ಬಿ. ರಾಮಪ್ರಸಾದ್ ಗಾಂಧಿ
ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ಇಲ್ಲದಿದ್ದರೂ ಪ್ರತಿವರ್ಷ ಗ್ರಾಮಸ್ಥರು ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಪಂಜಾ ಪ್ರತಿಷ್ಠಾಪಿಸಿ ಅಲಾಯಿ ದೇವರಿಗೆ ಭಕ್ತಿ ಭಾವದಿಂದ ಪೂಜಿಸುತ್ತಾರೆ.
ಗ್ರಾಮದಲ್ಲಿ ಲಿಂಗಾಯತರು, ಕುರುಬ, ಕಮ್ಮಾರ, ಗೊಲ್ಲ ಸೇರಿ ಇತರ ಸಮುದಾಯದವರೇ ನಿವಾಸಿಗಳಾಗಿದ್ದಾರೆ. ಆದರೂ ಪೂರ್ವಜರ ಕಾಲದಿಂದಲೂ ಮೊಹರಂ ಆಚರಣೆ ಮಾಡುತ್ತಾ ಬಂದಿದ್ದಾರೆ.ಮೊಹರಂ ಹಬ್ಬದ ಅಂಗವಾಗಿ ಸಮೀಪದ ಹುಲಿಕಟ್ಟಿ ಗ್ರಾಮದ ಮುಸ್ಲಿಂ ಸಮುದಾಯದ ವ್ಯಕ್ತಿರೊಬ್ಬರನ್ನು ಊರಿಗೆ ಕರೆಯಿಸಿ ಅವರ ಮಾರ್ಗದರ್ಶನದಲ್ಲಿ ಕಳೆದ ಐದು ದಿನ ಅಲಾಯಿ ದೇವರ ಪೂಜೆ, ಪುನಸ್ಕಾರ, ಧಾರ್ಮಿಕ ವಿಧಿ-ವಿಧಾನಗಳನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಿ, ಮೊಹರಂ ಕೊನೆಯ ದಿನ ಬುಧವಾರ ಮೆರವಣಿಗೆ ನಡೆಸಲಾಯಿತು.
ಮೊಹರಂ ಅಂತಿಮ ದಿನ ಬೆಳಗಿನ ಜಾವ ಅಲಾಯಿ ದೇವರ ಅಗ್ನಿ ಹಾಯುವ ಆಚರಣೆ ನಡೆಯಿತು. ಆನಂತರ ಸಂಜೆ ಗ್ರಾಮದ ಹೊರವಲಯದ ಬಳಿ ಅಲಾಯಿ ದೇವರಿಗೆ ಗಂಗೆ ಪೂಜೆ ನರೆವೇರಿಸಿ, ಬಳಿಕ ಮೂಲಸ್ಥಾನಕ್ಕೆ ಅಲಾಯಿ ದೇವರನ್ನು ಕರೆತಂದು ಕೂರಿಸಲಾಯಿತು.ಪೂರ್ವಜರ ಕಾಲದಿಂದಲೂ ಗ್ರಾಮದಲ್ಲಿ ಮೊಹರಂ ಹಬ್ಬ ಆಚರಣೆ ಮಾಡುತ್ತ ಬರಲಾಗಿದೆ. ಯಾವುದೇ ಜಾತಿ ಭೇದವಲ್ಲದೇ ಈ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸುತ್ತೇವೆ ಎಂದು ಗ್ರಾಮದ ಟ್ರಸ್ಟ್ ಕಮಿಟಿ ಅಧ್ಯಕ್ಷ ಕೌಟಿ ದೇವೇಂದ್ರಪ್ಪ ಹೇಳುತ್ತಾರೆ.