ಶಿರಸಿ: ಜನಸಂಘದ ಸಂಸ್ಥಾಪಕ ಅಧ್ಯಕ್ಷ ಡಾ. ಶ್ಯಾಮಪ್ರಸಾದ ಮುಖರ್ಜಿ ಜನ್ಮದಿನದ ಪ್ರಯುಕ್ತ ಬಿಜೆಪಿ ನಗರ ಮಂಡಳದ ವತಿಯಿಂದ ನಗರದ ಬನವಾಸಿ ರಸ್ತೆಯ ನಿರ್ಮಲನಗರದ ಉದ್ಯಾನದಲ್ಲಿ ವನಮಹೋತ್ಸವ ಆಚರಿಸಲಾಯಿತು.
ಶ್ಯಾಮಪ್ರಸಾದ ಮುಖರ್ಜಿ ಭಾವಚಿತ್ರಕ್ಕೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಬಿಜೆಪಿ ಮುಖಂಡರು ಪುಷ್ಪಾರ್ಚನೆ ಮಾಡಿದರು.ಆನಂತರ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ದೇಶದ ಏಕತೆ, ಅಖಂಡತೆ, ಸಮಗ್ರತೆ ರಕ್ಷಿಸಬೇಕು ಎಂಬ ಕನಸು ಕಂಡು, ತ್ಯಾಗ-ಬಲಿದಾನ ಮಾಡಿದ ಗಣ್ಯರ ಸಾಲಿನಲ್ಲಿ ಶ್ಯಾಮಪ್ರಸಾದ ಮುಖರ್ಜಿ ನಿಲ್ಲುತ್ತಾರೆ. ೧೯೦೧ ಜು. ೬ರಂದು ಕೋಲ್ಕತ್ತಾದಲ್ಲಿ ಜನಿಸಿದ ಮುಖರ್ಜಿ, ಶಾಸಕರಾಗಿ ಆಯ್ಕೆಯಾಗಿ, ಆನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಅತಿ ಚಿಕ್ಕ ವಯಸ್ಸಿನಲ್ಲಿ ಕೋಲ್ಕತ್ತಾದ ವಿಶ್ವವಿದ್ಯಾಲಯದಲ್ಲಿ ೨ ಬಾರಿ ಉಪ ಕುಲಪತಿಗಳಾಗಿದ್ದರು ಎಂದರು.
ದೇಶದ ಮೊದಲ ಪ್ರಧಾನಿ ಜವಾಹಲಾಲ್ ನೆಹರು ಪಾಕಿಸ್ತಾನದ ಬಗ್ಗೆ ತಾಳುತ್ತಿರುವ ನಿಲುವು ಆಕ್ರೋಶಕ್ಕೆ ಗುರಿಯಾಗಿತ್ತು. ಇಂದಿನ ಕಾಂಗ್ರೆಸ್‌ನ ಓಲೈಕೆ ರಾಜಕಾರಣವನ್ನು ಆಗ ನೆಹರು ಸಹ ಅನುಸರಿಸಿದ್ದರು. ದೇಶದ ವಿಭಜನೆಗೆ ಕಾರಣರಾಗಿದ್ದರು. ಕಾಂಗ್ರೆಸ್‌ನ ಈ ಧೋರಣೆ ಸಹಿಸದೇ, ಸಚಿವ ಸ್ಥಾನಕ್ಕೆ ನೀಡಿ, ೧೯೫೧ರಲ್ಲಿ ಗುರೂಜಿ ಭೇಟಿ ಮಾಡಿ ಭಾರತದ ಧರ್ಮ, ಸಂಸ್ಕೃತಿ ಅಡಿಯಲ್ಲಿ ರಾಜಕೀಯ ಪಕ್ಷ ಆಗಬೇಕು ಎಂದು ನಿರ್ಣಯವಾಗಿ ಜನಸಂಘ ಸ್ಥಾಪನೆ ಮಾಡಿದರು. ಜನಸಂಘದ ಮೊದಲ ಅಧ್ಯಕ್ಷರಾಗಿ ಶ್ಯಾಮಪ್ರಸಾದ ಮುಖರ್ಜಿ ಆಯ್ಕೆಯಾದರು. ಕಾಶ್ಮೀರಕ್ಕೆ ನೀಡಿದ ಆರ್ಟಿಕಲ್ ೩೭೦ ರದ್ದಾಗಬೇಕು ಎಂಬ ರಾಷ್ಟ್ರೀಯ ಅಧಿವೇಶನದಲ್ಲಿ ನಿರ್ಣಯ ಕೈಗೊಂಡು ಕಾಶ್ಮೀರ ಚಲೋ ಹೋರಾಟ ಮಾಡಿದರು. ಆಗ ನೆಹರು ಅವರು ಮುಖರ್ಜಿ ಅವರನ್ನು ಬಂಧಿಸಿ ೪೫ ದಿನಗಳು ಜೈಲಿನಟ್ಟಿದ್ದರು. ಆನಂತರ ನಿಗೂಢವಾಗಿ ಬಲಿಯಾದರು. ಇನ್ನೂ ಅವರ ಸಾವು ನಿಗೂಢತೆಯಲ್ಲಿದ್ದು, ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿರುವಂತೆ ನೋಡಿಕೊಂಡಿರುವುದು ಜನಸಂಘ ಹಾಗೂ ಬಿಜೆಪಿ. ಶ್ಯಾಮಪ್ರಸಾದ ಮುಖರ್ಜಿ ಕೇವಲ ಬಿಜೆಪಿ ನಾಯಕರು ಮಾತ್ರವಲ್ಲದೇ, ರಾಷ್ಟ್ರದ ನಾಯಕರು. ಕಾಂಗ್ರೆಸ್ ನೆಹರು ಕುಟುಂಬವೇ ದೊಡ್ಡದು ಎಂದು ಕಾಂಗ್ರೆಸ್ ಬಿಂಬಿಸುತ್ತಿದೆ. ಶ್ಯಾಮಪ್ರಸಾದ ಮುಖರ್ಜಿ, ದೀನ ದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಅನೇಕ ಗಣ್ಯರು ನಮ್ಮ ರಾಷ್ಟ್ರ ಪುರುಷರಾಗಿದ್ದಾರೆ ಎಂದರು.ನಗರ ಮಂಡಲಾಧ್ಯಕ್ಷ ಆನಂದ ಸಾಲೇರ ಮಾತನಾಡಿ, ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ ಮುಖರ್ಜಿ ಕಂಡ ಕನಸಾಗಿದೆ. ಅವರು ಕಟ್ಟಿದ ಪಕ್ಷ ಹೆಮ್ಮರವಾಗಿ ಬೆಳೆದಿದೆ. ಅವರ ಕಂಡ ಕನಸನ್ನು ನಾವೆಲ್ಲರೂ ಜತೆಗೂಡಿ ನನಸಾಗಿಸಬೇಕು ಎಂದು ಹೇಳಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಬೋರ್ಕರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ, ನಗರಸಭೆ ಸದಸ್ಯ ಗಣಪತಿ ನಾಯ್ಕ, ವೀಣಾ ಶೆಟ್ಟಿ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ, ಪ್ರಮುಖರಾದ ರಮಾಕಾಂತ ಭಟ್, ಬಾಲಚಂದ್ರ ಮೇಸ್ತ, ಉದಯಕುಮಾರ ಕಾನಳ್ಳಿ ಇದ್ದರು. ನಂತರ ಉದ್ಯಾನದಲ್ಲಿ ಆಗಮಿಸಿದ ಪ್ರತಿಯೊಬ್ಬರೂ ಗಿಡ ನೆಡುವುದರ ಮೂಲಕ ವನಮಹೋತ್ಸವ ಆಚರಿಸಿದರು.ಗಿಡ ನೆಡಲು ಕರೆ: ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬರು ತಾಯಿ ಹೆಸರಿನಲ್ಲಿ ಒಂದು ಗಿಡ ನೆಡುವ ಮೂಲಕ ಜಾಗತಿಕ ತಾಪಮಾನ ಇಳಿಕೆಗೆ ಕೈಜೋಡಿಸಲು ಕರೆ ನೀಡಿದ್ದಾರೆ. ನಾವೆಲ್ಲರೂ ತಂದೆ-ತಾಯಿ, ಗುರುಹಿರಿಯರು ಹೆಸರಿನಲ್ಲಿ ಗಿಡ ನೆಟ್ಟು ಅಭಿಯಾನಕ್ಕೆ ಕೈಜೋಡಿಸೋಣ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ ನೀಡಿದರು.
ಡಾ. ಶ್ಯಾಮಪ್ರಸಾದ ಮುಖರ್ಜಿ ಸ್ಮರಣೆಯಲ್ಲಿ ರಕ್ತದಾನ ಶಿಬಿರರಕ್ತದಾನ ಶ್ರೇಷ್ಠವಾದುದು. ರಕ್ತದಾನ ಮಾಡುವುದು ಆರೋಗ್ಯಕ್ಕೂ ಒಳ್ಳೆಯದು, ಸಮಾಜಕ್ಕೂ ಒಳ್ಳೆಯದು. ರಕ್ತದಾನಿಗೆ ಒಂದು ಜೀವ ಉಳಿಸಿದ ಪುಣ್ಯ ಸಲ್ಲುತ್ತದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಕುಮಟಾದಲ್ಲಿ ಬಿಜೆಪಿ ಮಂಡಲದ ಹಿಂದುಳಿದ ಮೋರ್ಚಾ ವತಿಯಿಂದ ಡಾ. ಶ್ಯಾಮಾಪ್ರಸಾದ ಮುಖರ್ಜಿ ಸ್ಮರಣೆಯಲ್ಲಿ ಉತ್ತರ ಕನ್ನಡ ಬ್ಲಡ್ ಬ್ಯಾಂಕಿನಲ್ಲಿ ಶನಿವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.ಡಾ. ಜಿ.ಜಿ. ಹೆಗಡೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಡೆಂಘೀ ರಾಜ್ಯದಲ್ಲೆಡೆ ಹರಡುತ್ತಿದ್ದು, ಈ ಮಾರಕ ಕಾಯಿಲೆಯಲ್ಲಿ ರಕ್ತದಲ್ಲಿಯ ಪ್ಲೆಟ್‌ಲೆಟ್ ಕಣಗಳು ತೀವ್ರಗತಿಯಲ್ಲಿ ಕುಗ್ಗುತ್ತದೆ. ಇಂಥ ಸಂದರ್ಭದಲ್ಲಿ ತಕ್ಷಣವೇ ರಕ್ತದ ಪ್ಲೇಟ್‌ಲೆಟ್‌ಗಳನ್ನು ರೋಗಿಗೆ ನೀಡಬೇಕು. ಒಬ್ಬ ವ್ಯಕ್ತಿಗೆ ೮-೧೦ ಯೂನಿಟ್‌ಗಳಷ್ಟು ಪ್ಲೇಟ್‌ಲೆಟ್ ಬೇಕಾಗುತ್ತದೆ. ಬ್ಲಡ್‌ಬ್ಯಾಂಕ್‌ನಲ್ಲಿ ರಕ್ತದ ಯೂನಿಟ್ ಸಂಗ್ರಹ ಇದ್ದಾಗ ಮಾತ್ರ ಸುಲಭ ಸಾಧ್ಯವಾಗುತ್ತದೆ. ಆದ್ದರಿಂದ ರಕ್ತದಾನ ಜಾಗೃತಿಯಾಗಲಿ ಎಂದರು.
ಹಿಂದುಳಿದ ಮೋರ್ಚಾ ಅಧ್ಯಕ್ಷ ಶ್ರೀಧರ ಗೌಡ, ಮಂಡಲ ಅಧ್ಯಕ್ಷ ಜಿ.ಐ. ಹೆಗಡೆ, ಎಸ್‌ಸಿ ಮೋರ್ಚಾ ಅಧ್ಯಕ್ಷೆ ಮಂಜುಳಾ ಮುಕ್ರಿ, ಅನುರಾಧಾ ಭಟ್, ಕಿಶನ್ ಗಣಪತಿ ಹೆಗಡೆ, ಸುಚಿತ್ ಎಚ್.ಎನ್. ಇನ್ನಿತರರು ರಕ್ತದಾನ ಮಾಡಿದರು.ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಾ ಶೇಟ್, ಜಿ.ಎಸ್. ಗುನಗಾ, ಹೆಗಡೆ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಪಟಗಾರ, ವಿನಾಯಕ ನಾಯ್ಕ, ಪುರಸಭೆ ಸದಸ್ಯರಾದ ಮೋಹಿನಿ ಗೌಡ, ಸಂತೋಷ ನಾಯ್ಕ, ತುಳಸು ಗೌಡ, ಶೈಲಾ ಗೌಡ, ಕೃಷ್ಣ ನಾಯ್ಕ, ಪಲ್ಲವಿ ಮಡಿವಾಳ, ಪುಷ್ಪಾ ಶೇಟ್, ಕೇಶವ ಮಡಿವಾಳ, ಯುವ ಮೋರ್ಚಾದ ಧೀರಜ ನಾಯ್ಡು ಇನ್ನಿತರರು ಇದ್ದರು.