ಘರ್ಷಣೆ ತಪ್ಪಿಸಲು ಲಾಠಿ: ಪುರಸಭಾ ಸದಸ್ಯನಿಗೆ ಗಾಯ

KannadaprabhaNewsNetwork |  
Published : Mar 19, 2025, 12:34 AM IST
೧೮ಎಸ್.ವಿ.ಪುರ-೨ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಪುರಸಭಾ ಸದಸ್ಯ ನಾಗೇಶ್‌ರನ್ನು ವಿಚಾರಿಸುತ್ತಿರುವುದು. | Kannada Prabha

ಸಾರಾಂಶ

ಪಂದ್ಯಾವಳಿಯಲ್ಲಿ ಘರ್ಷಣೆಗೆ ಇಳಿದ ಗುಂಪುಗಳು ಚದುರಿದರೂ ನಾಗೇಶ್‌ಕುಮಾರ್‌ ಸ್ಥಳದಿಂದ ಕದಲದೆ ಎಚ್ಚರಿಕೆಯನ್ನೂ ಕಡೆಗಣಿಸಿ ನಮ್ಮ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರಿಂದ ನಮ್ಮನ್ನು ರಕ್ಷಿಸಿ ಕೊಳ್ಳಲು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ದಿಸೆಯಲ್ಲಿ ಅವರನ್ನು ಥಳಿಸಿದ್ದು ನಿಜ ಎಂದು ತಿಳಿಸಿದ್ದಾರೆ. ನಾಗೇಶ್‌ ಮೈಮೇಲೆ ಆಗರುವ ಗಾಯಗಳು ಘರ್ಷಣೆಯಲ್ಲಿ ಅವರಿಗೆ ಉಂಟಾದ ಗಾಯಗಳು ಎಂದು ಪೊಲೀಸರು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರವಾಲಿಬಾಲ್ ಪಂದ್ಯಾವಳಿಯಲ್ಲಿ ಎರಡು ತಂಡಗಳ ನಡುವೆ ಉಂಟಾದ ಘರ್ಷಣೆಯನ್ನು ತಪ್ಪಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ ಸಂದರ್ಭದಲ್ಲಿ ಪುರಸಭೆ ಸದಸ್ಯರೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ನಂಬಿಹಳ್ಳಿಯಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ.

ಘರ್ಷಣೆ ತಪ್ಪಿಸಲು ಪೊಲೀಸರು ಲಾಠಿ ಬೀಸಿದಾಗ ಸ್ಥಳದಲ್ಲಿದ್ದರೆಲ್ಲ ಪರಾರಿಯಾಗಿದ್ದಾರೆ. ಆದರೆ ಶ್ರೀನಿವಾಸಪುರದ ಮಾರುತಿ ನಗರದ ಕ್ರೀಡಾ ತಂಡವನ್ನು ಪ್ರತಿನಿಧಿಸಿದ್ದ ಪುರಸಭೆ ಸದಸ್ಯ ಕೆ.ಆರ್.ನಾಗೇಶ್ ಕುಮಾರ್ ಎಂಬುವರು ಮಾತ್ರ ಸ್ಥಳದಿಂದ ಕದಲದೆ, ತಾವು ಪುರಸಭೆ ಸದಸ್ಯ ಎಂದು ಹೇಳಿದ್ದಾರೆ. ಉದ್ವಿಗ್ನ ಪರಿಸ್ಥಿತಿ ಇರುವ ಕಾರಣ ಸ್ಥಳದಿಂದ ತೆರಳುವಂತೆ ಪೊಲೀಸರು ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ನಾಗೇಶ್‌ ಕುಮಾರ್‌ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ನಾಗೇಶ್‌ ಕುಮಾರ್‌ ಪೊಲೀಸರಿಗೆ ಅವಾಚ್ಯ ಪದಗಳಿಂದ ನಿಂದಿಸಿದರು ಎನ್ನಲಾಗಿದೆ. ಪರಿಸ್ಥಿತಿ ನಿಯಂತ್ರಿಸುತ್ತಿದ್ದ ಪೊಲೀಸರು ನಾಗೇಶ್‌ಕುಮಾರ್‌ ಅ‍ವರನ್ನು ಥಳಿಸಿದ್ದಾರೆ. ಗಾಯಗೊಂಡ ನಾಗೇಶ್‌ರನ್ನು ಸ್ಥಳೀಯ ಗ್ರಾಮಸ್ಥರು ಪೊಲೀಸರಿಂದ ಬಿಡಿಸಿಕೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಚಿಕಿತ್ಸೆಗೆಂದು ಕರೆದುಕೊಂಡು ಹೋದಾಗ ಆಸ್ಪತ್ರೆಯಲ್ಲಿ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದರೂ ಪೊಲೀಸರು ಬಾರದ ಕಾರಣ ನಾಗೇಶ್ ಕುಮಾರ್‌ ಪ್ರತಿಭಟಿಸಿದರು. ಆಸ್ಪತ್ರೆಗೆ ಆಗಮಿಸಿದ ಪುರಸಭೆಯ ಇತರ ಸದಸ್ಯರು ಪ್ರತಿಭಟನೆ ನಡೆಸಿದರಲ್ಲಿದೆ ಲಾಠಿ ಪ್ರಹಾರ ಮಾಡಿದ ಮೂವರು ಪೇದೆಗಳ ವಿರುದ್ದ ಪ್ರಕರಣ ದಾಖಲಿಸಿ ಅಮಾನತು ಮಾಡುವಂತೆ ಒತ್ತಾಯಿಸಿದರು.

ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವ ಮಾಹಿತಿ ಅರಿತ ಡಿ.ವೈ.ಎಸ್.ಪಿ. ನಂದ ಕುಮಾರ್ ಸ್ಥಳಕ್ಕೆ ಆಗಮಿಸಿ ಪೊಲೀಸರ ವಿರುದ್ದ ಕ್ರಮ ಜರುಗಿಸುವುದಾಗಿ ಭರವಸೆ ನೀಡಿ ಪ್ರತಿಭಟನಾಕರರನ್ನು ಸಮಾಧಾನಗೊಳಿಸಿದರು.

ಈ ವೇಳೆಗೆ ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ನಾಗೇಶ್‌ಗೆ ಸಾಂತ್ವನ ಹೇಳಿದರು. ಸ್ಥಳದಲ್ಲಿಯೇ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ರಿಗೆ ಮೊಬೈಲ್ ಮೂಲಕ ನಡೆದ ಘಟನೆಯನ್ನು ವಿವರಿಸಿದರು. ಇದಕ್ಕೆ ಸ್ಪಂಧಿಸಿದ ಗೃಹ ಸಚಿವರು ಕ್ರಮ ಜರುಗಿಸಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಪೊಲೀಸರ ಸಮರ್ಥನೆ ಪಂದ್ಯಾವಳಿಯಲ್ಲಿ ಘರ್ಷಣೆಗೆ ಇಳಿದ ಗುಂಪುಗಳು ಚದುರಿದರೂ ನಾಗೇಶ್‌ಕುಮಾರ್‌ ಸ್ಥಳದಿಂದ ಕದಲದೆ ಎಚ್ಚರಿಕೆಯನ್ನೂ ಕಡೆಗಣಿಸಿ ನಮ್ಮ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರಿಂದ ನಮ್ಮನ್ನು ರಕ್ಷಿಸಿ ಕೊಳ್ಳಲು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ದಿಸೆಯಲ್ಲಿ ಅವರನ್ನು ಥಳಿಸಿದ್ದು ನಿಜ ಎಂದು ತಿಳಿಸಿದ್ದಾರೆ.

ಒಂದು ವೇಳೆ ನಾಗೇಶ್‌ರನ್ನು ಅವರನ್ನು ಅಲ್ಲಿಂದ ಕಳುಹಿಸದಿದ್ದರೆ ಇನ್ನು ಹೆಚ್ಚಿನ ಅನಾಹುತಗಳು ಆಗುವ ಸಂಭವ ಇತ್ತು, ಅವರ ಮೈಮೇಲೆ ಆಗರುವ ಗಾಯಗಳು ನಾವು ಲಾಠಿಯಿಂದ ಹೊಡೆದಾಗ ಉಂಟಾದ ಗಾಯಗಳಲ್ಲ. ಅವು ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಅವರಿಗೆ ಉಂಟಾದ ಗಾಯಗಳಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...