ಧಾರವಾಡದಲ್ಲಿ ತ್ಯಾಗ-ಬಲಿದಾನದ ಮೊಹರಂ ಆಚರಣೆ

KannadaprabhaNewsNetwork |  
Published : Jul 06, 2025, 11:48 PM IST
6ಡಿಡಬ್ಲೂಡಿ7ಮೊಹರಂ ಹಬ್ಬದಾಚರಣೆ ನಿಮಿತ್ತ ಧಾರವಾಡದಲ್ಲಿ ಇರಾನಿ ಮುಸ್ಲಿಂ ಸಮುದಾಯದ ಸದಸ್ಯರು ಎದೆಗೆ ಬಡಿದುಕೊಂಡು ರಕ್ತ ಚೆಲ್ಲಿ ಹಸೇನ್‌-ಹುಸೇನರ ತ್ಯಾಗ ಸ್ಮರಿಸಿದರು.  | Kannada Prabha

ಸಾರಾಂಶ

ಯಾ ಹಸೇನ್...ಯಾ ಹುಸೇನ್‌...ಎಂದು ಅವರ ತ್ಯಾಗ ಸ್ಮರಿಸುತ್ತಾ ಶಸ್ತ್ರಗಳಿಂದ ಚುಚ್ಚಿಕೊಂಡು ಇರಾನಿ ಸಮುದಾಯದ ಜನ ತಮ್ಮ ರಕ್ತವನ್ನೇ ಚೆಲ್ಲಿದರು.

ಧಾರವಾಡ: ಭಾವೈಕ್ಯತೆ ಹಾಗೂ ತ್ಯಾಗದ ಪ್ರತೀಕವಾಗಿರುವ ಮೊಹರಂ ಹಬ್ಬವನ್ನು ಭಾನುವಾರ ಧಾರವಾಡ ನಗರ ಹಾಗೂ ಗ್ರಾಮೀಣ ಜಿಲ್ಲೆಯಲ್ಲಿ ಭಕ್ತಿಯಿಂದ ಆಚರಿಸಲಾಯಿತು.

ಹಸೇನ್‌- ಹುಸೇನ್‌ರ ತ್ಯಾಗ ನೆನಪಿಸುವ ಹಬ್ಬ ಇದಾಗಿದ್ದು, ಬರೀ ಮುಸ್ಲಿಂ ಮಾತ್ರವಲ್ಲದೇ ಹಿಂದೂಗಳು ಸಹ ಆಚರಿಸುವ ಹಬ್ಬವು ಹೌದು.

ಭಯ ಹುಟ್ಟಿಸುವ ಇರಾನಿ ಆಚರಣೆ:

ಇಲ್ಲಿಯ ಇರಾನಿ ಜನರು ಮೊಹರಂನ್ನು ವಿಶೇಷವಾಗಿ ಆಚರಿಸುತ್ತಾರೆ. ಅವರ ಆಚರಣೆ ಎಂತವರಿಗೂ ಭಯ ಮೂಡಿಸುತ್ತದೆ. ಹೊಸಯಲ್ಲಾಪುರದಲ್ಲಿ ಮೊಹರಂ ಹಬ್ಬವನ್ನು ಇರಾನಿ ಮುಸ್ಲಿಮರು ವಿಶಿಷ್ಟವಾಗಿ ಆಯುಧ (ಬ್ಲೇಡ್‌)ನಿಂದ ಎದೆಗೆ ಹೊಡೆದುಕೊಂಡು ಯಾ ಹುಸೇನ್..ಯಾ ಹುಸೇನ್...ಎನ್ನುತ್ತಾ ದೇಹ ದಂಡಿಸಿ ಆಚರಣೆ ಮಾಡಿದರು. ಜನ್ನತ್ ನಗರದ ಮಸಜ್ಜಿದ್‌ದಿಂದ ಆರಂಭವಾದ ಇರಾನಿ ಮುಸ್ಲಿಮರ ಪಂಜಾಗಳ ಮೆರವಣಿಗೆ ಧಾರವಾಡ ಟೋಲ್ ನಾಕಾ ಮಾರ್ಗವಾಗಿ ಹೊಸ ಯಲ್ಲಾಪುರದ ನುಚ್ಚಂಬ್ಲಿ ಬಾವಿಯವರೆಗೆ ಸಾಗಿತು.

ಯಾ ಹಸೇನ್...ಯಾ ಹುಸೇನ್‌...ಎಂದು ಅವರ ತ್ಯಾಗ ಸ್ಮರಿಸುತ್ತಾ ಶಸ್ತ್ರಗಳಿಂದ ಚುಚ್ಚಿಕೊಂಡು ಇರಾನಿ ಸಮುದಾಯದ ಜನ ತಮ್ಮ ರಕ್ತವನ್ನೇ ಚೆಲ್ಲಿದರು. ಪ್ರತಿ ವರ್ಷ ಮೊಹರಂ ಹಬ್ಬದಂದು ಇವರು ತಮ್ಮ ಎದೆಗೆ ಬ್ಲೇಡ್‌ನಿಂದ ಹೊಡೆದುಕೊಳ್ಳುವ ಮೂಲಕ ರಕ್ತ ಚೆಲ್ಲಿ ಮೊಹರಂ ಹಬ್ಬ ಆಚರಿಸುವುದು ಪದ್ಧತಿ. ಈ ಪದ್ಧತಿ ನೋಡಲು ನಗರದಿಂದ ನೂರಾರು ಜನರು ಆಗಮಿಸುತ್ತಾರೆ.

ಇನ್ನು, ಉಪ್ಪಿನಬೆಟಗೇರಿಯ ಹದಿಮೂರುಕೇಣಿ ಓಣಿಯ ಬಾರಾಇಮಾಮ ಜಮಾತ ಆವರಣದಲ್ಲಿ ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಪಾಂಚಾ ಹೊತ್ತ ಯುವಕರು ಬೆಂಕಿಯ ಕಿಚ್ಚದಲ್ಲಿ ಹಾಯ್ದು ಮೊಹರಂ ಹಬ್ಬಕ್ಕೆ ಚಾಲನೆ ನೀಡಿದರೆ, ಹಿಂದೂ-ಮುಸ್ಲಿಂ ಸಮುದಾಯ ಪಾಲ್ಗೊಳ್ಳುವ ಮೂಲಕ ಭಾವೈಕ್ಯತೆ ಮೆರೆಯಲಾಯಿತು.

ಈ ವೇಳೆ ಹಸೇನ್ ಹುಸೇನ್ ಕೀ ದೋಸ್ತರ ದಿನ್..ಬಿ ಪಾತಿಮಾ ಕೀ ದೋಸ್ತರ ದಿನ್‌‌....ಬಾರಾ ಇಮಾಮ ಕೀ ದೋಸ್ತರ ದಿನ್ ಎಂಬ ಘೋಷಣೆ ಮೊಳಗಿದವು. ಇದಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಮಂಜುನಾಥ ಸಂಕಣ್ಣವರ ಮಾತನಾಡಿ, ಹಿಂದೂ-ಮುಸ್ಲಿಂ ಕೂಡಿ ಆಚರಿಸುವ ಹಬ್ಬವಿದು. ಈ ಭಾವದ ಪರಂಪರೆ ಗ್ರಾಮದಲ್ಲಿ ನೆಲೆಸಿರುವ ಕಾರಣ ಶಾಂತಿ ನೆಲೆಸಿದ್ದು, ಭಾವೈಕ್ಯತೆಗೆ ಕಾರಣವಾಗಿದೆ ಎಂದರು.

ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಬಾಬಾಮೊಹಿದ್ದೀನ್ ಚೌಧರಿ ಮಾತನಾಡಿ, ಮೊಹರಂ ಹಬ್ಬ ತ್ಯಾಗ-ಬಲಿದಾನದ ಮಹತ್ವ ಸಾರುವ ಹಬ್ಬವಿದು. ಸತ್ಯ-ಅಸತ್ಯದ ಅರಿವಿನ ಮಾರ್ಗ ತೋರಿಸುವ ಇದು ಬರೀ ಮುಸ್ಲಿಂ ಸಮುದಾಯಕ್ಕೆ ಸೀಮಿತವಿಲ್ಲ. ಹಿಂದೂ ಧರ್ಮದವರಿಷ್ಟೇ ಅಲ್ಲದೇ ಎಲ್ಲ ಸಮುದಾಯಕ್ಕೂಸನ್ಮಾರ್ಗ ನೀಡುವ ದಾರಿದೀಪ ಎಂದರು.

ಇದಕ್ಕೂ ಮುನ್ನ ಮಸೀದಿಯಲ್ಲಿ ಪ್ರತಿಷ್ಠಾಪಿಸಿದ್ದ ಬಾರಾಇಮಾಮ ಪಾಂಚಾಗಳಿಗೆ ಪ್ರಾರ್ಥನೆ ಸಲ್ಲಿಸಿ,ಇಷ್ಟಾರ್ಥ ಈಡೇರಿಕೆಗಾಗಿ ಪ್ರಾರ್ಥಿಸಲಾಯಿತು. ಇದಲ್ಲದೇ ಹರಕೆ ತೀರಿಸಲಾಯಿತು.ಈ ಸಂದರ್ಭದಲ್ಲಿ ಹಿರಿಯರಾದ ಹಜರೇಸಾಬ್‌ ಪೀರಣ್ಣವರ, ಮುಸ್ತಾಕ ಮಕಾಂದರ, ದಸ್ತಗಿರಸಾಬ್‌ ನದಾಫ್, ಅಣ್ಣಪ್ಪ ನೀಲವಾಣಿ, ಗಂಗಪ್ಪ ಮಡಿವಾಳರ, ಈರಣ್ಣ ಮಡಿವಾಳರ, ಗ್ರಾಪಂ‌ ಸದಸ್ಯ ಮುಸ್ತಾಪ ನದಾಫ್, ಮಕ್ತುಂಸಾಬ್‌ ತಟಗಾರ,ಮಹಮ್ಮದಸಾಬ ಕರೋಲಿ, ಇಸ್ಮಾಯಿಲ್ ಸಾಬ ಹನುಮನಾಳ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!