ನಗರಸಭೆ ಚುನಾವಣೆ: ಡಿಸಿ, ಎಸಿ, ಪೌರಾಯುಕ್ತರಿಗೆ ನ್ಯಾಯಾಂಗ ನಿಂದನೆ ಸಂಕಷ್ಟ?

KannadaprabhaNewsNetwork | Published : Mar 7, 2025 12:47 AM

ಸಾರಾಂಶ

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮುಂದೂಡುವಂತೆ ಫೆ. 28ರಂದು ಹೈಕೋರ್ಟ್ ನೀಡಿದ್ದ ಆದೇಶದ ನಡುವೆಯೂ ಚುನಾವಣೆ ಜರುಗಿಸಿ, ಧಾರವಾಡ ಉಚ್ಚ ನ್ಯಾಯಾಲಯದ ತೀರ್ಪನ್ನು ಪಾಲನೆ ಮಾಡದ ಹಿನ್ನೆಲೆಯಲ್ಲಿ ಮಾ. 5ರಂದು ವಿಚಾರಣೆ ನಡೆಸಿದ ನ್ಯಾಯಾಲಯ ಅಧಿಕಾರಿಗಳಿಗೆ ವಿವರಣೆ ಕೇಳಿ ನೋಟಿಸ್ ನೀಡಿದ್ದು, ಅಧಿಕಾರಿಗಳ ನ್ಯಾಯಾಂಗ ನಿಂದನೆಯ ಸಂಕಟ ಎದುರಾಗುವ ಸಾಧ್ಯತೆಗಳಿವೆ.

ಗದಗ:ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮುಂದೂಡುವಂತೆ ಫೆ. 28ರಂದು ಹೈಕೋರ್ಟ್ ನೀಡಿದ್ದ ಆದೇಶದ ನಡುವೆಯೂ ಚುನಾವಣೆ ಜರುಗಿಸಿ, ಧಾರವಾಡ ಉಚ್ಚ ನ್ಯಾಯಾಲಯದ ತೀರ್ಪನ್ನು ಪಾಲನೆ ಮಾಡದ ಹಿನ್ನೆಲೆಯಲ್ಲಿ ಮಾ. 5ರಂದು ವಿಚಾರಣೆ ನಡೆಸಿದ ನ್ಯಾಯಾಲಯ ಅಧಿಕಾರಿಗಳಿಗೆ ವಿವರಣೆ ಕೇಳಿ ನೋಟಿಸ್ ನೀಡಿದ್ದು, ಅಧಿಕಾರಿಗಳ ನ್ಯಾಯಾಂಗ ನಿಂದನೆಯ ಸಂಕಟ ಎದುರಾಗುವ ಸಾಧ್ಯತೆಗಳಿವೆ.

ಬುಧವಾರ ಅರ್ಜಿಯ ವಿಚಾರಣೆ ನಡೆಸಿದ ಪೀಠವು, ಫೆ. 28ರಂದು ಚುನಾವಣೆ ಮುಂದೂಡಿ ಆದೇಶಿಸಿದರೂ ಗದಗ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ಜರುಗಿದ ಬಗ್ಗೆ ಸರ್ಕಾರ ಪರ ವಕೀಲರಿಂದ ಮಾಹಿತಿ ಪಡೆದ ತಕ್ಷಣವೇ, ಚುನಾವಣಾ ಪ್ರಕ್ರಿಯೆ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದೆ. ಚುನಾವಣೆ ನಡೆಸಿದ ಕುರಿತು ವಿವರಣೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಉಪವಿಭಾಗಾಧಿಕಾರಿ (ಚುನಾವಣಾ ಅಧಿಕಾರಿ) ಎಂ. ಗಂಗಪ್ಪ ಹಾಗೂ ನಗರಸಭೆ ಪೌರಾಯುಕ್ತ ಆರ್. ಪವಾರ ಅವರಿಗೆ ನೋಟಿಸ್ ಜಾರಿ ಮಾಡಿದೆ. ಚುನಾವಣೆ ನಡೆಸಿದ್ದ ಕುರಿತು ಅಫಿಡವಿಟ್ ಮೂಲಕ ಅಧಿಕಾರಿಗಳು ಕೋರ್ಟ್‌ಗೆ ತಮ್ಮ ಹೇಳಿಕೆಯನ್ನು ಸಲ್ಲಿಸಬೇಕಿದೆ.

ಅಧಿಕಾರಿಗಳಿಗೆ ನೋಟಿಸ್: ನಗರಸಭೆ ಮಾಜಿ ಅಧ್ಯಕ್ಷೆ, ಸದಸ್ಯೆ ಉಷಾ ದಾಸರ, ಸದಸ್ಯರಾದ ಅನೀಲ ಅಬ್ಬಿಗೇರಿ, ಗೊಳಪ್ಪ ಮುಶಿಗೇರಿ ಅವರ ಸದಸ್ಯತ್ವವನ್ನು ಪ್ರಾದೇಶಿಕ ಆಯುಕ್ತರು 2ನೇ ಬಾರಿ ಅನರ್ಹತೆ ಮಾಡಿ ಆದೇಶಿಸಿದ್ದರು. ಈ ಅನರ್ಹತೆ ಆದೇಶ ರದ್ದು ಕೋರಿ ಸದಸ್ಯರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಹೈಕೋರ್ಟ್‌ ಆದೇಶದ ನಡುವೆಯೂ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸಿದ ಪ್ರಕರಣದ ವಿಚಾರಣೆಯನ್ನು ಮಾ. 5ರಂದು ನಡೆಸಿದ ಹೈಕೋರ್ಟ್‌, ಸದಸ್ಯರ ಅರ್ಜಿ ಮತ್ತು ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್‌ ಬುಧವಾರ ಒಟ್ಟಿಗೆ ನಡೆಸಿತ್ತು. ಸರ್ಕಾರದ ಪರ ವಕೀಲರು ಸರಿಯಾದ ಸಮಯದಲ್ಲಿ ಚುನಾವಣೆ ಮುಂದೂಡಿದ ಆದೇಶವನ್ನು ಚುನಾವಣಾ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ವಿವರಣೆ ಕೇಳಿ ಕೋರ್ಟ್‌ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.

ಅಧಿಕಾರಿಗಳಿಗೆ ಒತ್ತಡವಿತ್ತೇ ?:ಫೆ. 28ರಂದು ಚುನಾವಣೆ ನಡೆಯುವ ಹಿಂದಿನ ದಿನವೇ 3 ಜನ ಬಿಜೆಪಿ ಸದಸ್ಯರ ಸದಸ್ಯತ್ವ 2ನೇ ಬಾರಿಗೆ ರದ್ದಾಗಿದೆ. ಅವರು ಈ ಕುರಿತು ಮತ್ತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ಅದರ ವಿಚಾರಣೆಯೂ ಅಂದೇ ನಡೆಯುತ್ತಿದೆ ಎನ್ನುವ ವಿಷಯ ಚುನಾವಣಾಧಿಕಾರಿಗಳ ಗಮನಕ್ಕೆ ಬಾರದೇ ಹೋಗಿದೆ. ಚುನಾವಣೆ ವೇಳೆ ಅಧಿಕಾರಿಗಳಿಗೆ ಅದ್ಯಾವ ಪರಿಯ ಒತ್ತಡವಿತ್ತೋ ಗೊತ್ತಿಲ್ಲ. ಆದರೆ ಅಧಿಕಾರಿಗಳು ಮಾಡುವ ಈ ರೀತಿ ವ್ಯತಿರಿಕ್ತ ನಿರ್ಧಾರಗಳಿಂದಾಗಿ ಗದಗ-ಬೆಟಗೇರಿ ಅವಳಿ ನಗರದ ಜನತೆ ತೊಂದರೆ ಅನುಭವಿಸುವಂತಾಗಿದೆ. ನಗರಸಭೆ ಮೊದಲ ಅವಧಿ ಅಧ್ಯಕ್ಷ, ಉಪಾಧ್ಯಕ್ಷರ ವೇಳೆಯಲ್ಲಿಯೂ ಅಂದು ಚುನಾವಣಾಧಿಕಾರಿ ಆಗಿದ್ದ ಗದಗ ಎಸಿ ಅವರು ಕೂಡಾ ಸಾಕಷ್ಟು ಕಾನೂನು ಸಂಕಷ್ಟವನ್ನು ಎದುರಿಸುವಂತಾಗಿತ್ತು.

Share this article