ಚನ್ನಪಟ್ಟಣ: ನಗರದಲ್ಲಿ ಕೆಲ ದಿನಗಳಿಂದ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ. ನೀರಿನ ಸಮಸ್ಯೆ ಉಲ್ಭಣಗೊಂಡಿದ್ದರೂ ಜಲಮಂಡಳಿ ಅಧಿಕಾರಿಗಳು ಉದಾಸೀನ ತೋರುತ್ತಿದ್ದಾರೆ ಎಂದು ಆರೋಪಿಸಿ ನಗರಸಭೆ ಸದಸ್ಯರು ಹಾಗೂ ಸಾರ್ವಜನಿಕರು ನಗರದ ಜಲಮಂಡಳಿ ಕಚೇರಿಗೆ ಮುತ್ತಿಗೆ ಹಾಕಿದರು.
ಮಂಗಳವಾರ ಸಾರ್ವಜನಿಕರೊಡನೆ ನಗರಸಭೆ ಅಧ್ಯಕ್ಷರು ಸೇರಿದಂತೆ ಸದಸ್ಯರು ಜಲಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ನೀರು ಪೂರೈಕೆಯ ವಿಚಾರದಲ್ಲಿ ಅಧಿಕಾರಿಗಳು ವಹಿಸಿರುವ ನಿರ್ಲಕ್ಷ್ಯದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.ನಗರ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ನೀರಿನ ಸಮಸ್ಯೆ ತೀವ್ರಗೊಂಡಿದೆ. ನಗರದ ನಿವಾಸಿಗಳಿಗೆ ಐದು ದಿನಗಳಿಗೊಮ್ಮೆ ನೀರು ಬಿಡುತ್ತಿದ್ದು, ಜನರು ನೀರಿಲ್ಲದೇ ಬವಣೆ ಅನುಭವಿಸುತ್ತಿದ್ದಾರೆ. ಇನ್ನು ಕೆಲವು ವಾರ್ಡ್‌ಗಳಲ್ಲಿ ಐದು ದಿನಕ್ಕೂ ಹೆಚ್ಚು ಕಾಲದಿಂದ ನೀರು ಬಿಡಲಾಗಿಲ್ಲ. ಈ ಬಗ್ಗೆ ಸಿಬ್ಬಂದಿಗಳನ್ನು ಪ್ರಶ್ನಿಸಿದರೆ ಅಧಿಕಾರಿಗಳನ್ನು ಕೇಳುವಂತೆ ಹೇಳುತ್ತಾರೆ, ಅಧಿಕಾರಿಗಳು ಯಾರ ಕರೆಗೂ ಉತ್ತರಿಸುವುದಿಲ್ಲ. ಕಚೇರಿಗೆ ಬಂದರೂ ಉದಾಸೀನತೆ ತೋರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳಿಗೆ ತರಾಟೆ:ಅಧಿಕಾರಿಗಳು ಕಚೇರಿಯಲ್ಲಿ ಫ್ಯಾನಿನ ಕೆಳಗೆ ತಂಪಾಗಿ ಕುಳಿತುಕೊಂಡಿರುತ್ತಾರೆ. ಆದರೆ, ಜನ ನೀರಿಲ್ಲದೆ ಪರದಾಡುತ್ತಿದ್ದಾರೆ. ಕುಳಿತ ಜಾಗದಲ್ಲೇ ಪ್ರತಿ ತಿಂಗಳು ಸಂಬಳ ಪಡೆಯುವ ನಿಮಗೆ ಜನಸಾಮಾನ್ಯರು ಪಡುವ ಕಷ್ಟಗಳ ಅರಿವಿಲ್ಲ, ನಿಮ್ಮ ಬೇಜವಾಬ್ದಾರಿಯಿಂದ ನಾವೂ ಪರಿಪಾಟಲು ಪಡುವಂತಾಗಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರ ಪ್ರದೇಶದಲ್ಲಿ ಇರುವ ನೀರಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಬದ್ಧತೆ ಪ್ರದರ್ಶಿಸಬೇಕು. ನಮಗೆ ನೀರುಕೊಡಿ, ಇಲ್ಲಾ ಕುರ್ಚಿಬಿಡಿ ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಸಾರ್ವಜನಿಕರನ್ನು ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ಸಮಾಧಾನಪಡಿಸಿದರು.
ಜಲಮಂಡಳಿ ಅಧಿಕಾರಿಗಳು ಮಾತನಾಡಿ, ಶಿಂಷಾ ನದಿಯಲ್ಲಿ ನೀರಿಲ್ಲದ ಕಾರಣ ಸಮಸ್ಯೆಯಾಗಿದೆ. ಕೆಲ ವಾರ್ಡ್‌ಗಳಲ್ಲಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು, ಸಮಸ್ಯೆ ಇರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವುದಾಗಿ ಭರವಸೆ ನೀಡಿದರು.ಈ ವೇಳೆ ನಗರಸಭಾ ಅಧ್ಯಕ್ಷ ಪ್ರಶಾಂತ್, ಪೌರಾಯುಕ್ತ ಪುಟ್ಟಸ್ವಾಮಿ. ಜಲಮಂಡಳಿ ಜೆಇ ಜಯಕುಮಾರ್, ಎಇ ಉಮೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರೆ ಕುಸುಮಾ, ನಗರಸಭಾ ಸದಸ್ಯರುಗಳಾದ ಸತೀಶ್ ಬಾಬು, ಕಂಠಿ, ಬಾವಾಸ, ಮತಿನ್, ನಾಗೇಶ್ ಮತ್ತಿತರರು ಹಾಜರಿದ್ದರು.ಪೋಟೊ೨೦ಸಿಪಿಟಿ೨:
ಚನ್ನಪಟ್ಟಣದ ಜಲಮಂಡಳಿ ಕಚೇರಿಗೆ ನಗರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಮುತ್ತಿಗೆ ಹಾಕಿದರು.