ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿ: ಬಿಜೆಪಿ

KannadaprabhaNewsNetwork |  
Published : Jul 12, 2024, 01:36 AM ISTUpdated : Jul 12, 2024, 01:37 AM IST
ಸಿಕೆಬಿ-1ಸುದ್ದಿಗೋಷ್ಟಿಯಲ್ಲಿ ಮೂಡಾ ಹಗರಣದ ದಾಖಲಾತಿಗಳನ್ನು ಬಿಜೆಪಿ ನಾಯಕರು ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಕಾಂಗ್ರೆಸ್ ಸರ್ಕಾರ ಕಳೆದ ಒಂದು ವರ್ಷದಲ್ಲಿ ಹಲವು ಹಗರಣಗಳಲ್ಲಿ ಸಿಲುಕಿದೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ದೊಡ್ಡ ಲೂಟಿ ಮಾಡಿದೆ. ಮುಡಾ ಹಗರಣ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮನವರ ಹೆಸರಲ್ಲಿ 3.16 ಎಕರೆ ಜಮೀನು ಇತ್ತು. ಅದರ ಬದಲಿಗೆ ಅವರಿಗೆ 14 ನಿವೇಶನಗಳನ್ನು ಕೊಟ್ಟಿದೆ. ಅಲ್ಲಿ ನಿವೇಶನದ ಕಬಳಿಕೆಯಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮುಡಾ ಅಕ್ರಮ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ನಿಯಮಬಾಹಿರ ಕೊಟ್ಟಿರುವ ನಿವೇಶನಗಳ ಹಕ್ಕುಪತ್ರ ರದ್ದು ಪಡಿಸಬೇಕು. ಫಲಾನುಭವಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ಹೂಡುವಂತೆ ಆಗ್ರಹಿಸಿ ಶುಕ್ರವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಮುಡಾ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಎ.ವಿ.ಭೈರೇಗೌಡ ತಿಳಿಸಿದರು.

ಗುರುವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಕರಣದ ಸಾಕ್ಷ್ಯಾಧಾರಗಳನ್ನು ಗಮನಿಸಿದಾಗ ಸ್ವಜನ ಪಕ್ಷಪಾತ, ಸರ್ಕಾರಿ ಆಸ್ತಿ ಲೂಟಿ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಮತ್ತು ಎಲ್ಲಾ ನಿವೇಶನ ಮುಟ್ಟುಗೋಲು ಹಾಕಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ 13 ತಿಂಗಳ ಆಡಳಿತ ಅವಲೋಕಿಸಿದಾಗ ಬೆಲೆ ಏರಿಕೆ, ಭ್ರಷ್ಟಾಚಾರ ಹೊರತುಪಡಿಸಿ ಯಾವುದರ ಕಡೆಗೂ ಸರ್ಕಾರ ಆಸಕ್ತಿ ವಹಿಸುತ್ತಿಲ್ಲ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಬಿ.ಮುರಳಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಕಳೆದ ಒಂದು ವರ್ಷದಲ್ಲಿ ಹಲವು ಹಗರಣಗಳಲ್ಲಿ ಸಿಲುಕಿದೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ದೊಡ್ಡ ಲೂಟಿ ಮಾಡಿದೆ. ಮುಡಾ ಹಗರಣ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮನವರ ಹೆಸರಲ್ಲಿ 3.16 ಎಕರೆ ಜಮೀನು ಇತ್ತು. ಅದರ ಬದಲಿಗೆ ಅವರಿಗೆ 14 ನಿವೇಶನಗಳನ್ನು ಕೊಟ್ಟಿದೆ. ಅಲ್ಲಿ ನಿವೇಶನದ ಕಬಳಿಕೆಯಾಗಿದೆ. ಮುಖ್ಯ ಮಂತ್ರಿ ಸಮಜಾಯಿಸಿ ಕೊಡುವ ಕೆಲಸ ಮಾಡಿದ್ದಾರೆ. ಮುಡಾದಲ್ಲಿ ಉದ್ದೇಶ ಪೂರ್ವಕವಾಗಿ ಈ ಹಗರಣ ನಡೆದಿದೆ. ಬಿಡಿ ನಿವೇಶನ ಹಂಚಿಕೆಯಲ್ಲಿ ಹರಾಜು ಮಾಡಬೇಕು.ಆದರೆ, ಮುಖ್ಯಮಂತ್ರಿ ಪತ್ನಿಗೆ ನೇರವಾಗಿ ಈ ನಿವೇಶನ ಹಂಚಿಕೆ ಮಾಡಲಾಗಿದೆ. ಸಿಎಂ ಪತ್ನಿ ಕೃಷಿ ಭೂಮಿಯನ್ನು ಅಕ್ರಮ ಪಡೆದಿದ್ದಾರೆ. 3.16 ಎಕರೆ ಬದಲಿಗೆ 2 ನಿವೇಶನ ಕೊಡಬೇಕು. ಆದರೆ ನಿಯಮ ಬಾಹಿರವಾಗಿ ನಿವೇಶನ ಕೊಡಲಾಗಿದೆ. ಜನ ಸಾಮಾನ್ಯರಿಗೆ ಅಲ್ಲಿ ನಿವೇಶನ ಕೊಟ್ಟಿಲ್ಲ ಎಂದರು.

ಹಗರಣದ ಬಳಿಕ ಸಚಿವ ಭೈರತಿ ಸುರೇಶ ಅವರು ಅಲ್ಲಿನ ಅಧಿಕಾರಿಗಳ ವರ್ಗಾವಣೆ ಮಾಡಿದ್ದಾರೆ. ಅನೇಕ ಕಡತಗಳು ಅಲ್ಲಿ ಸಿಗುತ್ತಿಲ್ಲ. ಈ ಪ್ರಕರಣದಲ್ಲಿ ನ್ಯಾಯಾಂಗ ತನಿಖೆ ಆದರೆ ನ್ಯಾಯ ಸಿಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಭೈರತಿ ಸುರೇಶ್ ರಾಜೀನಾಮೆ ಕೊಡಬೇಕು. ನ್ಯಾಯಾಂಗ ಅಥವಾ ಸಿಬಿಐಗೆ ಕೊಡಲಿ. ಎಸ್ಐಟಿ ತನಿಖೆಯಲ್ಲಿ ಗಂಭೀರತೆ ಇಲ್ಲ. ಎಸ್ಐಟಿ ತುಂಬಾ ನಿಧಾನವಾಗಿ ತನಿಖೆ ಮಾಡುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾ ವಕ್ತಾರ ರಮೇಶ್ ಬಾಯರಿ ಮಾತನಾಡಿ, ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರು ಕೇಳಿ ಬರುತ್ತಿದೆ.ಆದ ಕಾರಣ ಪ್ರಕರಣವನ್ನು ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು. ಶೇ. 50ರ ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಿರುವುದಾಗಿ ಹೇಳಲಾಗುತ್ತಿದೆ. ನಿವೇಶನ ಹಂಚಿಕೆ ನಿಯಮಗಳು ಏನಿವೆ ಎನ್ನುವುದನ್ನು ಮೊದಲು ಓದಲಿ. ನಂತರ ಇದರ ಬಗ್ಗೆ ಮಾತನಾಡಲಿ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದು ನಡೆದಿದೆ. ಇದರಲ್ಲಿ ನನ್ನದೇನು ತಪ್ಪಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅವರು ತಮ್ಮ ಪತ್ನಿ ಹೆಸರಲ್ಲಿ ಸೈಟ್ ತೆಗೆದುಕೊಂಡಿದ್ದಾರೆ. ಆದರೀಗ ತಪ್ಪು ಮಾಹಿತಿ ಕೊಡುವ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಅವರ ಪಾತ್ರವಿದೆ. ಹೀಗಾಗಿ ಸಿಎಂ ಸಂಪೂರ್ಣ ಜವಾಬ್ದಾರಿಯಾಗುತ್ತಾರೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ಕೊಟ್ಟರೆ ಪರಿಪೂರ್ಣ ಸತ್ಯ ಹೊರ ಬೀಳುತ್ತದೆ ಎಂದರು.

ಹಗರಣಗಳ ಕುರಿತು ಮುಡಾದ ಮುಂದೆ ಜು.12 ರಂದು ದೊಡ್ಡ ಹೋರಾಟ ಮಾಡಲಿದ್ದೇವೆ. ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ರಾಜ್ಯಾದ್ಯಂತ ಬಿಜೆಪಿ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಮುಡಾ ಹಗರಣದ ದಾಖಲಾತಿಗಳನ್ನು ಬಿಡುಗಡೆ ಮಾಡಿದರು.

ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪರಿಷತ್ ಸದಸ್ಯರಾದ ಶ್ರೀನಿವಾಸ್, ಲಕ್ಷ್ಮೀಪತಿ, ಜಿಲ್ಲಾ ಕಾರ್ಯದರ್ಶಿ ಆರ್,ಎಚ್,ಎನ್,ಅಶೋಕ್, ಸಹವಕ್ತಾರ ದೇವಸ್ಥಾನದ ಹೊಸಹಳ್ಳಿ ರಾಮಣ್ಣ, ಜಿಲ್ಲಾ ಮಾಧ್ಯಮ ಸಂಚಾಲಕ ವಿ.ಮಧುಚಂದ್ರ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ