ಕನ್ನಡಪ್ರಭ ವಾರ್ತೆ ಬಾದಾಮಿ
ಸಿಎಂ ಸಿದ್ದರಾಮಯ್ಯನವರು ಮೈಸೂರಿನಲ್ಲಿ ದಲಿತರ ಜಮೀನನ್ನು ಕಬಳಿಸಿದ್ದಾರೆ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾಡುತ್ತಿರುವ ಆರೋಪ ಸಂಪೂರ್ಣ ನಿರಾಧಾರವಾಗಿದೆ. ಇದು ರಾಜಕೀಯ ದುರುದ್ದೇಶದಿಂದ ಸಿಎಂ ಸಿದ್ದರಾಮಯ್ಯ ಇವರನ್ನು ಗುರಿಯಾಗಿಟ್ಟುಕೊಂಡು ನಡೆಯುತ್ತಿರುವ ಪಿತೂರಿಯಾಗಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಹನಮಂತ ಅಪ್ಪನ್ನವರ ಆರೋಪಿಸಿದರು.ಪಟ್ಟಣದ ಕಾಲೇಜು ರಸ್ತೆಯ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಪಾಲರ ಮೂಲಕ ನೋಟಿಸ್ ನೀಡುವ ಮೂಲಕ ಸರ್ಕಾರವನ್ನು ಅಭದ್ರಗೊಳಿಸಲು ಕೇಂದ್ರದ ಬಿಜೆಪಿ ಸರ್ಕಾರ ಯತ್ನಿಸುತ್ತಿದೆ. ಮುಡಾ ಹಗರಣ ಮುಂದಿಟ್ಟುಕೊಂಡು ಸಿದ್ದರಾಮಯ್ಯನವರಿಗೆ ಅನ್ಯಾಯವಾದರೆ ಅಹಿಂದ ಸಮುದಾಯ ಉಗ್ರ ಹೋರಾಟ ಮಾಡುತ್ತದೆ. ಸಿದ್ದು ಅವರ ಪತ್ನಿಯ ಜಮೀನುಗಳನ್ನು ಹರಾಜಿನ ಮೂಲಕ ಪಡೆದಿರುವುದರಿಂದ ಸ್ವಯಾರ್ಜಿತ ಜಮೀನಾಗುತ್ತದೆಯೇ ಹೊರತು ಈ ಜಮೀನುಗಳ ಮೇಲೆ ಸರ್ಕಾರದ ಯಾವುದೇ ಹಿತಾಸಕ್ತಿ ಇರುವುದಿಲ್ಲ. ಹಾಗಾಗಿ ಈ ಜಮೀನುಗಳು ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ. ಈ ಕುರಿತು ಕಾಯ್ದೆಯು ಸ್ಪಷ್ಟವಾಗಿ ಹೇಳುತ್ತದೆ ಎಂದರು.ಅಸಂಖ್ಯಾತ ತೀರ್ಪುಗಳೂ ಇವೆ. ಪಿಟಿಸಿಎಲ್ ಜಮೀನುಗಳು ಅಲ್ಲದ ಕಾರಣ ಸರ್ಕಾರದ ಅನುಮತಿ ಅಗತ್ಯವೂ ಇಲ್ಲ ಎಂಬುದು ಕಾನೂನಿನ ಜ್ಞಾನವಿರುವ ಪ್ರತಿಯೊಬ್ಬರಿಗೂ ತಿಳಿದಿರುತ್ತದೆ. ಆದರೆ ಬಿಜೆಪಿ, ಜೆಡಿಎಸ್ ನವರು ಮಾತ್ರ ಇದನ್ನು ರಾಜಕಾರಣಕ್ಕೆ ಬಳಸುತ್ತಿದ್ದಾರೆ ಎಂದು ಆರೋಪಿಸಿದರು.ಪುರಸಭೆ ಸದಸ್ಯ ಮಂಜುನಾಥ ಹೊಸಮನಿ ಮಾತನಾಡಿ, ಈ ಎಲ್ಲ ವ್ಯವಹಾರಗಳು 2010 ಕ್ಕಿಂತ ಮುಂಚೆ ನಡೆದಿವೆ. ಇವು ಸಿದ್ದರಾಮಯ್ಯ ನವರಿಗೆ ಸಂಬಂಧಪಟ್ಟಿದ್ದಲ್ಲ. ಆದರೂ ಸಹ ಬಿಜೆಪಿಯವರು ಈ ಸಣ್ಣ ವಿಚಾರವನ್ನು ರಾಜಕಾರಣಕ್ಕೆ ಬಳಸುತ್ತಿರುವ ಕಾರಣ ಈ ವಿಚಾರಗಳನ್ನು ಪ್ರಸ್ತಾಪಿಸಬೇಕಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಬಿ.ಎಸ್.ಬೇಲೂರಪ್ಪನ್ನವರ, ಆರ್.ಎಫ್.ಗೌಡರ, ಶಶಿಧರ ಗೌಡರ, ಬಿ.ಎಂ.ಕಂಬಳಿ, ಆರ್.ಬಿ.ಹುಲ್ಲೂರ, ಹನಮಂತ ಜೋಗಿನ, ಹುಲ್ಲಪ್ಪ ಜೇಮಕೊಳ್ಳರ, ವೈ.ವೈ.ದಳವಾಯಿ, ಬಿ.ಎಸ್.ಹಿಪ್ಪರಗಿ, ಕಾಮೇಶ ಜಾಲಿಹಾಳ, ವಿಜಯ ಹೊರಪೇಟಿ, ಬಿ.ಎಸ್.ಹನಮಸಾಗರ, ಶ್ರೀಕಾಂತಗೌಡ ಗೌಡರ, ಬೀರಪ್ಪ ಪೆಂಟಿ, ಬಿ.ಸಿ.ಬಸರಿ, ಶರಣಪ್ಪ ತಮಿನಾಳ, ಮಹಾಂತೇಶ ಕುರಿ, ಹನಮಂತ ಡೊಳ್ಳಿನ, ಎಸ್.ಆರ್.ಲಿಂಗದಾಳ, ಬಸವರಾಜ ಡೊಳ್ಳಿನ, ಎಚ್.ಎಚ್.ಬಿಳೇಲಿ, ಎಸ್.ಬಿ.ನಾಯ್ಕರ, ಎಸ್.ಕೆ.ಹೆಬ್ಬಳ್ಳಿ ಹಾಜರಿದ್ದರು.