ಕನ್ನಡಪ್ರಭ ವಾರ್ತೆ ಮಂಗಳೂರು
ಎಜು ಕಾರಣ್ಯ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಮಂಗಳೂರು ವತಿಯಿಂದ ಹಿರಿಯ ಪತ್ರಕರ್ತ ದಿ.ಗುರುವಪ್ಪ ಎನ್.ಟಿ.ಬಾಳೆಪುಣಿ ಸ್ಮರಣಾರ್ಥ ಶೈಕ್ಷಣಿಕ ದತ್ತಿನಿಧಿ ಹಸ್ತಾಂತರ ಕಾರ್ಯಕ್ರಮ ಶನಿವಾರ ಮುಡಿಪು ಜನ ಶಿಕ್ಷಣ ಟ್ರಸ್ಟ್ ಸಭಾಂಗಣದಲ್ಲಿ ನಡೆಯಲಿದೆ.ಬೆಳಗ್ಗೆ ೧೦ ಗಂಟೆಗೆ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಉದ್ಘಾಟನೆ ನೆರವೇರಿಸುವರು. ಉದ್ಯಮಿ ರಾಧಾಕೃಷ್ಣ ರೈ ಶೈಕ್ಷಣಿಕ ದತ್ತಿನಿಧಿ ಹಸ್ತಾಂತರಿಸಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನರಿಂಗಾನ ಕಂಬಳೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ ಕಾಜವ, ಪೊಸ ಕುರಲ್ ವಾಹಿನಿಯ ಆಡಳಿತ ನಿರ್ದೇಶಕ ವಿದ್ಯಾಧರ ಶೆಟ್ಟಿ, ಅಬ್ಬಕ್ಕ ಟಿವಿಯ ಆಡಳಿತ ನಿರ್ದೇಶಕ ಶಶಿಧರ ಪೊಯ್ಯತ್ತಬೈಲ್ ಭಾಗವಹಿಸಲಿದ್ದಾರೆ.ಕಾವೂರು ಬಿಜಿಎಸ್ ಕಾಲೇಜಿನಲ್ಲಿ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ೯೫.೦೫ ಶೇಕಡಾ ಅಂಕಗಳೊಂದಿಗೆ ತೇರ್ಗಡೆಯಾಗಿ ತ್ರಿಶಾ ಕಾಲೇಜಿನಲ್ಲಿ ಬಿಸಿಎ ಮಾಡಲಿರುವ ಧೃತಿ ಕುಂಜತ್‌ಬೈಲ್ ಅವರಿಗೆ ೪೭,೦೦೦ ರು., ಮೊಡಂಕಾಪು ದೀಪಿಕಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವ ಭೂಮಿಕಾ ಅವರಿಗೆ ೨೦,೦೦೦ ರು. ಹಾಗೂ ಮಂಗಳೂರಿನ ಕೆನರಾ ಪದವಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಂ(ಸಿಎ) ಕಲಿಯುತ್ತಿರುವ ಮೇಘಾ ಸಜಿಪ ಇವರಿಗೆ ೩೮,೨೫೦ ರು. ನೀಡಲಾಗುವುದು.ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಅಧ್ಯಕ್ಷ ಮೋಹನ್ ದಾಸ್ ಮರಕಡ, ಕಾರ್ಯದರ್ಶಿ ರಮೇಶ್ ಶೆಟ್ಟಿ, ಕಾರ್ಯಕ್ರಮ ಸಂಯೋಜಕ ಅನ್ಸಾರ್ ಇನೋಳಿ ಇರುವರು.ಬಾಳೇಪುಣಿ ಹೆಸರನ್ನು ಚಿರಸ್ಥಾಯಿಯಾಗಿರಿಸುವ ನಿಟ್ಟಿನಲ್ಲಿ ಈ ಯೋಜನೆ ಆರಂಭವಾಗಿದ್ದು, ಬಡತನದಲ್ಲಿರುವ ಮತ್ತು ಕಲಿಕೆಯಲ್ಲಿ ಮುಂದಿರುವ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಶೈಕ್ಷಣಿಕ ನೆರವು ನೀಡಲಾಗುತ್ತಿದೆ. ಸಮಾಜದ ದಾನಿಗಳು, ಬಾಳೇಪುಣಿಯವರ ಅಭಿಮಾನಿಗಳು, ಹಿತೈಷಿಗಳು ಈ ಕಾರ್ಯಕ್ಕೆ ಸಾಥ್ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ.