ಪುರಸಭೆ ಚುನಾವಣೆ: ಎನ್ ಡಿಎ ಮೈತ್ರಿಕೂಟಕ್ಕೆ ಗೆಲುವು

KannadaprabhaNewsNetwork | Published : Sep 5, 2024 12:37 AM

ಸಾರಾಂಶ

ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಕೆ.ಎನ್.ಲೋಕೇಶ್ ಹಾಗೂ ಸಹಾಯಕರಾಗಿ ಗ್ರೇಡ್- 2 ತಹಸೀಲ್ದಾರ್ ಬಿ.ವಿ.ಕುಮಾರ್, ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಕಾರ್ಯನಿರ್ವಹಿಸಿದ್ದರು. ಮತದಾನದ ಹಕ್ಕು ಹೊಂದಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗೈರಾಗಿದ್ದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪುರಸಭೆ ನೂತನ ಅಧ್ಯಕ್ಷರಾಗಿ 4ನೇ ವಾರ್ಡ್ ನ ಪಕ್ಷೇತರ ಸದಸ್ಯ ಪುಟ್ಟಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ 18ನೇ ವಾರ್ಡ್ ನ ಪಕ್ಷೇತರ ಸದಸ್ಯ ಎನ್.ಬಸವರಾಜು (ಜಯಸಿಂಹ) ಆಯ್ಕೆಯಾದರು.

23 ಸದಸ್ಯರನ್ನು ಹೊಂದಿರುವ ಪುರಸಭೆಯಲ್ಲಿ ಜೆಡಿಎಸ್ 9, ಕಾಂಗ್ರೆಸ್ 5, ಬಿಜೆಪಿ 2, 7 ಮಂದಿ ಸದಸ್ಯರಿದ್ದರು. ಬುಧವಾರ ನಡೆದ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನ ಎಂ.ಆರ್.ರಾಜಶೇಖರ್ ಹಾಗೂ ಪಕ್ಷೇತರ ಸದಸ್ಯ ಪುಟ್ಟಸ್ವಾಮಿ ಮತ್ತು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯರಾದ ಎಸ್.ಕವಿತಾ ಕೃಷ್ಣ, ಎಂ.ಎನ್.ಶಿವಸ್ವಾಮಿ ಹಾಗೂ ಪಕ್ಷೇತರ ಎನ್.ಬಸವರಾಜು ನಾಮಪತ್ರ ಸಲ್ಲಿಸಿದ್ದರು. ಎಸ್.ಕವಿತಾ ಕೃಷ್ಣ ನಾಮಪತ್ರ ತಿರಸ್ಕೃತವಾಯಿತು.

ನಂತರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ 4ನೇ ವಾರ್ಡ್ ನ ಪಕ್ಷೇತರ ಸದಸ್ಯ ಪುಟ್ಟಸ್ವಾಮಿ ಪರ ಜೆಡಿಎಸ್ ನ 7 ಮಂದಿ, ಬಿಜೆಪಿಯ ಇಬ್ಬರು ಹಾಗೂ ನಾಲ್ವರು ಪಕ್ಷೇತರರು ಮತ ಚಲಾಯಿಸಿದರು. ಒಟ್ಟು 14 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಕಾಂಗ್ರೆಸ್ ನ ಎಂ.ಆರ್.ರಾಜಶೇಖರ್ ಅವರಿಗೆ ಕಾಂಗ್ರೆಸ್ ನ ಐವರು, ಜೆಡಿಎಸ್ ಹಾಗೂ ಪಕ್ಷೇತರ ತಲಾ ಇಬ್ಬರು ಸದಸ್ಯರು ಮತ ನೀಡಿದರು. 15 ಮತ ಪಡೆದ ಎನ್.ಬಸವರಾಜು ಉಪಾಧ್ಯಕ್ಷರಾಗಿ ಆಯ್ಕೆಯಾದರೆ, 8 ಮತಗಳಿಸಿದ ಎಂ.ಎನ್.ಶಿವಸ್ವಾಮಿ ಪರಾಭವಗೊಂಡರು.

ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಕೆ.ಎನ್.ಲೋಕೇಶ್ ಹಾಗೂ ಸಹಾಯಕರಾಗಿ ಗ್ರೇಡ್- 2 ತಹಸೀಲ್ದಾರ್ ಬಿ.ವಿ.ಕುಮಾರ್, ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಕಾರ್ಯನಿರ್ವಹಿಸಿದ್ದರು. ಮತದಾನದ ಹಕ್ಕು ಹೊಂದಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗೈರಾಗಿದ್ದರು.

ನೂತನ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಜೆಡಿಎಸ್- ಬಿಜೆಪಿ ಮುಖಂಡರ ಹಾಗೂ ಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಎಲ್ಲರ ಸಹಕಾರ ಪಡೆದು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ರೂಪಿಸಲಾಗುವುದು. ಪುರಸಭೆ ಅಭಿವೃದ್ಧಿಗೆ ಸ್ಥಳೀಯ ಶಾಸಕರ ಸಹಕಾರ ಪಡೆಯಲಾಗುವುದು ಎಂದು ಹೇಳಿದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಪುರಸಭೆಯಲ್ಲಿ ಎನ್ ಡಿಎ ಮೈತ್ರಿಕೂಟ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿದೆ. ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಇಂದ್ರೇಶ್ ಮಾತನಾಡಿ, ಮಂಡ್ಯ ನಗರಸಭೆ ಚುನಾವಣೆಯಲ್ಲಿ ಆರಂಭವಾದ ಸ್ಥಳೀಯ ಸಂಸ್ಥೆಯಲ್ಲಿನ ಜೆಡಿಎಸ್- ಬಿಜೆಪಿ ಮೈತ್ರಿ ಮತ್ತಷ್ಟು ಗಟ್ಟಿಯಾಗಿದೆ. ಈಗಾಗಲೇ ಪಾಂಡವಪುರ, ಮಳವಳ್ಳಿಯಲ್ಲೂ ಜೆಡಿಎಸ್- ಬಿಜೆಪಿ ಅಧಿಕಾರ ಹಿಡಿದಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಮುಖಂಡ ಜಿ.ಮುನಿರಾಜು ಮಾತನಾಡಿ, ಮಾಜಿ ಶಾಸಕ ಕೆ.ಅನ್ನದಾನಿ ಅವರೊಂದಿಗೆ ಸೇರಿ ಜೆಡಿಎಸ್- ಬಿಜೆಪಿ ಸದಸ್ಯರ ಸಹಕಾರದಿಂದ ಎನ್.ಡಿ.ಎ ಮೈತ್ರಿಕೂಟದ ಪುಟ್ಟಸ್ವಾಮಿ, ಎನ್.ಬಸವರಾಜು ಆಯ್ಕೆಯಾಗಿದ್ದು, ಅಭಿವೃದ್ಧಿಗೆ ಮುಂದಾಗಲಿ ಎಂದು ಹೇಳಿದರು.

ಇದೇ ವೇಳೆ ಜೆಡಿಎಸ್- ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಬಿ.ರವಿ ಕಂಸಾಗರ, ಪುರಸಭೆ ಸದಸ್ಯರಾದ ಎಂ.ಎನ್.ಕೃಷ್ಣ, ಟಿ.ನಂದಕುಮಾರ್, ರವಿ, ಎಂ.ಟಿ.ಪ್ರಶಾಂತ್, ಆರ್.ಎನ್.ಸಿದ್ದರಾಜು, ನೂರುಲ್ಲಾ, ಸವಿತಾ, ಮಣಿ, ರಾಧಾ ನಾಗರಾಜು, ಭಾಗ್ಯಮ್ಮ, ಪಿ.ಕುಮಾರ್ ನಾಗೇಶ್ ಹಾಗೂ ಜೆಡಿಎಸ್-ಬಿಜೆಪಿ ಮುಖಂಡರು ಇದ್ದರು.

Share this article