ಬಹುಗ್ರಾಮ ಕುಡಿಯುವ ನೀರು ಯೋಜನೆ: ಹಳಿಯಾಳದಲ್ಲಿ ಟ್ಯಾಂಕ್ ನಿರ್ಮಾಣಕ್ಕೆ ಪರಿಸರ ಇಲಾಖೆ ಒಪ್ಪಿಗೆ

KannadaprabhaNewsNetwork |  
Published : Jan 16, 2024, 01:45 AM IST
5 | Kannada Prabha

ಸಾರಾಂಶ

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಸಂಗ್ರಹಣಾ ಟ್ಯಾಂಕ್ ನಿರ್ಮಿಸಲು ಪರಿಸರ ಇಲಾಖೆ ಅಧಿಕೃತ ಒಪ್ಪಿಗೆ ನೀಡಿದೆ ಎಂದು ಮಾಜಿ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.

ಹಳಿಯಾಳ:

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ನೀರು ಸಂಗ್ರಹಣಾ ಟ್ಯಾಂಕ್‌ ನಿರ್ಮಿಸಲು ಪರಿಸರ ಇಲಾಖೆಯಿಂದ ಅಧಿಕೃತ ಒಪ್ಪಿಗೆ ದೊರೆತಿದ್ದು, ಶೀಘ್ರ ಬಹುಗ್ರಾಮ ಯೋಜನೆಯ ಕಾಮಗಾರಿ ಮುಕ್ತಾಯಗೊಂಡು ದಾಂಡೇಲಿಯಿಂದ ಕಾಳಿನದಿ ನೀರು ಪ್ರತಿ ಗ್ರಾಮಕ್ಕೆ ಬರಲಿದೆ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಮಂಜೂರಾದ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆಯ ಜಮೀನಿನಲ್ಲಿ ನೀರು ಸಂಗ್ರಹಣಾ ಟ್ಯಾಂಕ್‌ ನಿರ್ಮಾಣವಾಗಬೇಕಿದ್ದರಿಂದ ಅದಕ್ಕೆ ಅನ್ವಯವಾಗುವ ₹ 5.47 ಕೋಟಿ ಚಾರ್ಜನ್ನು ಪರಿಸರ ಇಲಾಖೆಗೆ ಗ್ರಾಮೀಣ ಕುಡಿಯುವ ನೀರು ಪೂರೈಕೆ ಸಂದಾಯ ಮಾಡಿದೆ ಎಂದರು.

ತಾಲೂಕಿನಲ್ಲಿ ಎರಡೂ ಕಡೆ ವಸತಿ ಶಾಲೆಗಳ ನಿರ್ಮಾಣಕ್ಕೆ ಜಮೀನು ಮಂಜೂರಿಯಾಗಿದೆ. ಮುರ್ಕವಾಡದ ಬಿ.ಆರ್. ಅಂಬೇಡ್ಕರ್‌ ವಸತಿ ಶಾಲೆಗೆ ಜೋಗನಕೊಪ್ಪ ಬಳಿ 10 ಎಕರೆ ಜಮೀನು ಹಾಗೂ ಸಾಂಬ್ರಾಣಿಯ ಇಂದಿರಾಗಾಂಧಿ ವಸತಿ ಶಾಲೆಗೆ ನಾಗಶೆಟ್ಟಿಕೊಪ್ಪ ಬಳಿ 6 ಎಕರೆ ಜಮೀನು ಮಂಜೂರಿಯಾಗಿದೆ ಎಂದ ಅವರು, ಮೌಲಾನಾ ಆಝಾದ್‌ ಅಲ್ಪಸಂಖ್ಯಾತರ ಶಾಲೆ ನಿರ್ಮಾಣಕ್ಕೆ ಪಟ್ಟಣದಲ್ಲಿ ನಿವೇಶನ ಮಂಜೂರಿಯಾಗಿದ ಎಂದು ದೇಶಪಾಂಡೆ ತಿಳಿಸಿದರು.

ಬಾಲಸ್ನೇಹಿ ಅಂಗನವಾಡಿ ನಿರ್ಮಾಣ ಯೋಜನೆಯಲ್ಲಿ ತಲಾ ₹ 1 ಲಕ್ಷಗಳಂತೆ ಹಳಿಯಾಳ ತಾಲೂಕಿನಲ್ಲಿ 2 ಮತ್ತು ಜೋಯಿಡಾ ತಾಲೂಕಿನಲ್ಲಿ ಒಂದು ಅಂಗನವಾಡಿಗಳಿಗೆ ಅನುದಾನ ಮಂಜೂರಾಗಿದೆ. ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಎರಡೂ ಅಂಗನವಾಡಿ ನೂತನ ಕಟ್ಟಡಗಳ ನಿರ್ಮಾಣಕ್ಕೆ ತಲಾ ₹ 20 ಲಕ್ಷ ಮಂಜೂರಾಗಿದೆ. ಕಾಲಸುಂಕ ನಿರ್ಮಾಣಕ್ಕೆ ಡೊಂಕನಾಳ-ಕೊಲೆರಾಂಗ ₹ 20 ಲಕ್ಷ ಮತ್ತು ಛೋಟಾಕಾನ ಶಿರಡಾ-ನಾರನಳ್ಳಿ ₹ 15 ಲಕ್ಷ ಮಂಜೂರಾಗಿದೆ. ಪಟ್ಟಣದ ಶಿವಾಜಿ ಕ್ರೀಡಾಂಗಣ ಉನ್ನತಿಕರಣಕ್ಕೆ ₹ 1.50 ಕೋಟಿ ಮಂಜೂರಾಗಿದೆ. ಲೋಕೋಪಯೋಗಿ ಇಲಾಖೆಗೆ ₹ 4ಕೋಟಿ ಅನುದಾನ ಮಂಜೂರಾಗಿದ್ದು, ಇದರಲ್ಲಿ ಹಳಿಯಾಳದ ಕೆಡಿಸಿಸಿ ಬ್ಯಾಂಕ್‌ನಿಂದ ಯಡೋಗಾದ ವರೆಗೆ ಮತ್ತು ದಾಂಡೇಲಿ ಚೆನ್ನಮ್ಮ ವೃತದಿಂದ ಬೈಲಪಾರ ಸೇತುವೆ ವರೆಗೆ ರಸ್ತೆ ನಿರ್ಮಾಣ ಡಾಂಬರೀಕರಣ ನಡೆಯಲಿದೆ. ರಾಮನಗರ ಮತ್ತು ಅಕ್ಕಪಕ್ಕದ ಅಸು, ಜಗಲಬೇಟ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ₹ 24.60 ಕೋಟಿ ಅನುದಾನ ಮಂಜೂರಾಗಿದೆ ಎಂದು ಮಾಹಿತಿ ನೀಡಿದರು.

ನೀರಾವರಿ ಕಾಮಗಾರಿ:

ಚಿಕ್ಕ ನೀರಾವರಿ ಕಾಮಗಾರಿಗಳಿಗೆ ₹ 7 ಕೋಟಿ ಮಂಜೂರಾಗಿದೆ. ರಾಮನಗರದಲ್ಲಿ ಕಿಂಡಿ ಬಾಂದಾರ ನಿರ್ಮಾಣಕ್ಕೆ 2 ಕೋಟಿ, ಅಸುಪಂಚಾಯತಿಯ ಚೆಕ್ ಡ್ಯಾಮಿಗೆ ₹ 50 ಲಕ್ಷ, ಕಾವಲವಾಡ ಬಾಂದಾರ ನಿರ್ಮಾಣಕ್ಕೆ ₹ 1 ಕೋಟಿ, ಜೋಯಿಡಾ ಬಾಂದಾರ ನಿರ್ಮಾಣಕ್ಕೆ ₹ 1.5ಕೋಟಿ, ಹುಲ್ಲಟ್ಟಿ ಕೆರೆ ಸುಧಾರಣೆಗೆ ನಬಾರ್ಡದಲ್ಲಿ ₹ 1 ಕೋಟಿ, ಜನಗಾ ಕೆರೆ ಸುಧಾರಣೆಗೆ ₹ 1ಕೋಟಿ ಮಂಜೂರಾಗಿದೆ ಎಂದು ತಿಳಿಸಿದರು.

ಆಸ್ಪತ್ರೆಗಳಿಗೆ ಅನುದಾನ:

ಹಳಿಯಾಳ ಪಟ್ಟಣ ಮತ್ತು ಜೋಯಿಡಾದ ತಾಲೂಕಾಸ್ಪತ್ರೆಯಲ್ಲಿ ತಲಾ ₹ 55ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಸಾರ್ವಜನಿಕ ಆರೋಗ್ಯ ಲ್ಯಾಬ್ ಕಾಮಗಾರಿ ಮುಕ್ತಾಯಗೊಂಡಿದೆ. ಹಳಿಯಾಳ ಆಸ್ಪತ್ರೆಯಲ್ಲಿ ₹ 36.60 ಲಕ್ಷ ವೆಚ್ಚದಲ್ಲಿ ಶವಾಗಾರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇನ್ನೂ ಜೋಯಿಡಾದಲ್ಲಿ 4 ವೈದ್ಯರು ಮತ್ತು 4 ಸುಶ್ರೂಕಿಯರ ವಸತಿ ಗೃಹ ನಿರ್ಮಾಣಕ್ಕೆ ₹2.65 ಕೋಟಿ ಮಂಜೂರಾಗಿದೆ ಎಂದು ದೇಶಪಾಂಡೆ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ