ಮೂಲ್ಕಿಗೆ ಬೇಕಿದೆ ಶಾಶ್ವತ ಕುಡಿಯುವ ನೀರಿನ ಯೋಜನೆ

KannadaprabhaNewsNetwork |  
Published : Feb 26, 2024, 01:31 AM IST
ಮೂಲ್ಕಿಗೆ ಅಗತ್ಯವಿದೆ ಶಾಶ್ವತ ಕುಡಿಯುವ ನೀರಿನ ಯೋಜನೆ | Kannada Prabha

ಸಾರಾಂಶ

ಪ್ರಸ್ತುತ ಮಾರ್ಚ್‌ ವರೆಗೆ ನೀರಿನ ಸಮಸ್ಯೆ ಕಂಡು ಬರಲಿಕ್ಕಿಲ್ಲ. ಏಪ್ರಿಲ್‌ ,ಮೇ ತಿಂಗಳಿನಲ್ಲಿ ನೀರಿನ ಸಮಸ್ಯೆ ಕಂಡು ಬರಲಿದ್ದು ಟ್ಯಾಂಕರ್‌ ಮೂಲಕ ಸರಬರಾಜು ಮಾಡಬೇಕಾಗುತ್ತದೆ. ಮೂಲ್ಕಿಗೆ ಶಾಶ್ವತವಾದ ಕುಡಿಯುವ ನೀರಿನ ಯೋಜನೆ ಕಾರ್ಯಗತಗೊಂಡಲ್ಲಿ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲು ಸಾಧ್ಯ.

ಪ್ರಕಾಶ್ ಎಂ.ಸುವರ್ಣ

ಕನ್ನಡಪ್ರಭ ವಾರ್ತೆ ಮೂಲ್ಕಿ

ದ.ಕ.- ಉಡುಪಿ ಜಿಲ್ಲೆಯ ಮಧ್ಯಭಾಗದಲ್ಲಿ ಜಿಲ್ಲಾ ಗಡಿ ಪ್ರದೇಶದಲ್ಲಿ ಸಮುದ್ರ ಮತ್ತು ನದಿಯಿಂದ ಆವೃತ್ತವಾಗಿರುವ ಮೂಲ್ಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಇಲ್ಲದ ಕಾರಣ ಪ್ರತಿವರ್ಷ ಏಪ್ರಿಲ್‌ ಮೇ ತಿಂಗಳಿನಲ್ಲಿ ನೀರಿನ ಸಮಸ್ಯೆ ಕಂಡು ಬರುತ್ತಿದೆ.

ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 19 ವಾರ್ಡ್‌ಗಳಿದ್ದು ಒಟ್ಟು ಜನ ಸಂಖ್ಯೆ ಸುಮಾರು 20 ಸಾವಿರದಷ್ಟಿದೆ. 6 ವಾರ್ಡ್‌ಗಳನ್ನು ಹೊಂದಿರುವ ಮೂಲ್ಕಿಯ ಕೆ.ಎಸ್‌. ರಾವ್‌ ನಗರದಲ್ಲಿ ಬಿಜಾಪುರ ಕಾಲೋನಿ, ಆಶ್ರಯ ಕಾಲೋನಿ ಸೇರಿದಂತೆ ಸುಮಾರು 10000 ಮಂದಿ ವಾಸವಿದ್ದಾರೆ. ಇಲ್ಲಿ ಉತ್ತರ ಕರ್ನಾಟಕ ಮೂಲದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ನಿರಂತರ ಬಂದು ಹೋಗುತ್ತಿರುವುದರಿಂದ ಇಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ.

ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯ ಬಪ್ಪನಾಡು, ಮಾನಂಪಾಡಿ, ಚಿತ್ರಾಪು, ಕೊಳಚಿಕಂಬಳ, ಪಡುಬ್ಯೆಲು ಶಾಂಭವಿ ನದಿ ತೀರದ ಪ್ರದೇಶಗಳಾಗಿದ್ದು ಇಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 20ಕ್ಕೂ ಹೆಚ್ಚು ವಸತಿ ಸಂಕೀರ್ಣಗಳಿದ್ದು ಎಪ್ರಿಲ್‌ ,ಮೇ ತಿಂಗಳಿನಲ್ಲಿ ನೀರಿನ ಅಭಾವ ಕಾಡುತ್ತದೆ.

ಮೂಲ್ಕಿಗೂ ಸಮಸ್ಯೆ: ಪ್ರಸ್ತುತ ಮೂಲ್ಕಿಗೆ ಕುಳಾಯಿಯಿಂದ ಮಂಗಳೂರು ಮಹಾ ನಗರ ಪಾಲಿಕೆಯ ಮೂಲಕ ತುಂಬೆಯಿಂದ ರಾಷ್ತ್ರೀಯ ಹೆದ್ದಾರಿಯ ಬದಿಯಲ್ಲಿ ಅಳವಡಿಸಿದ ಪೈಪ್‌ ಮೂಲಕ ನೀರು ಸರಬರಾಜು ಆಗುತ್ತಿದೆ. ಮೂಲ್ಕಿಯ ಈಗಿನ ಜನ ಸಂಖ್ಯೆಗೆ 2.3 ಎಂಎಲ್‌ಡಿ ನೀರಿನ ಅಗತ್ಯವಿದ್ದು ಪ್ರತಿ ದಿನ ಪೈಪ್‌ಲೈನ್‌ ಮೂಲಕ ತುಂಬೆಯಿಂದ 1 ಎಂ ಎಲ್‌ ಡಿ ನೀರು ಮೂಲ್ಕಿಗೆ ಸರಬರಾಜು ಆಗುತ್ತಿದೆ, ಇದರಲ್ಲಿ ಹೆಚ್ಚಿನ ನೀರು ಕೆ.ಎಸ್‌. ರಾವ್‌ ನಗರಕ್ಕೆ ಪೂರೈಸಲಾಗುತ್ತಿದೆ. ತುಂಬೆಯಿಂದ ಬರುವ ನೀರಿನಲ್ಲಿ ವ್ಯತ್ಯಾಸವಾದಲ್ಲಿ ಮೂಲ್ಕಿಯಲ್ಲೂ ನೀರಿಗೆ ಸಮಸ್ಯೆಯಾಗುತ್ತದೆ. ತುಂಬೆಯ ನೀರನ್ನು ಅವಲಂಬಿಸಿ ಮೂಲ್ಕಿ ನಗರ ಪಂಚಾಯಿತಿ ಕಾರ್ಯ ನಿರ್ವಹಿಸುತ್ತಿದೆ. ಮೂಲ್ಕಿ ನಗರ ಪಂಚಾಯಿತಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯ ಬದಲಿಗೆ ಕೆಲವು ವರ್ಷಗಳ ಹಿಂದೆ ಕೆಐಯುಡಿಬಿ ಮೂಲಕ ಸುಮಾರು 14.5 ಕೋಟಿ ರು. ವೆಚ್ಚದಲ್ಲಿ ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಮನೆ ಮನೆಗೆ ಪೈಪ್‌ ಅಳವಡಿಸಲಾಗಿದೆ. ಆದರೆ ಅದರಲ್ಲಿ ನೀರು ಸರಬರಾಜು ಆಗದ ಕಾರಣ ಉಪಯೋಗಕ್ಕೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಬೇಕಿದೆ ಶಾಶ್ವತ ಯೋಜನೆ: ಮೂಲ್ಕಿಯಲ್ಲಿ ಶಾಂಭವಿ ನದಿ ನೀರು ಸಮುದ್ರಕ್ಕೆ ಸೇರಿ ವ್ಯರ್ಥವಾಗುತ್ತಿದ್ದು ಮೂಲ್ಕಿಯಲ್ಲಿ ಡ್ಯಾಮ್‌ ನಿರ್ಮಿಸಿ ಶಾಶ್ವತ ಯೋಜನೆ ಕೈಗೆತ್ತಿಕೊಂಡಲ್ಲಿ ನೀರಿನ ಸಮಸ್ಯೆ ಬಗೆಹರಿಯಲು ಸಾಧ್ಯವಿದೆ. ಮೂಲ್ಕಿಯಲ್ಲಿ ಹರಿಹರ ಕ್ಷೇತ್ರದಲ್ಲಿ ಕೆರೆಯನ್ನು ಮೂಡಾದ ಯೋಜನೆಯಲ್ಲಿ 60 ಲಕ್ಷ ರು. ವೆಚ್ಚದಲ್ಲಿ ಅಭಿವೃದ್ದಿ ಪಡಿಸಿದ್ದು ಕೆರೆಯಲ್ಲಿ ನೀರು ತುಂಬಿ ಅಲ್ಲಿನ ಪರಿಸರದ ಬಾವಿಗಳಲ್ಲಿ ನೀರಿನ ಒರತೆ ಕಂಡು ಬಂದಿದೆ. ಮೂಲ್ಕಿಯ ಮಡಿವಾಳ ಕೆರೆ ಪ್ರಮುಖವಾಗಿದ್ದು ಇದನ್ನು ಅಭಿವೃದ್ಧಿಪಡಿಸಿದಲ್ಲಿ ಹೆಚ್ಚಿನ ನೀರಿನ ಒರತೆ ಸಿಗಲಿದೆ. ಮೂಲ್ಕಿಯ ಅಕ್ಕ ಸಾಲಿಗರ ಕೇರಿಯ ಬಳಿ ಹಳೆ ಕೆರೆಯೊಂದಿದ್ದು ಅದನ್ನೂ ಅಭಿವೃದ್ದಿ ಪಡಿಸಬೇಕಿದೆ. ಮಳವೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ಕಿನ್ನಿಗೋಳಿ, ಬಜ್ಪೆ ಹಾಗೂ ಮೂಲ್ಕಿ ಪಟ್ಟಣ ಪಂಚಾಯಿತಿ ನೀರು ಸರಬರಾಜಿಗೆ ಅಮೃತಾ ಧಾರ ಯೋಜನೆಯಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಸಾಕಾರವಾದಲ್ಲಿ ನೀರಿನ ಸಮಸ್ಯೆ ಬಗೆಹರಿಯುವ ಸಾಧ್ಯತೆಯಿದೆ. ಪ್ರಸ್ತುತ ಮಾರ್ಚ್‌ ವರೆಗೆ ನೀರಿನ ಸಮಸ್ಯೆ ಕಂಡು ಬರಲಿಕ್ಕಿಲ್ಲ. ಏಪ್ರಿಲ್‌ ,ಮೇ ತಿಂಗಳಿನಲ್ಲಿ ನೀರಿನ ಸಮಸ್ಯೆ ಕಂಡು ಬರಲಿದ್ದು ಟ್ಯಾಂಕರ್‌ ಮೂಲಕ ಸರಬರಾಜು ಮಾಡಬೇಕಾಗುತ್ತದೆ. ಮೂಲ್ಕಿಗೆ ಶಾಶ್ವತವಾದ ಕುಡಿಯುವ ನೀರಿನ ಯೋಜನೆ ಕಾರ್ಯಗತಗೊಂಡಲ್ಲಿ ನೀರಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲು ಸಾಧ್ಯ. ಮೂಲ್ಕಿಯಲ್ಲಿ ನೀರು ಸರಬರಾಜಿಗೆ ಮಂಗಳೂರು ಮಹಾನಗರ ಪಾಲಿಕೆಯ ತುಂಬೆಯಿಂದ ಕುಳಾಯಿ ಮೂಲಕ ಪೈಪ್‌ಲೈನ್‌ನಲ್ಲಿ ಬರುವ ನೀರನ್ನು ಅವಲಂಬಿಸಲಾಗಿದೆ. ಪ್ರತಿ ವರ್ಷ ಏಪ್ರಿಲ್‌, ಮೇ ತಿಂಗಳಿನಲ್ಲಿ ನೀರಿನ ಸಮಸ್ಯೆ ಕಾಡುತ್ತದೆ. ಶಾಶ್ವತ ಯೋಜನೆ ಕೈಗೆತ್ತಿಕೊಂಡಲ್ಲಿ ನೀರಿನ ಸಮಸ್ಯೆ ಬಗೆಹರಿಯಲು ಸಾಧ್ಯವಿದೆ. ಮೂಲ್ಕಿ ಪರಿಸರದಲ್ಲಿ ಮಡಿವಾಳ ಕೆರೆ ಮೂಲವಾಗಿದ್ದು ಇದನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ನಗರ ಪಂಚಾಯಿತಿ ಮುಖ್ಯಾಧಿಕಾರಿ ಇಂದು ಎಂ. ಹೇಳಿದ್ದಾರೆ. ಮೂಲ್ಕಿ ನಗರ ಪಂಚಾಯಿತಿ ಕಿರಿಯ ಅಭಿಯಂತರರಾದ ಅಶ್ವಿನಿ ಅವರು ಪ್ರತಿಕ್ರಿಯಿಸಿ, ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆ.ಎಸ್‌. ರಾವ್‌ ನಗರದಲ್ಲಿ ನೀರಿಗೆ ಸಮಸ್ಯೆಯಿದ್ದು ಶಾಶ್ವತ ಯೋಜನೆ ಕೈಗೆತ್ತಿಕೊಂಡಲ್ಲಿ ನೀರಿನ ಸಮಸ್ಯೆ ಬಗೆಹರಿಯಲು ಸಾಧ್ಯವಿದೆ. ಅಮೃತಾ ಧಾರ ಯೋಜನೆಯಲ್ಲಿ ಮಳವೂರು ಡ್ಯಾಂನಿಂದ ಮೂಲ್ಕಿ, ಕಿನ್ನಿಗೋಳಿ, ಬಜ್ಪೆ ವ್ಯಾಪ್ತಿಗೆ ನೀರು ಸರಬರಾಜು ಮಾಡುವ ಪ್ರಸ್ತಾವನೆ ಅಂತಿಮ ಹಂತದಲ್ಲಿದೆ. ಕಾರ್ಯಗತಗೊಂಡಲ್ಲಿ ನೀರಿನ ಸಮಸ್ಯೆ ನಿವಾರಣೆ ಸಾಧ್ಯ ಎಂದರು.

ನೀರಿನ ಸಮಸ್ಯೆ ಬಗ್ಗೆ ಮೂಲ್ಕಿ ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಸುಭಾಷ್‌ ಶೆಟ್ಟಿ ಪ್ರತಿಕ್ರಿಯಿಸಿ, ಮೂಲ್ಕಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ನೀರಿನ ಸಮಸ್ಯೆ ಕಂಡು ಬರುತ್ತಿದ್ದು ಶಾಶ್ವತ ನೀರಿನ ಯೋಜನೆಯ ಅಗತ್ಯವಿದೆ. ನೀರಿನ ಸಮಸ್ಯೆ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದ್ದು ಮಳವೂರು ಡ್ಯಾಂ ಮೂಲಕ ಮೂಲ್ಕಿ ನಗರ ಪಂಚಾಯಿತಿಗೆ ನೀರು ಸರಬರಾಜು ಮಾಡುವ ಯೋಜನೆ ಇದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ