ಉಡುಪಿ: ಇಲ್ಲಿನ ಕಾಪು ತಾಲೂಕಿನ ಮುದರಂಗಡಿ ಎಂಬಲ್ಲಿ ಕಾಂಗ್ರೆಸ್ ನಾಯಕ, ಗುತ್ತಿಗೆದಾರ ಡೇವಿಜ್ ಡಿಸೋಜನ ಕೊಲೆಗೆ ಬಾಡಿಗೆ ಹಂತಕರನ್ನು ಕಳುಹಿಸಿದ್ದ ಮುಂಬೈಯ ಕುಖ್ಯಾತ ಗಾಂಗ್‌ಸ್ಟರ್ ಅನುಜ್ ಪಾಟೀಲ್ (35) ಎಂಬಾತನನ್ನು ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ.ಆದರೆ ಆತ, ಬಂಧಿಸಿ ಕರೆತರುವಾಗ ಸೋಮವಾರ ಮುಂಜಾನೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ, ಈ ಸಂದರ್ಭದಲ್ಲಿ ಪೊಲೀಸರು ಆತನ ಕಾಲಿಗೆ ಗುಂಡು ಹೊಡೆದು ವಶಕ್ಕೆ ತೆಗೆದುಕೊಂಡಿದ್ದಾರೆ. ಸದ್ಯ ಆತ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾನೆ.ಪ್ರಕರಣದ ವಿವರ: ಆ. 7ರಂದು ಹಾಡಹಗಲೇ ಮುದರಂಗಡಿ ಚರ್ಚ್ ಮುಂದೆ ಡೇವಿಡ್ ಡಿಸೋಜನನ್ನು ಬೈಕಿನಲ್ಲಿ ಬಂದ ಹಂತಕರು ಇಂಚುಗಳ ಅಂತರದಲ್ಲಿ ತಲೆಗೆ ಗುಂಡಿಕ್ಕಿ ಕೊಲೆ ಮಾಡಿ ಪರಾರಿಯಾಗಿದ್ದರು. ನಂತರ ಪೊಲೀಸರು 3 ಮಂದಿ ಸುಪಾರಿ ಹಂತಕರನ್ನು ಬಂಧಿಸಿದ್ದು, ಅವರನ್ನು ಅನುಜ್ ಪಾಟೀಲ್ ನ ಈ ಕೃತ್ಯಕ್ಕೆ ನಿಯೋಜಿಸಿದ್ದು ತನಿಖೆಯ ವೇಳೆ ಪತ್ತೆಯಾಗಿತ್ತು.ಎಸೈ ಸಮಯಪ್ರಜ್ಞೆ : ಮೂಲತಃ ಬಿಹಾರದ ನಳಂದದವನಾದ ಅನುಜ್ ಪಾಟೀಲನನ್ನು, ಕೊಲ್ಲೂರು ಠಾಣೆಯ ಎಸೈ ವಿನಯ್ ಮತ್ತು ಕುಂದಾಪುರ ಠಾಣೆಯ ಎಸೈ ನಂಜಾ ನಾಯ್ಕ್ ಅವರು ಬೆಳಗಾವಿಯ ನಿಪ್ಪಾಣಿಯಲ್ಲಿ ಪತ್ತೆ ಮಾಡಿ ಬಂಧಿಸಿ, ಬಿಗಿ ಭದ್ರತೆಯಲ್ಲಿ ಉಡುಪಿಗೆ ಕರೆ ತರುತ್ತಿದ್ದರು. ಸೋಮವಾರ ಮುಂಜಾನೆ 6.30ಕ್ಕೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕನ್ನು ಪ್ರವೇಶಿಸಿದ ನಂತರ ಪಾಟೀಲ್ ಮೂತ್ರ ವಿಸರ್ಜನೆಗೆ ಅವಕಾಶ ಕೇಳಿದ, ಅದರಂತೆ ಆತನನ್ನು ವಾಹನದಿಂದ ಕೆಳಕ್ಕೆ ಇಳಿಸಿದಾಗ, ಆತ ಎಸೈ ವಿನಯ್ ಅವರ ಪಿಸ್ತೂಲನ್ನು ಕಸಿದುಕೊಂಡು ಪೊಲೀಸರತ್ತ ಗುಂಡು ಹಾರಿಸಿದ, ತಕ್ಷಣ ಎಸೈ ನಂಜಾ ನಾಯ್ಕ್ ಸಮಯಪ್ರಜ್ಞೆಯಿಂದ ಪಾಟೀಲ್‌ನ ಕಾಲಿಗೆ ಗುಂಡು ಹಾರಿಸಿ, ಆತ ಕೆಳಗೆ ಬೀಳುವಂತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. 4 ರಾಜ್ಯ, 10 ಕೊಲೆ: ಈ ಪಾಟೀಲ್ ಮುಂಬೈಯನ್ನು ಕೇಂದ್ರಸ್ಥಾನವಾಗಿ ಕಾರ್ಯಾಚರಿಸುತ್ತಿದ್ದು, ದೇಶದ ಬಹುತೇಕ ರಾಜ್ಯಗಳಲ್ಲಿ ಈತನ ಮೇಲೆ ಪ್ರಕರಣಗಳಿವೆ. 2017 ರಲ್ಲಿ ಜೈಲಿನಿಂದ ಬಿಡುಗಡೆಯಾದ ಮೇಲೆ ತಲೆಮರಿಸಿಕೊಂಡಿದ್ದು, ಮಹಾರಾಷ್ಟ್ರದಲ್ಲಿ ಸಶಸ್ತ್ರ (ಎಂಕೋಕ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈತನ ವಿರುದ್ಧ ಸದ್ಯದ ಮಾಹಿತಿಯಂತೆ ಮಹಾರಾಷ್ಟ್ರದಲ್ಲಿ 4, ಗುಜರಾತಿನಲ್ಲಿ 5, ದಿಯು-ದಾಮನ್ ಮತ್ತು ಕರ್ನಾಟಕದಲ್ಲಿ ತಲಾ 1 ಸೇರಿ 11 ಪ್ರಕರಣಗಳಿದ್ದು, ಅವುಗಳಲ್ಲಿ 10 ಆಯುಧಗಳಿಂದ ಕೊಲೆ ಮಾಡಿದ ಪ್ರಕರಣಗಳೇ ಆಗಿವೆ.