ಕೆಸರುಗದ್ದೆ ಕ್ರೀಡಾಕೂಟಗಳಿಂದ ವಿದ್ಯಾರ್ಥಿಗಳಿಗೆ ಕೃಷಿ ಪರಿಚಯ: ಬೇಬಿ ಮ್ಯಾಥ್ಯೂ

KannadaprabhaNewsNetwork |  
Published : Aug 22, 2025, 02:00 AM IST
-ಮಕ್ಕಳ ಕೆಸರುಗದ್ದೆ ಕ್ರೀಡಾಕೂಟ | Kannada Prabha

ಸಾರಾಂಶ

ಕೆಸರು ಗದ್ದೆ ಕ್ರೀಡೆಗಳು ವಿದ್ಯಾರ್ಥಿಗಳಿಗೆ ಕೃಷಿ ಪರಿಚಯ ಮಾಡಿಕೊಡಲು ಸಹಕಾರಿಯಾಗಿವೆ ಎಂದು ಗಣ್ಯರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ವಿದ್ಯಾರ್ಥಿಗಳಲ್ಲಿ ಕೃಷಿ ಚಟುವಟಿಕೆಗಳು, ರೈತರ ಕೃಷಿ ಬದುಕು, ದೇಶದ ಕೃಷಿ ಜೀವನ ಬಗ್ಗೆ ಅರ್ಥ ಮಾಡಿಕೊಳ್ಳುವ ದಿಸೆಯಲ್ಲಿ ಏರ್ಪಡಿಸಿರುವ ಕೆಸರುಗದ್ದೆ ಕ್ರೀಡೆಗಳು ವಿದ್ಯಾರ್ಥಿಗಳಿಗೆ ಕೃಷಿ ಪರಿಚಯ ಮಾಡಿಕೊಡಲು ಸಹಕಾರಿಯಾಗಿವೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ ಹೇಳಿದರು.

ಅವರು ಕುಶಾಲನಗರ ತಾಲೂಕಿನ ಕೂಡು ಮಂಗಳೂರು ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್, ಎನ್‌ಎಸ್‌ಎಸ್‌, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಎಸ್‌ಡಿಎಂಸಿ, ವಿದ್ಯಾರ್ಥಿ ಸಂಘ, ಕೂಡ್ಲೂರು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ಹಾಗೂ ಕುಶಾಲನಗರ ಸ್ಥಳೀಯ ಸಂಸ್ಥೆ,‌ ಕುಶಾಲನಗರ ಕಾವೇರಿ ಜೆಸಿಐ ಸಂಸ್ಥೆ ಹಾಗೂ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ವಿದ್ಯಾರ್ಥಿಗಳ ನಡಿಗೆ ಕೃಷಿಯೆಡೆಗೆ ಎಂಬ ಘೋಷ ವಾಕ್ಯದೊಂದಿಗೆ ಕೂಡ್ಲೂರು ಗ್ರಾಮದ ಕೃಷಿಕರಾದ ಕೆ.ಎಸ್.ರಾಜಾಚಾರಿ ಅವರ ಗದ್ದೆಯಲ್ಲಿ ಆಯೋಜಿಸಲಾದ ಕೆಸರುಗದ್ದೆ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳಿಗೆ ಕೃಷಿ ಪಾಠದ ಮಹತ್ವ ತಿಳಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ರೈತರು ಕೃಷಿ ಕಾರ್ಯದಲ್ಲಿ ಎದುರಿಸುವ ಕಷ್ಟ-ಕಾರ್ಪಣ್ಯಗಳು, ರೈತರ ಕೃಷಿ ಪದ್ಧತಿ ಬಗ್ಗೆ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಸ್ವತಃ ಅನುಭವ ಪಡೆಯಲು ಇಂತಹ ಕ್ರೀಡೆಗಳು ಸಹಕಾರಿಯಾಗಿವೆ ಎಂದರು.

ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಕೆಸರು ಗದ್ದೆ ಕ್ರೀಡೆಯ ಮಹತ್ವದ ಕುರಿತು ಮಾಹಿತಿ ನೀಡಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ.ಪ್ರವೀಣ್ ದೇವರಗುಂಡ ಸೋಮಪ್ಪ ಮಾತನಾಡಿ, ಶಾಲಾ ಮಕ್ಕಳಿಗೆ ‌ಪಠ್ಯ ಚಟುವಟಿಕೆಗಳ ಜತೆಗೆ ಈ ರೀತಿಯಲ್ಲಿ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಿರುವುದು ಮೆಚ್ಚುಗೆಯ ಸಂಗತಿಯಾಗಿದೆ ಎಂದರು.

ಲಯನ್ಸ್ ‌ಕ್ಲಬ್ ಉಪಾಧ್ಯಕ್ಷ ಕೆ.ಎನ್.ಪವನ್ ಕುಮಾರ್ ಮಾತನಾಡಿ, ಶಾಲೆಯ ಹೊರಾಂಗಣದ ಪರಿಸರದಲ್ಲಿ ಇಂತಹ ಚಟುವಟಿಕೆಗಳಿಗೆ‌ ಗ್ರಾಮದಲ್ಲಿ ಹೆಚ್ಚಿನ ‌ಪ್ರೋತ್ಸಾಹ ನೀಡಲಾಗುತ್ತದೆ. ಇಂತಹ ಕ್ರೀಡಾಕೂಟವನ್ನು ನಿರಂತರವಾಗಿ ಮುಂದುವರಿಸಲು ಎಲ್ಲರ ಸಹಕಾರ ಬೇಕು ಎಂದು ‌ಮನವಿ ಮಾಡಿದರು.

ಗದ್ದೆಯ ಮಾಲೀಕ ಪ್ರಗತಿ ಪರ ಕೃಷಿಕ ಕೆ.ಎಸ್. ರಾಜಾಚಾರಿ ಮಾತನಾಡಿ, ತಮ್ಮ ಗದ್ದೆಯಲ್ಲಿ ಈ ಶಾಲೆಯ ವತಿಯಿಂದ 4ನೇ ವರ್ಷದ‌ ಕೆಸರುಗದ್ದೆ ಕ್ರೀಡಾಕೂಟ ಏರ್ಪಡಿಸಿದ್ದು, ಮಕ್ಕಳು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ಕೃಷಿ‌ ಚಟುವಟಿಕೆಗಳ ಬಗ್ಗೆ ಅನುಭವ ಪಡೆಯುತ್ತಿದ್ದಾರೆ. ‌ಇದು ಮಕ್ಕಳಿಗೆ‌ ದೇಶದ ಕೃಷಿ ಬಗ್ಗೆ ಜ್ಞಾನ ಹೊಂದಲು ಸಹಕಾರಿಯಾಗಿವೆ ಎಂದರು.

ಕೂಡಿಗೆ ಡಯಟ್ ಸಂಸ್ಥೆಯ ಉಪನ್ಯಾಸಕಿ ಎಂ.ಲತಾ, ಕೂಡಿಗೆ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಎಚ್.ಜೆ. ನಾಗರಾಜ್ ‌ಹಂಡ್ರಂಗಿ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ‌ಸಂಘದ ಮಾಜಿ ಅಧ್ಯಕ್ಷ ಸಿ.ಟಿ. ಸೋಮಶೇಖರ್, ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಟಿ. ನಾರಾಯಣ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಎಂ.ಎನ್.ಕಾಳಪ್ಪ, ಎಂ.ಎನ್.ಮೂರ್ತಿ, ಸ್ಕೌಟ್ಸ್, ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಎಂ.ಎಸ್.ಗಣೇಶ್, ಎಸ್‌ಡಿಎಂಸಿ ಸದಸ್ಯ ಎಂ.ರಂಗಸ್ವಾಮಿ, ಸ್ಕೌಟ್ಸ್ ಮಾಸ್ಟರ್‌ಗಳಾದ ಡಿ.ವಿ.ಗಣೇಶ್, ಬಿ.ಕೆ. ಗಣೇಶ್, ಸುಮನ್, ಕೊಡಗನ ಹರ್ಷ, ಸತೀಶ್, ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಶಿಕ್ಷಕಿ ಕೆ.ಟಿ.ಸೌಮ್ಯ, ಸ್ಕೌಟ್ಸ್ ಮಾಸ್ಟರ್ ಡಿ.ವಿ.ಗಣೇಶ್, ಕಸಾಪ ಸದಸ್ಯ ಎಂ.ಎನ್.ಕಾಳಪ್ಪ ಮಕ್ಕಳಿಗೆ ವಿವಿಧ ಕ್ರೀಡೆಗಳನ್ನು ನಡೆಸಿಕೊಟ್ಟರು.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ