ರಾಜ್ಯ ಕಾಂಗ್ರೆಸ್ ಸರ್ಕಾರವು ಹಲವು ದಶಕಗಳಿಂದ ನಾಡಿನ ನೈಸರ್ಗಿಕ ಸಂಪತ್ತು ಲೂಟಿ ಮಾಡಿ ಸಾವಿರಾರು ಕೋಟಿ ರು. ನಷ್ಟ ಉಂಟು ಮಾಡಿರುವ ಲೂಟಿಕೋರರಿಗೆ ಒಟಿಎಸ್(ಒನ್ ಟೈಂ ಸೆಟ್ಲ್‌ಮೆಂಟ್) ಸೌಲಭ್ಯ ನೀಡುವ ಮೂಲಕ ಅವರ ಪರ ನಿಂತಿದೆ - ಡಾ.ಮುಖ್ಯಮಂತ್ರಿ ಚಂದ್ರು ಖಂಡಿಸಿದ್ದಾರೆ.
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರವು ಹಲವು ದಶಕಗಳಿಂದ ನಾಡಿನ ನೈಸರ್ಗಿಕ ಸಂಪತ್ತು ಲೂಟಿ ಮಾಡಿ ಸಾವಿರಾರು ಕೋಟಿ ರು. ನಷ್ಟ ಉಂಟು ಮಾಡಿರುವ ಲೂಟಿಕೋರರಿಗೆ ಒಟಿಎಸ್(ಒನ್ ಟೈಂ ಸೆಟ್ಲ್‌ಮೆಂಟ್) ಸೌಲಭ್ಯ ನೀಡುವ ಮೂಲಕ ಅವರ ಪರ ನಿಂತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಖಂಡಿಸಿದ್ದಾರೆ.
ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿರುವ ಅವರು, ರಾಜ್ಯದಲ್ಲಿ ಅನೇಕ ಕಂಪನಿಗಳು ಕ್ರಮಬದ್ಧವಾಗಿ ಗಣಿಗಾರಿಕೆ ನಡೆಸಿಕೊಂಡು ರಾಯಧನ ಸೇರಿ ಅನೇಕ ತೆರಿಗೆಗಳನ್ನು ಪ್ರಾಮಾಣಿಕವಾಗಿ ಪಾವತಿ ಮಾಡಿಕೊಂಡು ಬರುತ್ತಿವೆ. ಇವರಿಗೆ ಉತ್ತೇಜನ ನೀಡುವ ಬದಲು ಈ ಒಟಿಎಸ್ ನೀತಿಯು ಅಕ್ರಮ ಗಣಿಗಾರಿಕೆಗೆ ಮತ್ತಷ್ಟು ಪ್ರೋತ್ಸಾಹ ನೀಡುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ರಮ ಗಣಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡು ಆಸ್ತಿ ಜಫ್ತಿ ಮಾಡಿಕೊಂಡು ದಂಡದ ಮೊತ್ತವನ್ನು ವಸೂಲಿ ಮಾಡಿದ್ದರೆ ಅದಕ್ಕೆ ಅರ್ಥ ಬರುತ್ತದೆ. ಅದನ್ನು ಬಿಟ್ಟು ಅಕ್ರಮ ಗಣಿಗಾರಿಕೆಗೆ ಮತ್ತಷ್ಟು ಅವಕಾಶ ನೀಡುವ ರೀತಿಯಲ್ಲಿ ಈ ರೀತಿಯ ಅನಿಷ್ಟ ಪದ್ಧತಿಯನ್ನು ಜಾರಿಗೆ ತಂದರೆ ರಾಜ್ಯವು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ.
ಅಕ್ರಮ ಗಣಿಗಾರಿಕೆಯು ರಾಜ್ಯದಲ್ಲಿ ಹಲವು ದಶಕಗಳಿಂದ ಎಗ್ಗಿಲ್ಲದೆ ನಡೆದುಕೊಂಡು ಬರುತ್ತಿದ್ದು ರಾಜ್ಯದ ಪ್ರತಿಷ್ಠೆಗೆ ಕಪ್ಪು ಮಸಿ ಬಳಿದಿದೆ. ಈಗಾಗಲೇ ರಾಜ್ಯದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿ ಲಕ್ಷಾಂತರ ಕೋಟಿ ರು. ವಂಚನೆ ಮಾಡಿರುವ ನೂರಾರು ಪ್ರಕರಣ ರಾಜ್ಯದಲ್ಲಿ ದಾಖಲಾಗಿವೆ. ಜನಾರ್ಧನರೆಡ್ಡಿ, ಸತೀಶ್ ಸೈಲ್ ಸೇರಿ ಅನೇಕ ರಾಜಕಾರಣಿಗಳು ಜೈಲು ಪಾಲಾಗಿದ್ದುದು ನಮ್ಮ ಕಣ್ಮುಂದೆ ಇದೆ ಎಂದು ಅವರು ವಿವರಿಸಿದ್ದಾರೆ.
ರಾಜ್ಯದ ಅಕ್ರಮ ಗಣಿಗಾರಿಕೆಗಳ ಬಹುಪಾಲು ರಾಜಕಾರಣಿಗಳು ಹಾಗೂ ಅವರ ಸಂಬಂಧಿಕರಿಗೆ ಸೇರಿವೆ. ರಾಜ್ಯವನ್ನಾಳಿರುವ ಮೂರೂ ಪಕ್ಷಗಳ ಸರ್ಕಾರಗಳು ಅಕ್ರಮ ಗಣಿಗಾರಿಕೆಯನ್ನು ಸಂಪೂರ್ಣ ನಿಲ್ಲಿಸಲು ಎಳ್ಳಷ್ಟೂ ಮನಸ್ಸು ಮಾಡದೆ ಮಾಲೀಕರೊಂದಿಗೆ ಕೈಜೋಡಿಸಿರುವುದು ಇದೀಗ ಜಾರಿಗೆ ತಂದಿರುವ ಒಟಿಎಸ್ ನೀತಿಯಿಂದಾಗಿ ಸ್ಪಷ್ಟವಾಗುತ್ತಿದೆ ಎಂದು ಟೀಕಿಸಿದ್ದಾರೆ.
ರಾಜ್ಯದ ನೈಸರ್ಗಿಕ ಸಂಪತ್ತನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸುವ ಮಹತ್ವದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆದ್ದರಿಂದ ಕೂಡಲೇ ಈ ತಪ್ಪನ್ನು ಸರಿಪಡಿಸಿಕೊಂಡು ಈ ಅನಿಷ್ಟ ಓಟಿಎಸ್ ನೀತಿಯನ್ನು ರದ್ದುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.