ಶೇ. 100ರಷ್ಟು ಅನುದಾನ ಬಳಸಲು ತಾಪಂಗೆ ಸೂಚನೆ

KannadaprabhaNewsNetwork |  
Published : Aug 31, 2025, 01:08 AM IST
30ಕೆಬಿಪಿಟಿ.1.ಬಂಗಾರಪೇಟೆ ತಾಪಂನಲ್ಲಿ ನಡೆದ ಜಮಾಬಂದಿಯಲ್ಲಿ ನೋಡಲ್ ಅಧಿಕಾರಿ ಮೈಲಾರಪ್ಪ ಮಾತನಾಡಿದರು. | Kannada Prabha

ಸಾರಾಂಶ

ಆರೋಗ್ಯ ಇಲಾಖೆಯಲ್ಲಿ ಆಸ್ಪತ್ರೆಗೆ ಬರುವ ಒಳ ಹಾಗೂ ಹೊರ ರೋಗಿಗಳಿಗೆ ವೈದ್ಯರು ಯಾವುದೇ ಲೋಪವಿಲ್ಲದಂತೆ ಚಿಕಿತ್ಸೆ ನೀಡಬೇಕು, ಶಿಶು ಹಾಗೂ ತಾಯಿ ಮರಣವನ್ನು ತಡೆಯಬೇಕು, ವೈದ್ಯರ ಕೊರತೆಯಿದ್ದರೆ ತಕ್ಷಣವೇ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡು ರೋಗಿಗಳಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

೨೦೨೪,೨೫ ನೇ ಸಾಲಿನಲ್ಲಿ ತಾಲೂಕು ಪಂಚಾಯ್ತಿಗೆ ಬಂದಿರುವ ಅನುದಾನವನ್ನು ಎಷ್ಟು ಖರ್ಚು ಮಾಡಲಾಗಿದೆ, ಯಾವ ಕಾರಣಕ್ಕೆ ಅನುದಾನ ಬಳಕೆಯಾಗದೆ ಉಳಿಸಿಕೊಳ್ಳಲಾಗಿದೆ ಎಂಬುದನ್ನು ಪರಿಶೀಲಿಸಿ ೨೦೨೫,೨೬ನೇ ಸಾಲಿನಲ್ಲಿ ಸಂಪೂರ್ಣ ಹಣವನ್ನು ಖರ್ಚು ಮಾಡಿ ಸರ್ಕಾರದ ಸೌಲತ್ತುಗಳು ಜನರಿಗೆ ತಲುಪುವಂತೆ ಮಾಡಬೇಕು ಎಂದು ತಾಲೂಕು ಪಂಚಾಯಿತಿ ನೋಡಲ್ ಅಧಿಕಾರಿ ಮೈಲಾರಪ್ಪ ಸೂಚಿಸಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಜಮಾಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಖರ್ಚು ವೆಚ್ಚಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಎಲ್ಲ ಇಲಾಖೆಗಳಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಹಾಕಿ ಪ್ರಗತಿ ಸಾಧಿಸಬೇಕು. ಕಳೆದ ಸಾಲಿನಲ್ಲಿ ತಾಲೂಕಿನಲ್ಲಿ ಹತ್ತನೇ ತರಗತಿ ಫಲಿತಾಂಶ ತೀರ ಕುಸಿದಿದ್ದು ಅದನ್ನು ಹೆಚ್ಚಿಸಲು ಯಾವ ರೀತಿ ಯೋಜನೆ ರೂಪಿಸಬೇಕೆಂಬುದನ್ನು ಬಿಇಒ ರವರಿಗೆ ಮಾರ್ಗದರ್ಶನ ನೀಡಲಾಗಿದೆ ಎಂದರು.

ಹೊರಗುತ್ತಿಗೆ ವೈದ್ಯರ ನೇಮಿಸಿ

ಆರೋಗ್ಯ ಇಲಾಖೆಯಲ್ಲಿ ಆಸ್ಪತ್ರೆಗೆ ಬರುವ ಒಳ ಹಾಗೂ ಹೊರ ರೋಗಿಗಳಿಗೆ ವೈದ್ಯರು ಯಾವುದೇ ಲೋಪವಿಲ್ಲದಂತೆ ಚಿಕಿತ್ಸೆ ನೀಡಬೇಕು, ಶಿಶು ಹಾಗೂ ತಾಯಿ ಮರಣವನ್ನು ತಡೆಯಬೇಕು, ವೈದ್ಯರ ಕೊರತೆಯಿದ್ದರೆ ತಕ್ಷಣವೇ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡು ರೋಗಿಗಳಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಬೇಕೆಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪುಟ್ಟ ಕಂದಮ್ಮಗಳಿಗೆ ಪೌಷ್ಟಿಕ ಆಹಾರ ಕಲ್ಪಿಸುವ ಅಂಗನವಾಡಿ ಕೇಂದ್ರಗಳಲ್ಲಿ ಸಮರ್ಪಕವಾಗಿ ಪೌಷ್ಟಿಕ ಆಹಾರ ಮಕ್ಕಳಿಗೆ ದೊರೆಯುವಂತೆ ಸಿಡಿಪಿಒ ಇಲಾಖೆ ನೋಡಿಕೊಳ್ಳಬೇಕು. ಕಟ್ಟಡಗಳು ಶಿಥಿಲವಾಗಿದ್ದರೆ ತಕ್ಷಣವೇ ದುರಸ್ತಿಗೊಳಿಸಲು ಸೂಚಿಸಿದರು. ಎಷ್ಟು ಕೇಂದ್ರಗಳಲ್ಲಿ ಕಾರ್ಯಕರ್ತೆಯರಿಲ್ಲ ಹಾಗೂ ಸಹಾಯಕರಿಲ್ಲ ಎಂಬುದರ ಬಗ್ಗೆ ಮಾಹಿತಿ ಪಡೆಯಲಾಗಿದೆ. ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಿಸಿಕೊಳ್ಳಲೂ ಸೂಚಿಸಲಾಗಿದೆ ಎಂದರು.

ಶೇ. ೯೫ರಷ್ಟು ಅನುದಾನ ಬಳಕೆ

ತಾಲೂಕು ಪಂಚಾಯ್ತಿಯಲ್ಲಿ ಶೇ ೯೫ರಷ್ಟು ಅನುದಾನವನ್ನು ಬಳಸಿಕೊಳ್ಳಲಾಗಿದೆ ಮುಂದಿನ ವರ್ಷ ಶೇ ೧೦೦ರಷ್ಟು ಪ್ರಗತಿ ಕಾಣಬೇಕೆಂದು ಇಒ ರವರಿಗೆ ಸೂಚಿಸಲಾಗಿದೆ ಎಂದರಲ್ಲದೆ ಸರ್ಕಾರ ಗ್ರಾಮೀಣ ಜನರ ಬದುಕು ಹಸನಾಗಲೆಂದು ನಾನಾ ಯೋಜನೆಗಳನ್ನು ಜಾರಿಗೆ ತಂದಿದೆ, ಅದನ್ನು ಅನುಷ್ಠಾನ ಮಾಡುವುದು ಅಧಿಕಾರಿಗಳ ಹೊಣೆ. ಅಧಿಕಾರಿಗಳು ಜವಾಬ್ದಾರಿಯಿಂದ ಹಾಗೂ ಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯ ಪಾಲಿಸಿದರೆ ಎಲ್ಲಾ ಯೋಜನೆಗಳು ಅರ್ಹರಿಗೆ ತಲುಪಿ ಸರ್ಕಾರದ ಉದ್ದೇಶ ಈಡೇರುವುದರಲ್ಲಿ ಅನುಮಾನವೇ ಇಲ್ಲವೆಂದರು.ಸಭೆಯಲ್ಲಿ ತಾಪಂ ಇಒ ರವಿಕುಮಾರ್, ಸಿಡಿಪಿಒ ಮುನಿರಾಜು, ಬಿಸಿಯೂಟ ಅಧಿಕಾರಿ ಯುವರಾಜು, ಬಿಇಒ ಗುರುಮೂರ್ತಿ, ಟಿಹೆಚ್‌ಒ ಸುನೀಲ್ ಕುಮಾರ್ ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ಇದ್ದರು.

PREV

Recommended Stories

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : 3 ಜಿಲ್ಲೆಗಳಿಗೆ 3 ದಿನ ಯೆಲ್ಲೋ, 2 ದಿನ ಆರೆಂಜ್‌ ಅಲರ್ಟ್‌
ಅಲೆಮಾರಿಗಳಿಗೆ 6 ನಿರ್ಣಯ ಜಾರಿ ಮಾಡಿ ವಿಶೇಷ ಪ್ಯಾಕೇಜ್‌ಗೆ ಸಮಾಜ ಆಗ್ರಹ