ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಹಿಂದೆ ರಾಜ ಮಹಾರಾಜರ ಕಾಲದಲ್ಲೂ ಸೇನೆಯಲ್ಲಿದ್ದ ಮುಧೋಳ ನಾಯಿ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಸೇನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿಯೇ ಪ್ರಧಾನಮಂತ್ರಿಗಳು ತಮ್ಮ ಜನಪ್ರಿಯ ಮನ್ ಕೀ ಬಾತ್ ನಲ್ಲಿ ಎರಡನೇ ಸಲ ಮುಧೋಳ ಹೌಂಡ್ ಬಗ್ಗೆ ಮಾತನಾಡಿದ್ದಾರೆ. ಆ ಮೂಲಕ ಮತ್ತೊಮ್ಮೆ ಮುಧೋಳ ಶ್ವಾನದ ಕಡೆಗೆ ಇಡೀ ದೇಶದ ಜನರ ಚಿತ್ತ ಹರಿಯುವಂತೆ ಮಾಡಿದ್ದಾರೆ.
ಮುಧೋಳ ಶ್ವಾನಗಳ ಬಗ್ಗೆ ಪ್ರಧಾನಿ ಹೇಳಿದ್ದೇನು..?ಪ್ರಧಾನಿ ನರೇಂದ್ರ ಮೋದಿ ಅವರು 5 ವರ್ಷಗಳ ಹಿಂದೆ ಇದೇ ಮನ್ ಕೀ ಬಾತ್‌ನಲ್ಲಿ ಪ್ರಸ್ತಾಪಿಸಿದ್ದ ಮುಧೋಳ ಹೌಂಡ್ ಬಗ್ಗೆ ಮರು ಪ್ರಸ್ತಾಪ ಮಾಡಿದ್ದಾರೆ. ಅಂದು ದೇಶಿಯ ಶ್ವಾನಗಳನ್ನು ಸಾಕಿ ಬೆಳೆಸಿ, ಅವು(ಮುಧೋಳ ಹೌಂಡ್ ಸೇರಿ ದೇಶಿ ತಳಿ) ನಮ್ಮ ವಾತಾವರಣ ಹಾಗೂ ಪರಿಸ್ಥಿತಿಗೆ ಹೆಚ್ಚು ಸರಳವಾಗಿ ಹೊಂದಿಕೊಳ್ಳುತ್ತವೆ ಎಂದು ಹೇಳಿದ್ದರು.
ಹಿಂದಿನ ವರ್ಷ ಲಕ್ನೋದಲ್ಲಿ ಆಲ್ ಇಂಡಿಯಾ ಪೊಲೀಸ್ ಮೀಟ್ ಕಾರ್ಯಕ್ರಮದಲ್ಲಿ ರಿಯಾ ಹೆಸರಿನ ಮುಧೋಳ ಹೌಂಡ್ ವಿಶೇಷವಾಗಿ ಜನರ ಗಮನವನ್ನು ತನ್ನತ್ತ ಸೆಳೆದಿತ್ತು ಎಂದು ಉಲ್ಲೇಖಿಸಿದ ಪ್ರಧಾನಿ ಮೋದಿ, ರಿಯಾ ಪ್ರದರ್ಶನದಲ್ಲಿ ಎಷ್ಟೋ ವಿದೇಶಿ ತಳಿಯ ಶ್ವಾನಗಳನ್ನು ಸೋಲಿಸಿ ಬಹುಮಾನ ಗೆದ್ದಿದ್ದನ್ನು ಮೆಲುಕು ಹಾಕಿದರು.
ಸದ್ಯ ಮುಧೋಳ ಶ್ವಾನ ಸಂವರ್ಧನ ಕೇಂದ್ರಗಳಲ್ಲಿ 30 ಗಂಡು ಮತ್ತು 8 ಹೆಣ್ಣು ಶ್ವಾನಗಳಿವೆ. ಪ್ರಸಿದ್ಧ ಮುಧೋಳ ಶ್ವಾನಗಳನ್ನು ಇತ್ತೀಚೆಗೆ ಓಡಿಸ್ಸಾದ ಸಿಐಡಿಗೆ ಐದು ಮರಿ ನೀಡಲಾಗಿದೆ. ಅದರಲ್ಲಿ ನಾಲ್ಕು ಗಂಡು ಹಾಗೂ ಒಂದು ಹೆಣ್ಣು ಮರಿ ಇದೆ. ಸದ್ಯ ಬಿಎಸ್ಎಫ್ ತರಬೇತಿಗೂ ಮುಧೋಳ ಹೌಂಡ್ ಹೋಗಿದ್ದು, ಹೆಮ್ಮೆಯ ವಿಚಾರವಾಗಿದೆ. ಬೀದರ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿವಿ ಕುಲಪತಿ ಕೆ.ಸಿ.ವೀರಣ್ಣ ಹಾಗೂ ನಿರ್ದೇಶಕ ಡಾ.ಬಿ.ವಿ.ಶಿವಪ್ರಕಾಶ ಅವರ ಮಾರ್ಗದರ್ಶನ ಹಾಗೂ ವಿಶೇಷ ಆಸಕ್ತಿಯಿಂದ ತಿಮ್ಮಾಪುರ ಊರಿನಲ್ಲಿರುವ ಮುಧೋಳ ಶ್ವಾನ ಸಂವರ್ಧನ ಕೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
-ಡಾ.ಶಿವಲಿಂಗಪ್ಪ ಮುಕರ್ತನಾಳಪ್ರಭಾರ ಮುಖ್ಯಸ್ಥರು, ಮುಧೋಳ ಶ್ವಾನ ಸಂವರ್ಧನ ಕೇಂದ್ರ ಮುಧೋಳ