ಎಸ್.ಎಂ. ಸೈಯದ್ ಗಜೇಂದ್ರಗಡ
ಪಟ್ಟಣದ ಪುರಸಭೆಯ ೨೩ ಸದಸ್ಯರಲ್ಲಿ ಬಿಜೆಪಿ ಬೆಂಬಲಿತ ೧೮ ಸದಸ್ಯರು ಹಾಗೂ ೫ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದರಿಂದ ಚುನಾವಣೆಯ ದಿನದ ವರೆಗೂ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂಬ ಲೆಕ್ಕಾಚಾರಗಳಿದ್ದವು. ಆದರೆ ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪೈಪೋಟಿಯಿಂದ ಬಂಡಾಯವೆದ್ದ ಸುಭಾಸ ಮ್ಯಾಗೇರಿ ಜತೆಗೆ ೬ ಬಿಜೆಪಿ ಸದಸ್ಯರು ಸೇರಿದರು. ಬಿಜೆಪಿಗೆ ಶಾಕ್ ನೀಡಿದ ಕಾಂಗ್ರೆಸ್ ಪುರಸಭೆಯಲ್ಲಿ ಮೇಲುಗೈ ಸಾಧಿಸಿತು.
ಬೀದಿದನ, ನಾಯಿಗಳ ಹಾವಳಿ:ಪಟ್ಟಣದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಬೀದಿದನ ಹಾಗೂ ಬೀದಿನಾಯಿಗಳ ಹಾವಳಿಯಿಂದ ವಾಹನ ಸಂಚಾರ ಕಷ್ಟವಾಗಿದೆ. ಸಾರ್ವಜನಿಕರು ಭಯದಲ್ಲಿ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಬೀದಿ ದನ, ನಾಯಿಗಳ ಆಟಾಟೋಪಕ್ಕೆ ಕಡಿವಾಣ ಹಾಕಲು ಕೆಲವು ದಿಟ್ಟ ನಿರ್ಧಾರ ಕೈಗೊಳ್ಳಬೇಕಿದೆ.
ತರಕಾರಿ ಮಾರುಕಟ್ಟೆ: ಪಟ್ಟಣದ ಜೋಡು ರಸ್ತೆ, ಕಾಲಕಾಲೇಶ್ವರ ವೃತ್ತ ಸೇರಿದಂತೆ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ನಡೆಯುತ್ತಿದ್ದ ಬೀದಿ ಬದಿ ವ್ಯಾಪಾರ ಹಾಗೂ ತರಕಾರಿ, ಹೂ, ಹಣ್ಣು ಮಾರಾಟಗಾರರಿಗೆ ಪೊಲೀಸರು ಹಾಗೂ ಪುರಸಭೆ ಅಧಿಕಾರಿಗಳು ನಿರ್ಬಂಧ ಹೇರಿದ ಪರಿಣಾಮ ಬೀದಿ ಬದಿ ವ್ಯಾಪಾರಸ್ಥರು ಸದ್ಯ ಎಪಿಎಂಸಿ ಎದುರಿನ ಬಯಲು ಜಾಗದಲ್ಲಿ ವ್ಯಾಪಾರ, ವಹಿವಾಟು ನಡೆಸುತ್ತಿದ್ದಾರೆ. ಆದರೆ ವ್ಯಾಪಾರಿಗಳಿಗೆ ಕನಿಷ್ಠ ಸೌಲಭ್ಯ ಸಹ ಸಿಗುತ್ತಿಲ್ಲ. ಪರಿಣಾಮ ಮಳೆ, ಗಾಳಿ ಬಂದರೆ ಅವರ ಸ್ಥಿತಿ ದೇವರಿಗೆ ಪ್ರೀತಿ ಎಂಬಂತಾಗಿದೆ.
ನೆರವಿಗೆ ಸವಾಲು: ಗಜೇಂದ್ರಗಡ ಪಟ್ಟಣವನ್ನು ಗುಡಿಸಲು ಮುಕ್ತವಾಗಿಸಲು ನೂರಾರು ಮನೆಗಳ ನಿರ್ಮಾಣವಾಗಬೇಕಿದೆ. ಕೊಳಚೆ ನಿಮೂರ್ಲನಾ ಮಂಡಳಿ ಹಾಗೂ ವಿವಿಧ ನಿಗಮಗಳಿಂದ ನಿರ್ಮಿಸುತ್ತಿರುವ ಮನೆಗಳಿಗೆ ಸಕಾಲದಲ್ಲಿ ಹಣ ಬಿಡುಗಡೆಯಾಗಬೇಕಿದೆ. ಆಯ್ಕೆಯಾಗಿರುವ ಕೆಲವು ಫಲಾನುಭವಿಗಳಿಗೆ ಅನುದಾನ ಬಿಡುಗಡೆ, ಕೆಲವು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮವಾಗಬೇಕಿದೆ.