ಮುಂಡರಗಿ: ಹಸಿದು ಬಂದವರಿಗೆ ಅನ್ನ ನೀಡುವುದು, ನಾಡಿನಾದ್ಯಂತ 33ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ತೆರೆದು ಎಲ್ಲರಿಗೂ ಅಕ್ಷರಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವುದು, 155ಕ್ಕೂ ಹೆಚ್ಚು ಮೌಲ್ಯಯುತವಾದ ಎಲ್ಲ ತರಹದ ಸಾಹಿತ್ಯ ಕೃತಿಗಳನ್ನು ರಚಿಸುವ ಮೂಲಕ ಮುಂಡರಗಿ ಅನ್ನದಾನೀಶ್ವರ ಸ್ವಾಮೀಜಿ ಮೇಲ್ಪಂಕ್ತಿಯಲ್ಲಿದ್ದಾರೆ ಎಂದು ಜಮಖಂಡಿ ಓಲೆ ಮಠದ ಚನ್ನಬಸವ ಸ್ವಾಮೀಜಿ ಹೇಳಿದರು.
ಕಾರ್ಯಕ್ರಮದಲ್ಲಿ ಶಿವಕುಮಾರ ದೇವರು ಬಳೂಟಗಿ, ಲಿಂಗನಾಯಕನಹಳ್ಳಿಯ ಚನ್ನವೀರ ಮಹಾಸ್ವಾಮಿಗಳು ಮತ್ತು ಅನೇಕ ಹರಗುರು ಚರಮೂರ್ತಿಗಳು ಮಾತನಾಡಿದರು. ಪಟ್ಟಣದ ಖ್ಯಾತ ಉದ್ದಿಮೆದಾರ ಕರಬಸಪ್ಪ ಹಂಚಿನಾಳ ಅವರಿಗೆ ಶ್ರೀ ಜಗದ್ಗುರು ಅನ್ನದಾನೀಶ್ವರ ಪ್ರತಿಷ್ಠಾನ ಪುರಸ್ಕಾರ ಪ್ರದಾನ ಮಾಡಲಾಯಿತು.
ಸಾನ್ನಿಧ್ಯವಹಿಸಿದ್ದ ಜ. ನಾಡೋಜ ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ಶ್ರೀಮಠದ ಯಾತ್ರಾ ಮಹೋತ್ಸವ ವರ್ಷದಿಂದ ವರ್ಷಕ್ಕೆ ಅದ್ಧೂರಿಯಾಗಿ ನಡೆಯುತ್ತಿದ್ದು, ಅದಕ್ಕೆ ಎಲ್ಲ ಭಕ್ತರ ಸಹಕಾರವೇ ಕಾರಣವಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಅನೇಕ ಭಕ್ತರು ಶೇಂಗಾ ಹೋಳಿಗೆ, ಕರ್ಜಿಕಾಯಿ, ರೊಟ್ಟಿ ಸೇರಿದಂತೆ ಅನೇಕ ಆಹಾರ ಪದಾರ್ಥಗಳನ್ನು ಮಾಡಿಕೊಂಡು ಬಂದು ತಮ್ಮ ಭಕ್ತಿಯನ್ನು ಸಮರ್ಪಿಸಿದ್ದಾರೆ. ಭಕ್ತರ ಭಕ್ತಿಯೇ ಶ್ರೀಮಠಕ್ಕೆ ಶಕ್ತಿಯಾಗಿದೆ ಎಂದರು.ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಚನ್ನಬಸವ ದೇವರು, ಗುರುಪಾದ ಸ್ವಾಮೀಜಿ, ಡಾ. ಚೆನ್ನಮಲ್ಲ ಸ್ವಾಮೀಜಿ, ವೀರೇಶ್ವರ ಶಿವಾಚಾರ್ಯರು, ನಾಗೇಶ ಹುಬ್ಬಳ್ಳಿ, ಡಾ. ಬಿ.ಜಿ. ಜವಳಿ, ಎಂ.ಎಸ್. ಶಿವಶೆಟ್ಟರ, ಬಸಪ್ಪ ಬನ್ನಿಕೊಪ್ಪ, ದೇವಪ್ಪ ರಾಮೇನಹಳ್ಳಿ, ಡಾ. ಬಿ.ಎಸ್. ಮೇಟಿ, ಎಂ.ಜಿ. ಗಚ್ಚಣ್ಣವರ, ಆರ್.ಎಲ್. ಪೊಲೀಸ್ ಪಾಟೀಲ ಉಪಸ್ಥಿತರಿದ್ದರು. ಶಾಲಾ-ಕಾಲೇಜುಗಳ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಎಸ್.ಎಸ್. ಇನಾಮತಿ ಮತ್ತು ಶಿಕ್ಷಕ ಮಠದ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಲಾವಿದ ಮುದಿಯಪ್ಪ ಭಜಂತ್ರಿ ಕ್ಲೈರಿನೇಟ್ ವಾದನ ನುಡಿಸಿದರು. ಆನಂತರ ಜೀವನಸಾಬ್ ಬಿನ್ನಾಳ ಹಾಸ್ಯಸಂಜೆ ಕಾರ್ಯಕ್ರಮ ನಡೆಯಿತು.