ಶ್ಯಾಡಂಬಿ ಗ್ರಾಮದಲ್ಲಿ ಹಿಂದೂಗಳಿಂದಲೇ ಮೊಹರಂ

KannadaprabhaNewsNetwork | Published : Jul 18, 2024 1:31 AM

ಸಾರಾಂಶ

ಶಿಗ್ಗಾಂವಿ ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ಮುಸ್ಲಿಂರು ಇಲ್ಲದಿದ್ದರೂ ಹಿಂದೂಗಳೇ ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಶಿಗ್ಗಾಂವಿ: ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ಮುಸ್ಲಿಂರು ಇಲ್ಲದಿದ್ದರೂ ಹಿಂದೂಗಳೇ ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಗ್ರಾಮದಲ್ಲಿ ೧೨೦ ಮನೆ, ೭೦೦ ಜನಸಂಖ್ಯೆ ಇದೆ. ಒಂದೇ ಒಂದು ಮುಸ್ಲಿಂ ಮನೆ ಇಲ್ಲದಿದ್ದರೂ ಹಿಂದೂಗಳೇ ಮೊಹರಂ ಆಚರಿಸುತ್ತಾರೆ. ಪಕ್ಕದ ಕುನ್ನೂರ ಗ್ರಾಮದ ಮುಸ್ಲಿಂ ಸಮುದಾಯದ ಹಿರಿಯರು ಬಂದು ಓದಿಕೆ ಹಾಕಿ ವಿಧಿ ವಿಧಾನಗಳನ್ನು ನೆರವೇರಿಸುತ್ತಾರೆ.

ಗ್ರಾಮದಲ್ಲಿ ಮೊದಲು ಒಂದು ಡೋಲಿ ಮಾತ್ರ ಇತ್ತು. ನಂತರ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿದ ನಂತರ ಕೈ ದೇವರುಗಳನ್ನು ಭಕ್ತರು ಹರಕೆ ಸಲ್ಲಿಸಿದ್ದು, ಐದು ಪಂಜಾಗಳನ್ನು ಸಹ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಮೊಹರಂ ಕೊನೆಯ ದಿನದಂದು ಹಿಂದೂ ಯುವಕರೇ ಪಂಜಾಗಳನ್ನು ಹಿಡಿದು ಡೋಲಿಯನ್ನು ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾರೆ. ಪಂಜಾಗಳಿಗೆ ವಿಶೇಷ ಪೂಜೆ ಮತ್ತು ನೈವೇದ್ಯಗಳನ್ನು ಸಲ್ಲಿಸಿ ಇಷ್ಟಾರ್ಥಗಳನ್ನು ಈಡೇರಿಸುವಂತೆ ಕೇಳಿಕೊಳ್ಳುತ್ತಾರೆ. ಕತ್ತಲ ರಾತ್ರಿ ದಿನದಂದು ಮೌಲಾ ಅಲಿ, ಬೀಬಿ ಫಾತೀಮಾ, ಹಸೇನ್, ಹುಸೇನ ದೇವರ ಪಂಜಾಗಳಿಗೆ ಗ್ರಾಮಸ್ಥರು ವಿಶೇಷ ಪೂಜೆ, ಸಕ್ಕರೆ ನೈವೇದ್ಯವನ್ನು ನೆರವೇರಿಸಿ ಹರಕೆ ತೀರಿಸುತ್ತಾರೆ. ಕೆಂಡ ಹಾಯುವ ಕಾರ್ಯಕ್ರಮಕ್ಕೆ ಸಹಸ್ರಾರು ಜನರು ಸೇರುತ್ತಾರೆ.

ಪ್ರತಿ ವರ್ಷ ಗ್ರಾಮದ ದೇವಸ್ಥಾನದ ದ್ಯಾಮವ್ವ ದೇವಿ ಮುಂಭಾಗದಲ್ಲಿ ಪಂಜಾಗಳ ಪ್ರತಿಷ್ಠಾಪನೆ ಮಾಡಿ ಐದು ದಿನಗಳವರೆಗೆ ವಿಶೇಷ ಪೂಜೆ ಮಾಡಲಾಗುತ್ತದೆ.

ನಮ್ಮೂರಲ್ಲಿ ಮುಸಲ್ಮಾನ ಸಮುದಾಯದವರು ಇಲ್ಲದಿದ್ದರೂ ಎಲ್ಲರೂ ಒಗ್ಗೂಡಿ ಪ್ರತಿ ವರ್ಷ ಮೊಹರಂ ಆಚರಿಸುತ್ತ ಬಂದಿದ್ದೇವೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಕೈಲಾದ ಸೇವೆಯನ್ನು ಮಾಡುತ್ತಿದ್ದೇವೆ ಎನ್ನುತ್ತಾರೆ ಲ್ಯಾಂಡ್‌ ಲಾರ್ಡ್‌ ವರುಣಗೌಡ್ರ ಪಾಟೀಲ.

''''ಗ್ರಾಮದಲ್ಲಿ ಪೂರ್ವಜರ ಕಾಲದಿಂದಲೂ ಮೊಹರಂ ಆಚರಿಸುತ್ತಾ ಬರಲಾಗಿತ್ತು. ಕೆಲ ಕಾಲ ಕೆಲವು ಕಾರಣಗಳಿಂದ ಅದು ನಿಂತು ಹೋಗಿತ್ತು. ಯುವಕರೆಲ್ಲರೂ ಸೇರಿ ಮತ್ತೆ ಮೊಹರಂ ಆಚರಣೆ ಮಾಡುತ್ತಿದ್ದಾರೆ. ಗ್ರಾಮಸ್ಥರು ಎಲ್ಲರೂ ಸಾಧ್ಯವಾದಷ್ಟು ದೇಣಿಗೆ ನೀಡುತ್ತಾರೆ. ನಮ್ಮ ಹಳ್ಳಿಗೆ ದೇವರು ಒಳಿತು ಮಾಡಿದ್ದಾನೆ'''' ಎನ್ನುತ್ತಾರೆ ಗ್ರಾಮದ ಯುವಕ ಶರೀಫ ಮಾಕಪ್ಪನವರ.

ಕಳೆದ ಒಂದು ತಿಂಗಳಿಂದಲೆ ಯುವಕರು ಹಬ್ಬದ ತಯಾರಿ ಮಾಡುತ್ತಾ ರಿವಾಯತ ಹಾಡುಗಳಿಗೆ ಹೆಜ್ಜೆ ಹಾಕುತ್ತ ಸಂಭ್ರಮಿಸುತ್ತಾರೆ. ಕೊನೆಯ ದಿನ ದೇವರನ್ನು ಹೊಳೆಗೆ ಕಳುಹಿಸುವ ಆಚರಣೆ ವೇಳೆ ಗ್ರಾಮಸ್ಥರು ಡೋಲಿ ಮತ್ತು ಪಂಜಾ ದೇವರುಗಳಿಗೆ ಬೆಲ್ಲ ಎಸೆಯುತ್ತಾರೆ.

Share this article