ಮೀನು ಹಿಡಿಯುವ ಕಾರ್ಯಕ್ರಮ ಕಂಡೇವುದ ಆಯನಕ್ಕೆ ಚಾಲನೆ

KannadaprabhaNewsNetwork |  
Published : May 15, 2024, 01:38 AM IST
ತುಳುನಾಡಿನ ಕೊನೆಯ ಜಾತ್ರೆ ಖಂಡಿಗೆ  ಕ್ಷೇತ್ರದಲ್ಲಿ ಮೀನು ಹಿಡಿಯುವ ಸಂಪ್ರದಾಯ | Kannada Prabha

ಸಾರಾಂಶ

ಸಂಕ್ರಮಣದಂದು ಬೆಳ್ಳಂಬೆಳಗ್ಗೆ ಕಂಡೇವು ಬೀಡಿನ ಮುಕ್ಕಾಲ್ಲಿ ದೈವದ ಪ್ರಸಾದ ತಂದು ಹೊಳೆಗೆ ಹಾಕುತ್ತಾರೆ. ಆ ಬಳಿಕ ಸಿಡಿಮದ್ದು ಸಿಡಿಸಿ ಎಲ್ಲರೂ ಹೊಳೆಗೆ ಇಳಿದು ಮೀನು ಹಿಡಿಯಲು ಅನುಮತಿಸಲಾಗುತ್ತದೆ. ಆಗ ಬಲೆಗಳೊಂದಿಗೆ ಎಲ್ಲರೂ ಹೊಳೆಗೆ ಹಾರಿ ಮೀನು ಹಿಡಿಯುತ್ತಾರೆ.

ಕನ್ನಡಪ್ರಭವಾರ್ತೆ ಮೂಲ್ಕಿ

ಎರ್ಮಾಳು ಜಪ್ಪು, ಖಂಡೇವು ಅಡೆಪ್ಪು ಎಂಬ ತುಳು ನಾಡಿನ ನಾಣ್ಣುಡಿಯಂತೆ ಮೇ ತಿಂಗಳ ವೃಷಭ ಸಂಕ್ರಮಣದಂದು ಬರುವ ತುಳುನಾಡಿನ ಪ್ರಸ್ತುತ ಸಾಲಿನ ಕೊನೆಯ ಜಾತ್ರೆಯಾದ ಚೇಳಾಯರು ಖಂಡಿಗೆ ಧರ್ಮರಸು ಶ್ರೀ ಉಳ್ಳಾಯ ದೈವಸ್ಥಾನದಲ್ಲಿ ಮಂಗಳವಾರ ಸಂಕ್ರಮಣ ಬೆಳಗ್ಗೆ ಮೀನು ಹಿಡಿಯುವ ಕಾರ್ಯಕ್ರಮ ಮೂಲಕ ಕಂಡೇವುದ ಆಯನಕ್ಕೆ ಚಾಲನೆ ನೀಡಲಾಯಿತು.

ಸೂರ್ಯ ಉದಯವಾಗುವ ಹೊತ್ತಿನಲ್ಲಿ ಖಂಡಿಗೆಯ ಕ್ಷೇತ್ರದ ಬಳಿ ನಂದಿನಿ ನದಿಗೆ ಏಕಕಾಲದಲ್ಲಿ ನೂರಾರು ಮಂದಿ ಹಾರಿ ಮೀನು ಹಿಡಿಯಲಾರಂಭಿಸತ್ತಾರೆ. ಮತ್ಸ್ಯ ಬೇಟೆಯ ಹಿಂದೆ ತುಳುನಾಡಿನ ವಿಶಿಷ್ಟ ಆಚರಣೆಯ ಹಿನ್ನೆಲೆಯಿದೆ. ಹಳೆಯಂಗಡಿ ಸಮೀಪದ ಕಂಡೇವು ಎಂದು ತುಳುವಿನಲ್ಲಿ ಕರೆಯಲ್ಪಡುವ ಖಂಡಿಗೆ ಶ್ರೀಧರ್ಮಅರಸು ಉಳ್ಳಾಯ ದೈವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ನಂದಿನಿ ನದಿಯಲ್ಲಿ ಮೀನುಬೇಟೆ ನಡೆಯುತ್ತದೆ. ತುಳುವಿನ ಪಗ್ಗು ಸಂಕ್ರಮಣ ಅಂದರೆ ಮೇ ತಿಂಗಳ ಮಧ್ಯಭಾಗದಲ್ಲಿ ಇಲ್ಲಿನ ಜಾತ್ರಾಮಹೋತ್ಸವ. ಉಳ್ಳಾಯ ದೈವದ ದೈವಸ್ಥಾನದ ಮುಂಭಾಗದ ನಂದಿನಿ ಹೊಳೆಯ ಕಂಡೇವು ಕರಿಯದಲ್ಲಿ ಉತ್ಸವದ ಅಂಗವಾಗಿ ನಿಗದಿಪಡಿಸಿದ ದಿನದಂದು ಇಲ್ಲಿನ ಗ್ರಾಮದ ಜನರು ಮೀನು ಹಿಡಿಯುತ್ತಾರೆ. ಈ ದಿನದ ಹೊರತು ಬೇರೆ ದಿನಗಳಲ್ಲಿ ಇಲ್ಲಿ ಮೀನು ಹಿಡಿಯುವುದು ನಿಷೇಧವಿದೆ. ಸಂಪ್ರದಾಯ ಮೀರಿ ಮೀನು ಹಿಡಿದರೆ ಬಲೆಗೆ ಹಾವು ಬೀಳುತ್ತದೆ ಎಂಬ ನಂಬಿಕೆಯಿದೆ.

ಸಂಕ್ರಮಣದಂದು ಬೆಳ್ಳಂಬೆಳಗ್ಗೆ ಕಂಡೇವು ಬೀಡಿನ ಮುಕ್ಕಾಲ್ಲಿ ದೈವದ ಪ್ರಸಾದ ತಂದು ಹೊಳೆಗೆ ಹಾಕುತ್ತಾರೆ. ಆ ಬಳಿಕ ಸಿಡಿಮದ್ದು ಸಿಡಿಸಿ ಎಲ್ಲರೂ ಹೊಳೆಗೆ ಇಳಿದು ಮೀನು ಹಿಡಿಯಲು ಅನುಮತಿಸಲಾಗುತ್ತದೆ. ಆಗ ಬಲೆಗಳೊಂದಿಗೆ ಎಲ್ಲರೂ ಹೊಳೆಗೆ ಹಾರಿ ಮೀನು ಹಿಡಿಯುತ್ತಾರೆ. ಹೊಳೆಯ ಎರಡೂ ಬದಿಗಳಲ್ಲಿ ನಿಂತ ನೂರಾರು ಮಂದಿ ಏಕಕಾಲದಲ್ಲಿ ನೀರಿಗೆ ಹಾರುವುದನ್ನು ನೋಡುವುದೇ ಒಂದು ಚಂದ. ಮೀನು ಹಿಡಿದವರು ತಮಗೆ ಬೇಕಾದಷ್ಟು ಉಳಿಸಿ ಉಳಿದವುಗಳನ್ನು ಅಲ್ಲಿಯೇ ಮಾರಾಟ ಮಾಡುತ್ತಾರೆ. ಕೊಂಚ ಹೆಚ್ಚ ಬೆಲೆ ತೆತ್ತಾದರೂ ಗ್ರಾಮಸ್ಥರು ಇಲ್ಲಿ ಮೀನು ಖರೀದಿಸುತ್ತಾರೆ.ಉಳ್ಳಾಯ ಎಂದರೆ ತುಳುವಿನಲ್ಲಿ ಒಡೆಯ ಎಂದರ್ಥ. ಉಳ್ಳಾಯ ದೈವವೂ ನಿರ್ದಿಷ್ಟ ಕ್ಷೇತ್ರಕ್ಕೆ ಒಡೆಯ. ಆತನ ಅಧೀನಕ್ಕೊಳಪಟ್ಟ ಪ್ರದೇಶದ ಮೀನುಗಳೂ ಆತನದ್ದೇ ಆಗಿರುತ್ತದೆ. ಆದ್ದರಿಂದ ಆತನ ಒಪ್ಪಿಗೆಯಿಲ್ಲದೆ ಮೀನುಗಳ ಬೇಟೆ ಸಾಧ್ಯವಿಲ್ಲ. ಆದರೆ ವರ್ಷಕ್ಕೊಮ್ಮೆ ಇಲ್ಲಿನ ಮೀನುಗಳನ್ನು ಹಿಡಿಯಲು ಉಳ್ಳಾಯನೇ ಅನುಮತಿಸುತ್ತಾನೆ. ಈ ದಿನ ಎಲ್ಲರೂ ಜೊತೆಯಾಗಿ ಮೀನು ಹಿಡಿದು ಉಳ್ಳಾಯನ ಪ್ರಸಾದವೇ ಎಂಬಂತೆ ಸ್ವೀಕರಿಸುತ್ತಾರೆ. ಇತ್ತೀಚೆಗೆ ಕೆಲವು ವರ್ಷಗಳಿಂದ ನಂದಿನಿ ನೀರು ಕಲುಷಿತಗೊಂಡಿರುವುದರಿಂದ ಮೀನು ಹಿಡಿಯುವವರ, ಮೀನು ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ.ಚಿತ್ರ:14ಖಂಡಿಗೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌