ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗ ತಾಲೂಕಿನ ಬಚ್ಚಬೋರನಹಟ್ಟಿ ಹಾಗೂ ಗುಡ್ಡದರಂಗವ್ವನ ಹಳ್ಳಿ ಗ್ರಾಮದಲ್ಲಿ ಮುಸ್ಲಿಂ ಕುಟುಂಬಗಳೇ ಇಲ್ಲದಿದ್ದರೂ, ಹಿಂದೂ ಧರ್ಮದ ಗ್ರಾಮಸ್ಥರೆಲ್ಲರೂ ಸೇರಿ ಮೊಹರಂ ಹಬ್ಬವನ್ನು ಸೌಹಾರ್ಧತೆ ಮತ್ತು ವೈಭವದಿಂದ ಆಚರಿಸಿದರು. ಚಿತ್ರದುರ್ಗದಿಂದ ಮುಸ್ಲಿಂ ಸಮುದಾಯದವರನ್ನು ಆಹ್ವಾನಿಸಿ, ಸತತ 10 ದಿನಗಳ ಕಾಲ ಮೊಹರಂ ಹಬ್ಬವನ್ನು ಆಚರಿಸಿದ್ದು, ಹಬ್ಬದ ಕೊನೆಯ ದಿನವಾದ ಗುರುವಾರ ರಾತ್ರಿ ಭಕ್ತರು ದೇವರಿಗೆ ಮಂಡಕ್ಕಿ, ಸಕ್ಕರೆ, ಬೆಲ್ಲ ಹಾಗೂ ಕೆಂಪುದಾರವನ್ನು ಅರ್ಪಿಸಿ ತಮ್ಮ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರು. ಹರಕೆ ಹೊತ್ತ ನೂರಾರು ಭಕ್ತರು ದೇವರಿಗೆ ಬೆಲ್ಲ, ಅಕ್ಕಿ, ಖರ್ಜೂರ ಹಾಗೂ ಕಾಸಿನ ತುಲಾಭಾರ ಸಲ್ಲಿಸಿದರು.
ಪೀರಲ ಹಬ್ಬದ ಆಚರಣೆಯಲ್ಲಿ ‘ಅಳ್ಳೊಳ್ಳಿ ಬುಕ್ಕಾ’ ವೇಷಧಾರಿಗಳ ವಿಶೇಷ ಆಕರ್ಷಣೆ ಗಮನ ಸೆಳೆಯಿತು.ಕರಿಯ ಕಂಬಳಿಗೆ ಬಣ್ಣದ ಬಟ್ಟೆಗಳ ಚುರುಗಳನ್ನು ಕುಚ್ಚುಗಳನ್ನಾಗಿ ಮಾಡಿಕೊಂಡು ಧರಿಸಿದ ವೇಷ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯಿತು. ಕಾಲಿನ ಗೆಜ್ಜೆ, ಸೊಂಟದ ಘಂಟೆಯ ಸದ್ದು, ಅಡಿಕೆ ಎಲೆಯ ದಬ್ಬೆ ಹಿಡಿದು, ಮುಖವಾಡ ಹಾಕಿಕೊಳ್ಳುವ ‘ಅಳ್ಳೊಳ್ಳಿ ಬುಕ್ಕಾ’ ವೇಷಧಾರಿಗಳು ಪೀರಲ ಹಬ್ಬದಲ್ಲಿ ಭರಪೂರ ಮನೋರಂಜನೆ ನೀಡಿದರು.ಹಬ್ಬದ ಅಂಗವಾಗಿ ಗ್ರಾಮದ ಹೊನ್ನೂರಸ್ವಾಮಿ ಗುಡಿ ಮುಂಭಾಗದಲ್ಲಿ ಯುವಕರು ಮುಖಕ್ಕೆ ಬಣ್ಣ ಬಳಿದು, ವಿವಿಧ ವೇಷಭೂಷಣಗಳನ್ನು ಧರಿಸಿ ಡೋಲು ಮತ್ತು ತಮಟೆಗಳ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಗಟ್ಟಿಯಾಗಿ ಘೋಷಣೆ ಕೂಗುತ್ತಾ ಹೆಜ್ಜೆ ಮೇಳ ಪ್ರದರ್ಶಿಸಿ ಹರಕೆ ತೀರಿಸಿದರು.
ಚಿತ್ರದುರ್ಗ ನಗರದಲ್ಲಿ ಮುಸ್ಲಿಂ ಬಾಂಧವರು ಆಲೆ ದೇವರ ಹೊತ್ತ ಕುಣಿದರು. ಸಂಜೆ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದರು. ದೇವರಿಗೆ ಹೂಗಳಿಂದ ಅಲಂಕರಿಸಿ ಭಕ್ತಿ ಭಾವ ಪ್ರದರ್ಶಿಸಿದರು.