ಮುಂಡಗೋಡ: ಶಿರಸಿ- ಹುಬ್ಬಳ್ಳಿ (ಕುಮಟಾ-ತಡಸ್) ರಾಜ್ಯ ಹೆದ್ದಾರಿ ಸಂಪೂರ್ಣ ಹೊಂಡಗಳಿಂದ ಕೂಡಿದ್ದು, ವಾಹನಗಳು ಅಲ್ಲಲ್ಲಿಯೇ ಕೆಟ್ಟು ನಿಲ್ಲುತ್ತಿವೆ. ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಹರಸಾಹಸ ಪಡುವಂತಾಗಿದೆ.
ಮುಂಡಗೋಡದಿಂದ ಶಿರಸಿ, ಹುಬ್ಬಳ್ಳಿಗೆ ಹೋಗಬೇಕಾದರೆ ಮಾರ್ಗದುದ್ದಕ್ಕೂ ಹೊಂಡಗಳು ನಿರ್ಮಾಣವಾಗಿ ರಸ್ತೆ ಎಂಬುವುದು ತಗ್ಗು ಗುಂಡಿಗಳಿಂದ ಕೂಡಿರುವುದರಿಂದ ಈ ಮಾರ್ಗವಾಗಿ ವಾಹನ ಚಲಾಯಿಸುವುದೇ ದೊಡ್ಡ ತಲೆ ನೋವು. ಮೊದಲು ಮುಂಡಗೋಡದಿಂದ ಶಿರಸಿ ಅಥವಾ ಹುಬ್ಬಳ್ಳಿಗೆ ಒಂದು ಗಂಟೆಯೊಳಗೆ ತಲುಪಬಹುದಿತ್ತು. ಆದರೆ ಈಗ ರಸ್ತೆ ಮಾರ್ಗದುದ್ದಕ್ಕೂ ಹೊಂಡ ನಿರ್ಮಾವಾಗಿ ರಸ್ತೆ ಎಂಬುವುದು ಹೊಂಡಮಯವಾಗಿರುವುದರಿಂದ ಕನಿಷ್ಠ ಎರಡು ಗಂಟೆಯಾದರೂ ಬೇಕು. ರಸ್ತೆಯಲ್ಲಿ ಹೊಂಡಗಳಿವೆಯೊ ಅಥವಾ ಹೊಂಡಗಳಲ್ಲಿ ರಸ್ತೆ ಇದೆಯೋ ಎಂಬ ಅನುಮಾನ ಕಾಡುತ್ತಿದೆ. ಸ್ವಲ್ಪ ಯಾಮಾರಿದರೂ ಅಪಘಾತ ಕಟ್ಟಿಟ್ಟ ಬುತ್ತಿ ಎಂಬುವುದನ್ನು ಗಮನದಲ್ಲಿಟ್ಟುಕೊಂಡು ಸಾಗಬೇಕಿದೆ. ಈ ಮಾರ್ಗವಾಗಿ ಸಂಚರಿಸುವವರ ಸ್ಥಿತಿ ಆ ದೇವರಿಗೆ ಪ್ರೀತಿ. ಚಾಲಕರಿಗೆ ಈ ಮಾರ್ಗವಾಗಿ ಸಂಚರಿಸುವುದೇ ಒಂದು ಹಿಂಸೆಯಾಗಿ ಪರಿಣಮಿಸಿದ್ದು, ಅಧಿಕಾರಿ ಹಾಗೂ ಜನಪ್ರತಿನಿಧಿಗಳ ವಿರುದ್ದ ಹಿಡಿಶಾಪ ಹಾಕುತ್ತ ಪ್ರಯಾಣಿಸುತ್ತಾರೆ.ರಸ್ತೆಗಳು ಇಷ್ಟೊಂದು ಹದಗೆಟ್ಟರೂ ರಸ್ತೆ ನಿರ್ವಹಣೆಗೆ ಮುಂದಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತಕ್ಷಣ ಇತ್ತ ಗಮನಹರಿಸಿ ರಸ್ತೆ ದುರಸ್ತಿ ಕಾರ್ಯ ಕೈಗೊಂಡು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುವುದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಗುಂಡಿಮಯ ರಸ್ತೆಗೆ ಹೆದರಿ ಪರ್ಯಾಯ ಮಾರ್ಗ:
ರಸ್ತೆಯುದ್ದಕ್ಕೂ ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದರಿಂದ ಮಳೆನೀರು ನಿಲ್ಲುವುದರಿಂದ ಎಲ್ಲಿ ಹೊಂಡ ಇದೆ ಎಲ್ಲಿ ಗುಂಡಿ ಇದೆ ಎಂಬುದು ತಿಳಿಯದೇ ವಾಹನಗಳು ಗುಂಡಿಯಲ್ಲಿ ಬಿದ್ದು ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿವೆ. ಇದರಿಂದ ಶಿರಸಿ-ಹುಬ್ಬಳ್ಳಿ ರಸ್ತೆಯ ಸ್ಥಿತಿಗೆ ಹೆದರಿ ಬಹುತೇಕ ಕಾರು ಮುಂತಾದ ವಾಹನಗಳು ದೂರವಾದರೂ ಪರವಾಗಿಲ್ಲ ಎಂದು ಶಿರಸಿ-ಯಲ್ಲಾಪುರ ಮಾರ್ಗವಾಗಿ ಸುತ್ತು ಹಾಕಿ ಹುಬ್ಬಳ್ಳಿಗೆ ಹೋಗುತ್ತಿದ್ದಾರೆ.೧೩ ವರ್ಷದಿಂದ ಡಾಂಬರೀಕರಣವಾಗದ ಹೆದ್ದಾರಿ: ೨೦೧೧-೧೨ನೇ ಸಾಲಿನಲ್ಲಿ ಡಾಂಬರೀಕರಣವಾದ ಶಿರಸಿ-ಹುಬ್ಬಳ್ಳಿ ರಸ್ತೆ ಸುಮಾರು ೧೩ ವರ್ಷ ಕಳೆದರೂ ಮರು ಡಾಂಬರೀಕರಣ ಮಾಡಲಾಗಿಲ್ಲ. ಪ್ರತಿ ವರ್ಷ ಮಳೆಗಾಲ ಮುಗಿದ ತಕ್ಷಣ ದುರಸ್ತಿ ಹಾಗೂ ನಿರ್ವಹಣೆ ಹೆಸರಲ್ಲಿ ತೇಪೆ ಹಚ್ಚುವ ಕೆಲಸ ಮಾಡಿ ಕೋಟ್ಯಂತರ ರುಪಾಯಿ ಕರ್ಚು ಹಾಕುತ್ತ ಬರಲಾಗಿದೆಯೇ ವಿನಃ ಮರು ಡಾಂಬರೀಕರಣ ಮಾಡುವ ಗೋಜಿಗೆ ಹೋಗಿಲ್ಲ.
ನಿತ್ಯ ಸಾವಿರಾರು ವಾಹನ ಸಂಚರಿಸುವ ಈ ರಸ್ತೆ ಗುಂಡಿಗಳಿಂದ ಕೂಡಿದ್ದು ಸಂಪೂರ್ಣ ಹದಗೆಟ್ಟು ಹೋದರೂ ಸಹ ಮರು ಡಾಂಬರೀಕರಣ ಮಾಡದೇ ಕೇವಲ ತೇಪೆ ಹಚ್ಚುವ ಕೆಲಸ ಮಾಡುತ್ತ ಬಂದಿರುವುದರಿಂದ ರಸ್ತೆ ಈ ಸ್ಥಿತಿಗೆ ಕಾರಣವಾಗಿದೆ. ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.