ್ಕೆ ಅಲ್ಲ. ನನ್ನ ಮಾತುಗಳನ್ನು ಜಿಲ್ಲಾಡಳಿತವಾಗಲೀ ಯಾವುದೇ ಅಧಿಕಾರಿಗಳಾಗಲೀ ತಿರುಚಬೇಡಿ ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ಎಚ್ಚರಿಸಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲೇ ಅತಿ ಹೆಚ್ಚು ಮರಳುಗಾರಿಕೆ, ಇಟ್ಟಿಗೆ ತಯಾರಿಕಾ ಪ್ರದೇಶವಿದೆ. ಎಂದಿಗೂ ಮರಳು ಮತ್ತು ಇಟ್ಟಿಗೆ ದಂಧೆ ಮಾಡುವವರಿಗೆ ತೊಂದರೆ ನೀಡಿಲ್ಲ. ಮುಂದೆಯೂ ತೊಂದರೆ ಕೊಡುವವನಲ್ಲ ಎಂದರು.
ಬಡವರು, ರೈತರು ಸೂರು ಕಟ್ಟಿಕೊಳ್ಳಲು ಎತ್ತಿನಗಾಡಿ, ಸೈಕಲ್‌ಗಳಲ್ಲಿ ಮಣ್ಣು, ಮರಳು ಒಯ್ದರೆ ವಿರೋಧಿಸುವ ಮನಸ್ಥಿತಿ ನನ್ನದಲ್ಲ. ಹೊಟ್ಟೆಪಾಡಿಗಾಗಿ ಕೆಲವರು ಬಡ್ಡಿಗೆ ದುಡ್ಡು ತಂದು, ಟ್ರ್ಯಾಕ್ಟರ್, ಲಾರಿ ಮಾಡಿಕೊಂಡು ಮಣ್ಣು, ಮರಳು ಸಾಗಿಸುತ್ತಾರೆ. ಸಾಲ ಮಾಡಿಕೊಂಡು ಟ್ರ್ಯಾಕ್ಟರ್, ಟಿಪ್ಪರ್ ಮಾಡಿದವರು ಹೊಸ ಟೈಯರ್ ಹಾಕಿಸಬೇಕೆಂದರೂ ಕಣ್ಣಲ್ಲಿ ರಕ್ತ ಬರುವಂತಾಗಿರುತ್ತದೆ. ಅಂತಹವರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗಬಾರದು ಎಂದು ತಿಳಿಸಿದರು.ಕಾಡಜ್ಜಿ ಕೃಷಿ ಇಲಾಖೆ ಸರ್ಕಾರಿ ಪ್ರಯೋಗಕ್ಕೆ ಬಳಸುವ ಜಮೀನನಲ್ಲಿ ಮಣ್ಣನ್ನು ಅತಿ ದೊಡ್ಡ ಪ್ರಮಾಣದಲ್ಲಿ ಸಾಗಿಸುತ್ತಿದ್ದ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಎಸ್‌ಪಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ತಿಳಿಸಿದೆ. ಸರ್ಕಾರಿ ಭೂಮಿಯಲ್ಲಿ ಮಣ್ಣು ಅಗೆದರೂ ಜಿಲ್ಲಾಡಳಿತದಲ್ಲಿ ಏನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದನ್ನೇ ನಾನು ಪದೇ ಪದೇ ಹೇಳುವುದಕ್ಕೂ ಆಗುವುದಿಲ್ಲ ಎಂದು ಟೀಕಿಸಿದರು.
2 ಸಲ ಶಾಸಕನಾಗಿದ್ದೇನೆ. 43 ವರ್ಷದ ರಾಜಕೀಯ ಜೀವನದಲ್ಲಿ ಯಾರಿಗೂ ಕೇಡು ಬಯಸಿಲ್ಲ. ಆದರೂ, ರೈತರು, ಬಡವರಿಗೆ ಮಣ್ಣು, ಮರಳು ಸಿಗದಂತೆ ಶಾಸಕ ಹರೀಶ್ ಮಾಡಿದ್ದಾರೆಂದು ಅಧಿಕಾರಿಗಳು ಸುಳ್ಳು ಹೇಳಿರುವುದು ಸರಿಯಲ್ಲ. ಟ್ರ್ಯಾಕ್ಟರ್, ಟಿಪ್ಪರ್ ಮಾಲೀಕರ ಸಮೇತವೇ ಸುದ್ದಿಗೋಷ್ಠಿಗೆ ಬಂದು, ಈ ಮಾತುಗಳನ್ನು ಸ್ಪಷ್ಟಪಡಿಸುತ್ತಿದ್ದೇನೆ ಎಂದು ಶಾಸಕ ಹರೀಶ್ ಪುನರುಚ್ಛರಿಸಿದರು.ನಮ್ಮಿಂದ ಯಾರಿಗೂ ತೊಂದರೆ ಆಗಬಾರದು. ಜಿಲ್ಲಾಧಿಕಾರಿ ಜೊತೆಗೆ ನಾನು ಮಾತನಾಡಿ, ಮಣ್ಣು, ಮರಳು ಒಯ್ಯಲು ತೊಂದರೆ ನೀಡದಂತೆ ಹೇಳುತ್ತೇನೆ. ಟ್ರ್ಯಾಕ್ಟರ್, ಟಿಪ್ಪರ್ ಮಾಲೀಕರು ಜಿಲ್ಲಾ ಮಂತ್ರಿ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಭೇಟಿ ಮಾಡಿ, ಮರಳು, ಮಣ್ಣು ಸಾಗಿಸಲು ಅನುಮತಿ ಕೊಡುವಂತೆ ಕೇಳಿಕೊಳ್ಳಿ ಎಂದು ಬಿ.ಪಿ.ಹರೀಶ ತಾಕೀತು ಮಾಡಿದರು.
ಈ ಸಂದರ್ಭ ಕೆಲ ಟ್ರ್ಯಾಕ್ಟರ್, ಟಿಪ್ಪರ್ ಮಾಲೀಕರು ಇದ್ದರು.- - -
-1ಕೆಡಿವಿಜಿ4: ದಾವಣಗೆರೆಯಲ್ಲಿ ಹರಿಹರ ಕ್ಷೇತ್ರ ಬಿಜೆಪಿ ಶಾಸಕ ಬಿ.ಪಿ.ಹರೀಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.