ಮುಡಾ ನಿವೇಶನ ಹಂಚಿಕೆ ಪ್ರಕರಣ : ಸಮನ್ಸ್ ರದ್ದಾಗಿ, ವಿಚಾರಣೆಯೇ ಸ್ಥಗಿತ : ಇ.ಡಿ ಬೇಸರ

KannadaprabhaNewsNetwork |  
Published : Mar 27, 2025, 01:04 AM ISTUpdated : Mar 27, 2025, 08:15 AM IST
ಇ.ಡಿ | Kannada Prabha

ಸಾರಾಂಶ

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಆರೋಪಿಗಳಿಗೆ ನೀಡಿದ್ದ ಸಮನ್ಸ್ ರದ್ದುಪಡಿಸಿರುವುದರಿಂದ ಪ್ರಕರಣದ ತನಿಖೆಯೇ ಸ್ಥಗಿತಗೊಂಡಿದೆ. ಇದರಿಂದ ನಮ್ಮ ಕೈ ಕಟ್ಟಿ ಹಾಕಿದಂತಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ತಿಳಿಸಿದೆ.

  ಬೆಂಗಳೂರು : ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಆರೋಪಿಗಳಿಗೆ ನೀಡಿದ್ದ ಸಮನ್ಸ್ ರದ್ದುಪಡಿಸಿರುವುದರಿಂದ ಪ್ರಕರಣದ ತನಿಖೆಯೇ ಸ್ಥಗಿತಗೊಂಡಿದೆ. ಇದರಿಂದ ನಮ್ಮ ಕೈ ಕಟ್ಟಿ ಹಾಕಿದಂತಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ತಿಳಿಸಿದೆ.

ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ವಿಚಾರಣೆಗೆ ನೀಡಲಾಗಿದ್ದ ಸಮನ್ಸ್ ರದ್ದುಪಡಿಸಿರುವ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಇ.ಡಿ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿ ಬುಧವಾರ ನಡೆಯಿತು.

ಇ.ಡಿ ಪರ ಹೆಚ್ಚುವರಿ ಸಾಲಿಟಿರ್ ಜನರಲ್‌ ಎಸ್.ವಿ.ರಾಜು ವಾದ ಮಂಡಿಸಿ, ನಟೇಶ್‌ಗೆ ನೀಡಿದ್ದ ಸಮನ್ಸ್ ರದ್ದಾದ ಕಾರಣ ಆ ಆದೇಶದ ಮೇಲೆ ಪ್ರಮುಖ ಆರೋಪಿ ಪಾರ್ವತಿ ಅವರಿಗೆ ನೀಡಿದ್ದ ಸಮನ್ಸ್ ಅನ್ನು ಕೂಡ ಏಕಸದಸ್ಯ ಪೀಠ ರದ್ದುಪಡಿಸಿದೆ. ಇದರಿಂದ ಮುಂದಿನ ವಿಚಾರಣೆ ನಡೆಯಲು ಯಾವುದೇ ಅವಕಾಶಗಳು ಉಳಿದಿಲ್ಲ. ಈಗ ಪಾರ್ವತಿ ಅವರಿಗೆ ಸಮನ್ಸ್ ನೀಡಲು ಬರುವುದಿಲ್ಲ. ಮುಂದಿನ ದಿನಗಳಲ್ಲಿ ಬೇರೆ ಆರೋಪಿಗಳು ಕೂಡ ನಟೇಶ್ ಪ್ರಕರಣ ಆಧರಿಸಿ ನ್ಯಾಯಾಲಯದಲ್ಲಿ ಲಾಭ ಪಡೆಯಲು ಅವಕಾಶ ನೀಡಿದಂತಾಗುತ್ತದೆ ಎಂದರು.

ಈ ಪ್ರಕರಣದಲ್ಲಿ ನಮ್ಮ ಕೈಗಳ್ಳನ್ನು ಕಟ್ಟಿ ಹಾಕಲಾಗಿದೆ. ಹೀಗಾದರೆ ವಿಚಾರಣೆ ಮುಂದುವರೆಸುವುದು ಹೇಗೆ? ಆರೋಪಿತರ ಹೇಳಿಕೆ ದಾಖಲಿಸಿಕೊಳ್ಳದೆ, ತನಿಖೆ ನಡೆಸದೆ ಪ್ರಕರಣದ ಕುರಿತು ಇ.ಡಿ ಸ್ವತಂತ್ರ್ಯ ಅಭಿಪ್ರಾಯಕ್ಕೆ ಬರಲು ಆಗುವುದಿಲ್ಲ. ಏಕಸದಸ್ಯ ಪೀಠವು ತನ್ನ ಆದೇಶದಲ್ಲಿ ಪಿಎಂಎಲ್‌ಎ ಕಾಯ್ದೆಯ ಸೆಕ್ಷೆನ್ 17ರ ಒಂದು ಮತ್ತು 2ನೇ ಭಾಗಗಳನ್ನು ಬೇರೆಯದೇ ರೀತಿಯಲ್ಲಿ ವ್ಯಾಖ್ಯಾನಿಸಿದೆ ಎಂದು ಎಸ್.ವಿ.ರಾಜು ನ್ಯಾಯಪೀಠದ ಎದುರು ವಾದಿಸಿದರು.

ಮುಡಾ ನಿಯಮಗಳನ್ನು ಗಾಳಿಗೆ ತೂರಿ ಪ್ರಭಾವಿ ವ್ಯಕ್ತಿಗಳಿಗೆ ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡುವುದರಲ್ಲಿ ಆರೋಪಿತ ಅಧಿಕಾರಿಯ ನೇರ ಪಾತ್ರವಿದೆ. ಅಕ್ರಮ ಹಣ ವರ್ಗಾವಣೆಯ ಸ್ಪಷ್ಟ ಪ್ರಕರಣ ಇದಾಗಿದೆ. ಹಂಚಿಕೆಯಾಗಿರುವ ನಿವೇಶನಗಳು ಅಪರಾಧ ಕೃತ್ಯದ ಭಾಗವಾಗಿವೆ. ಸದ್ಯ ಈ ಪ್ರಕರಣ ಶೋಧನೆ ಮತ್ತು ಜಪ್ತಿ ಮಾಡುವ ಆರಂಭಿಕ ಹಂತದಲ್ಲಿದೆ. ಬಂಧನವೂ ನಂತರದ ಪ್ರಕ್ರಿಯೆಯಾಗಿದೆ. ತನಿಖೆ ಈ ಹಂತದಲ್ಲಿರುವಾಗ ನ್ಯಾಯಾಲಯಗಳು ಮಧ್ಯಪ್ರವೇಶಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ ಎಂಬುದನ್ನು ಎಎಸ್‌ಜಿ ಎಸ್.ವಿ. ರಾಜು ಉಲ್ಲೇಖಿಸಿದರು.

ಪಿಎಎಂಎಲ್‌ಎ ಕಾಯ್ದೆ ಅಡಿ ಅಪರಾಧ: ಗಂಭೀರ ಸ್ವರೂಪದ, ವಿಸ್ತಾರವಾದ ಪ್ರಕರಣದ ಕುರಿತು ಈಗಾಗಲೇ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ನಂತರವೇ ಶೋಧ ಮತ್ತಿತರ ಪ್ರಕ್ರಿಯೆಗಳನ್ನು ನಡೆಸಬೇಕು ಎನ್ನುವ ಪಿಎಂಎಲ್‌ಎ ಕಾಯ್ದೆಯ ಸಾಮಾನ್ಯ ಷರತ್ತುಗಳನ್ನು ಪೂರೈಸಲಾಗಿದೆ. ಪಿಎಂಎಲ್‌ಎ ಕಾಯ್ದೆ ಅಡಿ ಅಪರಾಧಗಳು ನಡೆದಿದೆ ಎಂದು ನಂಬಲು ಸಾಕಷ್ಟು ಕಾರಣಗಳು ಇವೆ. ತನಿಖೆಯ ಭಾಗವಾಗಿ ನಡೆಸುವ ಶೋಧನೆಗಳು ಯಶಸ್ವಿಯಾಗಿಲ್ಲ ಎಂದ ಮಾತ್ರಕ್ಕೆ ಅಕ್ರಮ ನಡೆದಿಲ್ಲ ಎಂದು ಭಾವಿಸುವಂತಿಲ್ಲ ಎಂದು ಆದಾಯ ತೆರಿಗೆ (ಐಟಿ) ಸಂಬಂಧಿಸಿದ ಪ್ರಕರಣಗಳಲ್ಲಿ ಅನೇಕ ಬಾರಿ ಸುಪ್ರೀಂಕೋರ್ಟ್ ಹೇಳಿದೆ ಎಂದು ಎಎಸ್‌ಜಿ ರಾಜು ವಾದ ಮಂಡಿಸಿದರು.

ಪಿಎಂಎಲ್‌ಎ ಸೆಕ್ಷನ್ 50ರ ಪ್ರಕಾರ, ಶೋಧನೆಗೆ ಒಳಗಾಗಿರುವ ವ್ಯಕ್ತಿಯೇ ಮುಂದೆ ಸಾಕ್ಷಿಯಾಗಬಹುದು. ಹೇಳಿಕೆ ದಾಖಲಿಸಿಕೊಳ್ಳಲು ಇ.ಡಿ ಸಮನ್ಸ್ ನೀಡಬಾರದೇ? ಇ.ಡಿ ಅಧಿಕಾರಿಗಳು ನಡೆಸಿರುವ ಶೋಧ ಕಾರ್ಯವು ಪಿಎಂಎಲ್‌ಎ ಕಾಯ್ದೆಯ ಸೆಕ್ಷನ್‌ 17ರಲ್ಲಿನ ಅಂಶಗಳಿಗೆ ವ್ಯತಿರಿಕ್ತವಾಗಿದೆ ಎಂದು ಏಕಸದಸ್ಯ ಪೀಠ ಅಭಿಪ್ರಾಯಪಟ್ಟ ಕಾರಣಕ್ಕೆ ಸಮನ್ಸ್ ನೀಡಿ ಹೇಳಿಕೆಯನ್ನೇ ದಾಖಲಿಸಿಕೊಳ್ಳಬಾರದೇ? ಎಂದು ಎಎಸ್‌ಜಿ ಎಸ್‌.ವಿ ರಾಜು ವಿಭಾಗೀಯ ಪೀಠದ ಎದುರು ವಾದಿಸಿದರು.

ಅರ್ಜಿದಾರ ಡಿ.ಬಿ. ನಟೇಶ್ ಪರ ಹಿರಿಯ ನ್ಯಾಯವಾದಿ ದುಷ್ಯಂತ್ ದಾವೆ ವಾದ ಮಂಡಿಸಿ, ಏಕಸದಸ್ಯ ಪೀಠದ ಆದೇಶ ನ್ಯಾಯಸಮ್ಮತವಾಗಿದೆ. ಸುಪ್ರೀಂಕೋರ್ಟ್‌ ನೀಡಿರುವ ಅನೇಕ ಆದೇಶಗಳ ಅನುಸಾರ ನೈಜವಾಗಿ ಮತ್ತು ಕಾನೂನು ವ್ಯಾಪ್ತಿಯಲ್ಲಿ ಸಮರ್ಥಿಸಿಕೊಳ್ಳಬಹುದಾದ ಅಂಶಗಳನ್ನು ಹೊಂದಿದೆ ಎಂದರು. ವಿಚಾರಣೆಯನ್ನು ಹೈಕೋರ್ಟ್ ಮುಂದಿನ ಸೋಮವಾರ ಮಧ್ಯಾಹ್ನ 12ಕ್ಕೆ ಮುಂದೂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ