ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದಲ್ಲಿ ಮರಿ ಮುಡಾ ಹಗರಣ ನಡೆದಿದೆ. ಹಿಂದಿನ ಬಿಜೆಪಿ ಸರ್ಕಾರದ ಆಡಳಿತದಲ್ಲಿ ನಕಲಿ ದಾಖಲೆ ಸೃಷ್ಟಿಸಿ ನಿವೇಶನಗಳನ್ನು ಕಬಳಿಸಲಾಗಿದೆ. ಈ ಬಗ್ಗೆ ಬಿಜೆಪಿ ನಾಯಕರು ಉತ್ತರಿಸಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಒತ್ತಾಯಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹುಡ್ಕೋ ಕಾಲೋನಿ ನಿವೇಶನಗಳಲ್ಲಿ ಪತ್ರಕರ್ತರು, ಬೆಂಬಲಿಗರ ಹೆಸರಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. 10 ರಿಂದ 15 ನಿವೇಶನಗಳನ್ನು ಬಿಜೆಪಿಯ ಪ್ರಭಾವಿ ನಾಯಕರ ಕಾರು ಚಾಲಕರು, ಮನೆಗೆಲಸದವರ ಹೆಸರಿಗೆ ದಾಖಲೆ ವರ್ಗಾವಣೆ ಮಾಡ ಲಾಗಿದೆ. ನೈತಿಕತೆ ಇದ್ದರೆ ಸಿಎಂ ರಾಜೀನಾಮೆ ಕೇಳುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಈ ಬಗ್ಗೆ ಸ್ಪಷ್ಟಪಡಿಸ ಬೇಕು. ಜೊತೆಗೆ ನೈತಿಕತೆ ಇದ್ದರೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಇದು ಮೈಸೂರು ಮುಡಾ ಹಗರಣಕ್ಕಿಂತ ಕಡಿಮೆ ಇಲ್ಲ. ಬಡವರ ಹೆಸರಿನಲ್ಲಿ ನಿವೇಶನಗಳು ಕಬಳಿಕೆ ಆಗಿಲ್ಲ ಎಂದು ವಾದಿಸುವುದಾರೆ, ಬಿಜೆಪಿಗರು ದಾಖಲೆ ಬಿಡುಗಡೆ ಮಾಡಬೇಕು. ಜಾತ್ರೆಯಲ್ಲಿ ಕಳ್ಳನೊಬ್ಬ ತನ್ನನ್ನು ಹಿಡಿಯಲು ಬಂದವರ ಎದುರು, ತಾನೇ ಮೋದಲು ಓಡಿ ಹೋಗಿ ಕಳ್ಳನನ್ನು ಹಿಡಿಯಿರಿ ಎಂದು ಕೂಗಿದ್ದ ನಂತೆ- ಹೀಗೆ ಬಿಜೆಪಿಗರು ವರ್ತಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ನಿಯಮಬಾಹಿರವಾಗಿ ಸಿಎ ನಿವೇಶನ ನೀಡಲಾಗಿದೆ ಎಂದು ಬಿಜೆಪಿಯ ನಾರಾಯಣ ಸ್ವಾಮಿ ಅವರು ರಾಜ್ಯಪಾಲರಿಗೆ ಹೋಗಿ ದೂರು ಕೊಟ್ಟು ಬಂದಿದ್ದಾರೆ. ಹಾಗಾದರೆ ಶಿವಮೊಗ್ಗದಲ್ಲಿ ನಡೆದಿರುವ ಹಗರಣಕ್ಕೆ ಯಾರಿಗೆ ಪತ್ರ ಕೊಡಬೇಕು. ಅಧಿಕಾರ ದುರುಪಯೋಗಪಡಿಸಿಕೊಂಡು ಕೆಐಡಿಬಿ ಮೂಲಕ ಬಡ ರೈತನ ನಾಲ್ಕು ಜಾಗವನ್ನು ಸಹ್ಯಾದ್ರಿ ನಾರಾಯಣ ಹೃದಯಾಲಯ ಆಸ್ಪತ್ರೆಗೆ ನೀಡಿದ್ದು ಯಾಕೆ?.ಆಸ್ಪತ್ರೆಯ ಮಾಲೀಕರು ಯಾರು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ನೂರಾರು ಎಕರೆಯಲ್ಲಿ ಕೈಗಾರಿಕೆ ವಸಾಹತುಗಳನ್ನು ಮಾಡಿ ಭೂಮಿ ಹಂಚುವ ಕೆಐಡಿಬಿ ಕೇವಲ ನಾಲ್ಕು ಎಕರೆ ಜಾಗವನ್ನು ಬಡ ರೈತನಿಂದ ಬಿಡಿಸಿಕೊಂಡು ಆಸ್ಪತ್ರೆಗೆ ನೀಡಲಾಯಿತು. ಅಧಿಕಾರ ದುರುಪಯೋಗ ಹೇಗೆ ಆಯಿತು ಎಂಬುದನ್ನು ಸಂಸದರು ಬಾಯಿಬಿಡಬೇಕು. ಇಲ್ಲದಿದ್ದರೆ ದಾಖಲೆ ಸಮೇತ ನಾವು ಬಹಿರಂಗಗೊಳಿಸುತ್ತೇವೆ ಎಂದು ಹೇಳಿದರು.ಜಿಲ್ಲೆಯ ಶಿಕಾರಿಪುರ ಮಾರ್ಗವಾಗಿ ಹಾದು ಹೋಗಿರುವ 57ನೇ ರಾಜ್ಯ ಹೆದ್ದಾರಿಯಾದ ಶಿವಮೊಗ್ಗ-ಹಾನಗಲ್ ನಡುವಿನ ಟೋಲ್ ಗೇಟ್ ಹಿಂದಿನ ಬಿಜೆಪಿ ಸರ್ಕಾರದ ಕೊಡುಗೆ. ಪ್ರಸ್ತುತ ಬಿಜೆಪಿಗರು ನಡೆಸುತ್ತಿರುವುದು ನಾಟಕದ ಹೋರಾಟ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ( ಕೆಆರ್‌ಡಿಸಿಎಲ್) ಮೂಲಕ ಆದಾಯದ ದೃಷ್ಟಿಯಿಂದ ತಮಗೆ ಬೇಕಾದವರಿಗೆ ಗುತ್ತಿಗೆ ಕೊಡಿಸಿ, ಸ್ವಂತ ಹಿತಾಸಕ್ತಿ ಹಾಗೂ ಹಣ ಲೂಟಿ ಮಾಡಲು ಈ ಟೋಲ್ ನಿರ್ಮಾಣ ಮಾಡಲಾಗಿದೆ. ಗುತ್ತಿಗೆದಾರರೊಂದಿಗೆ ಹಿಂದಿನ ಬಿಜೆಪಿ ಸರ್ಕಾರ ಹೊಂದಾಣಿಕೆ ಮಾಡಿಕೊಂಡಿತ್ತು ಎಂದು ಆರೋಪಿಸಿದ ಅವರು, ಪ್ರಾಮಾಣಿಕ ಬಿಜೆಪಿ ಹೋರಾಟಗಾರರು ಈ ಬಗ್ಗೆ ತಿಳಿಸಬೇಕು ಎಂದರು.
ಶಿಕಾರಿಪುರ ಮಾರ್ಗದಲ್ಲಿರುವ ಟೋಲ್‌ಗೇಟ್ ಬೆಂಗಳೂರಿನ ವಿನಯ್ ಲಾಡ್ ಎಂಟರ್ ಪ್ರೈಸಸ್ ಎನ್ನುವ ಸಂಸ್ಥೆಗೆ 1593.66 ಲಕ್ಷಕ್ಕೆ ಹಿಂದಿನ ಬಿಜೆಪಿ ಸರ್ಕಾರ ಕೊಡಿಸಿದೆ. ಅದೇ ರೀತಿ, ಗುತ್ತಿಗೆದಾರರಿಂದ 40 ತಿಂಗಳಲ್ಲಿ 12,46,26,269 ಹಣ ಸಂಗ್ರಹಿಸಲು ಸಹ ಸೂಚಿಸಿದೆ ಎಂದು ಹೇಳಿದರು.ಆದ್ದರಿಂದ, ಹಳ್ಳಿಗಾಡು ಪ್ರದೇಶದಲ್ಲಿ ಟೋಲ್‌ಗೇಟ್ ನಿರ್ಮಿಸಿರುವುದರಿಂದ ರೈತರು,ಕೂಲಿ ಕಾರ್ಮಿಕರಿಗೆ ಓಡಾಡಲು ಸಮಸ್ಯೆ ಆಗಿದೆ ಎಂದು ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತರಲಾಗಿದೆ. ಆದ್ದರಿಂದ, ಈ ಬಗ್ಗೆ ಪರಿಶೀಲಿಸಿ, ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು
ಪತ್ರಿಕಾಗೋಷ್ಟಿಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್. ರವಿ ಕುಮಾರ್, ಪ್ರಮುಖರಾದ ಬಿ.ಎ.ರಮೇಶ್ ಹೆಗ್ಡೆ, ಶ್ರೀನಿವಾಸ ಕರಿಯಣ್ಣ, ಯು.ಶಿವಾನಂದ, ಜಿ.ಡಿ. ಮಂಜುನಾಥ, ಧೀರರಾಜ ಹೊನ್ನ ವಿಲೆ, ಲಕ್ಷ್ಮಿಕಾಂತ ಚಿಮಣೂರು,ವೈ.ಎಚ್.ನಾಗರಾಜ, ಪೂರ್ಣೇಶ, ನಿರಂಜನ, ಚಾಮರಾಜ, ಎಚ್. ಎಂ.ಮಧು ಇದ್ದರು.---ಕೋಟ್:ಕಾರ್ಕಳದಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟಿಸಿದರು. ಆದರೆ, ಹಾಸನದಲ್ಲಿ ನಡೆದ ನೂರಾರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಖಂಡಿಸಿ, ಪ್ರತಿಭಟಿಸಲಿಲ್ಲವೇಕೆ?
- ಆಯನೂರು ಮಂಜುನಾಥ್, ಕೆಪಿಸಿಸಿ ವಕ್ತಾರರು.------------------------
ಪೊಟೋ: 30ಎಸ್‌ಎಂಜಿಕೆಪಿ02ಶಿವಮೊಗ್ಗ ಪತ್ರಿಕಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಮಾತನಾಡಿದರು.