ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಮತ್ತೆ ಸಂಕಷ್ಟ?

KannadaprabhaNewsNetwork |  
Published : Nov 28, 2024, 12:33 AM ISTUpdated : Nov 28, 2024, 07:19 AM IST
ಸಿಎಂ ಸಿದ್ದರಾಮಯ್ಯ | Kannada Prabha

ಸಾರಾಂಶ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಹಗರಣ ಸಂಬಂಧ ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯ(ಇ.ಡಿ.) ತನಿಖೆ ನಡೆಯುತ್ತಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಹಾಗೂ ಜಮೀನು ಮಾರಿದ ದೇವರಾಜು ಅವರಿಗೆ ಮತ್ತೊಂದು ಕಂಟಕ ಎದುರಾಗಿದೆ.

 ಮೈಸೂರು :  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಹಗರಣ ಸಂಬಂಧ ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯ(ಇ.ಡಿ.) ತನಿಖೆ ನಡೆಯುತ್ತಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಹಾಗೂ ಜಮೀನು ಮಾರಿದ ದೇವರಾಜು ಅವರಿಗೆ ಮತ್ತೊಂದು ಕಂಟಕ ಎದುರಾಗಿದೆ.

ಸಿದ್ದರಾಮಯ್ಯ ಅವರ ವಿರುದ್ಧ ಸುತ್ತಿಕೊಂಡಿರುವ ಮುಡಾ ಪ್ರಕರಣದ ಮೂಲವಾದ ಕೆಸರೆ ಗ್ರಾಮದ ವಿವಾದಿತ ಜಮೀನು ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸೇರಿ 12 ಮಂದಿ ವಿರುದ್ಧ ಮೈಸೂರಿನ ಏಳನೇ ಹೆಚ್ಚುವರಿ ಜಿಲ್ಲಾ ಮತ್ತು ವಕ್ಫ್‌ ಸೆಷನ್ಸ್‌ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.

ಪಾರ್ವತಿ ಅವರಿಗೆ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಉಡುಗೊರೆ ರೂಪದಲ್ಲಿ ನೀಡಿದ್ದ ಕೆಸರೆ ಗ್ರಾಮದ ಜಮೀನು ಮೂಲ ಮಾಲೀಕರ ಕುಟುಂಬದ ಸದಸ್ಯರು, ಆ ಜಮೀನನ್ನು ತಮ್ಮ ಗಮನಕ್ಕೆ ತಾರದೇ ಅಕ್ರಮವಾಗಿ ಮಾರಾಟ ಮಾಡಿ ವಂಚಿಸಲಾಗಿದೆ ಎಂದು ಆರೋಪಿಸಿ ಈ ದೂರು ದಾಖಲಾಗಿದೆ.

ಮಲ್ಲಿಕಾರ್ಜುನ ಸ್ವಾಮಿಗೆ ಜಮೀನು ಮಾರಾಟ ಮಾಡಿದ್ದ ದೇವರಾಜು ಅವರ ಅಣ್ಣ ಮೈಲಾರಯ್ಯ ಅವರ ಪುತ್ರಿ ಜಮುನಾ ಕೋರ್ಟ್ ಮೆಟ್ಟಿಲೇರಿದ್ದು, ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ನ್ಯಾಯಾಧೀಶರು ವಿಚಾರಣೆಯನ್ನು ಜ.10ಕ್ಕೆ ನಿಗದಿಪಡಿಸಿದ್ದಾರೆ.

ಮೈಲಾರಯ್ಯ ಅವರ ಪುತ್ರಿ ಜಮುನಾ ಅವರು ಜಮೀನು ಮೂಲ ಮಾಲೀಕರಾದ ನಿಂಗ ಅವರ ಮೊಮ್ಮಗಳಾಗಿದ್ದು, ನಿಂಗ ಅವರಿಗೆ ದೇವರಾಜು, ಮೈಲಾರಯ್ಯ ಮತ್ತು ಮಲ್ಲಯ್ಯ ಎಂಬ ಮೂವರು ಪುತ್ರರು ಇದ್ದಾರೆ.

ವಿವಾದಿತ ಕೆಸರೆಯಲ್ಲಿನ ಸರ್ವೆ ನಂ.464ರ 3.16 ಎಕರೆ ಜಮೀನು ಪಿತ್ರಾರ್ಜಿತ ಆಸ್ತಿ. ನಮ್ಮ ದೊಡ್ಡಪ್ಪ ದೇವರಾಜು ಅವರು ನಮ್ಮ ಗಮನಕ್ಕೆ ತಾರದೇ ಆ ಜಮೀನು ಮಾರಾಟ ಮಾಡಿದ್ದು, ವಂಚಿಸಲಾಗಿದೆ ಎಂದು ಜಮುನಾ ಅವರು ಆರೋಪಿಸಿ ಪಾರ್ವತಿ ಸಿದ್ದರಾಮಯ್ಯ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ, ಜಮೀನು ಮಾರಾಟ ಮಾಡಿದ್ದ ಜೆ.ದೇವರಾಜು, ಎಂ.ಮಂಜುನಾಥ ಸ್ವಾಮಿ, ಎಂ.ಸರೋಜಮ್ಮ, ಡಿ.ಶೋಭಾ, ಡಿ. ದಿನಕರ್ ರಾಜ್, ಡಿ.ಪ್ರಭಾ, ಡಿ.ಪ್ರತಿಭಾ, ಡಿ.ಶಶಿಧರ್ ಸೇರಿ ಜಿಲ್ಲಾಧಿಕಾರಿ ಮತ್ತು ಎಂಡಿಎ ಆಯುಕ್ತರನ್ನು ಎದುರು ಪಾರ್ಟಿದಾರರು ಎಂದು ಉಲ್ಲೇಖಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ.

ಪಾರ್ವತಿ ಅವರಿಗೆ ಸೋದರನಿಂದ ಊಡುಗೊರೆಯಾಗಿ ಬಂದಿದ್ದ ಜಮೀನನ್ನು ಮುಡಾ ಭೂಸ್ವಾಧೀನ ಪಡಿಸಿಕೊಂಡು ಪರ್ಯಾಯವಾಗಿ ವಿಜಯನಗರದಲ್ಲಿ 14 ನಿವೇಶನ ಕೂಡ ನೀಡಿತ್ತು. ವಿವಾದವಾದ ಬಳಿಕ ಪಾರ್ವತಿ ಅವರು ಮುಡಾಗೆ ಆ 14 ನಿವೇಶನವನ್ನು ಹಿಂದಿರುಗಿಸಿದ್ದಾರೆ.

ಪರಿಹಾರ ಕೊಡಿಸಿಲ್ಲ:

ಪ್ರಕರಣ ಕುರಿತು ಮಾತನಾಡಿರುವ ಜಮುನಾ ಸಹೋದರ ಮಂಜುನಾಥಸ್ವಾಮಿ ಅವರು, ನಮ್ಮ ಚಿಕ್ಕಪ್ಪ ದೇವರಾಜು ಮೋಸದಿಂದ ಭೂಮಿ ಮಾರಾಟ ಮಾಡಿದ್ದಾರೆ. ಖಾತೆ ಮಾಡಿಸುತ್ತೇನೆಂದು ಹೇಳಿ ನನ್ನ ಹಾಗೂ ತಾಯಿ ಬಳಿ ಸಹಿ ಪಡೆದುಕೊಂಡರು. ಆದರೆ ಭೂಮಿ ಮಾರಾಟ ಮಾಡಲಾಗಿದ್ದು, ಕೇಳಿದಕ್ಕೆ ನಿಮಗೆ ಪರಿಹಾರ ಕೊಡಿಸುತ್ತೇನೆ ಎಂದರು. ಆದರೆ ಈವರೆಗೆ ಯಾವುದೇ ಪರಿಹಾರ ಕೊಟ್ಟಿಲ್ಲ ಎಂದು ದೂರಿದರು.

ವಿವಾದಿತ 3.16 ಎಕರೆ ಭೂಮಿ ನನ್ನ ತಂದೆ ಮೈಲಾರಯ್ಯ ಪಾಲಿಗೆ ಬಂದಿತ್ತು. ಆ ಭೂಮಿಯನ್ನು ದೇವರಾಜು ಮೋಸದಿಂದ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಸಹೋದರಿ ಜಮುನಾ ಹೆಸರಿನಲ್ಲಿ ದಾವೆ ಹಾಕಿಸಿದ್ದೇವೆ. ನಮಗೆ ಸಿದ್ದರಾಮಯ್ಯ ಸಂಬಂಧ ಇಲ್ಲ. ಅವರನ್ನು ಕೇಳಿದರೆ ನೀವು ಯಾರು ಎಂದು ಕೇಳಬಹುದು? ಅದಕ್ಕಾಗಿ ದೇವರಾಜು ಅವರನ್ನು ಕೇಳಿದ್ದೇವೆ? ಪರಿಹಾರ ಸಿಗದ ಹಿನ್ನೆಲೆಯಲ್ಲಿ ಭೂಮಿ ಮಾರಾಟ ಮಾಡಿದವರು, ಕೊಂಡವರು ಎಲ್ಲರನ್ನೂ ಸೇರಿಸಿ ದಾವೆ ಹಾಕಿದ್ದೇವೆ ಎಂದರು.

- ಸಿದ್ದು ಪತ್ನಿ ಸೇರಿ 12 ಮಂದಿ ವಿರುದ್ಧ ಕೇಸ್‌

- ಸಿಎಂ ಪತ್ನಿಗೆ ಸೋದರ ನೀಡಿದ್ದ ಕೆಸರೆ ಗ್ರಾಮದ ಜಮೀನು ವಿವಾದ

- ಈ 3.16 ಎಕ್ರೆ ಜಾಗ ಸಿಎಂ ಪತ್ನಿ ಸೋದರಗೆ ಮೋಸದಿಂದ ಮಾರಾಟ

- ಜಮೀನಿನ ಮೂಲ ಮಾಲೀಕನ ಕುಟುಂಬಸ್ಥರಿಂದ ಕೋರ್ಟ್‌ನಲ್ಲಿ ಕೇಸು

- ಸಿದ್ದು ಪತ್ನಿ ಸೇರಿ 12 ಮಂದಿ ವಿರುದ್ಧ ಕೇಸ್‌, ಜ.10ಕ್ಕೆ ಕೇಸ್‌ ವಿಚಾರಣೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ