- ಬಿಜೆಪಿ ಪ್ರತಿಭಟನೆಯಿಂದ ಎಚ್ಚೆತ್ತ ತಾಲೂಕು ಆಡಳಿತ । ಪೌರಕಾರ್ಮಿಕರಿಂದ ಸ್ವಚ್ಛತಾ ಕಾರ್ಯ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ಪುರಸಭೆ ವ್ಯಾಪ್ತಿಯ ಪ್ರತಿ ವಾರ್ಡ್‌ಗಳಲ್ಲಿ ಶುಕ್ರವಾರ ಬೆಳಗ್ಗೆಯಿಂದ ಮುಖ್ಯಾಧಿಕಾರಿ ಜೆ.ವಿ. ಮಂಜುನಾಥ್ ನೇತೃತ್ವದಲ್ಲಿ ಅಧಿಕಾರಿ-ಸಿಬ್ಬಂದಿ ತಂಡ ಸ್ವಚ್ಛತಾ ಕಾರ್ಯ ಕೈಗೊಂಡಿತು.ಚನ್ನಗಿರಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಜನತೆಗೆ ದೊರೆಯಬಹುದಾದ ಮೂಲ ಸೌಲಭ್ಯಗಳನ್ನು ಕೊಡುವಲ್ಲಿ ಪುರಸಭೆ ಸೇರಿದಂತೆ ತಾಲೂಕು ಆಡಳಿತ ಸಂಪೂರ್ಣ ವಿಫಲಗೊಂಡಿದೆ ಎಂದು ಆರೋಪಿಸಿ ತಾಲೂಕು ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಈ ಹಿನ್ನೆಲೆ ಎಚ್ಚೆತ್ತ ಚನ್ನಗಿರಿ ಪುರಸಭೆಯು ಮುಖ್ಯಾಧಿಕಾರಿ ಜೆ.ವಿ.ಮಂಜುನಾಥ್, ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಕಿರಿಯ ಆರೋಗ್ಯ ನಿರೀಕ್ಷಕ ಲೋಕೇಶ್ ಮತ್ತಿತರ ಅಧಿಕಾರಿಗಳ ತಂಡ ವಾರ್ಡ್‌ಗಳಲ್ಲಿ ಪರಿಶೀಲನೆ ನಡೆಸಿತು. ಅಲ್ಲದೇ, ಪೌರಕಾರ್ಮಿಕರಿಂದ ಕಸ ವಿಲೇವಾರಿ ಮಾಡಿಸಿದರು.
ಪುರಸಭೆ ವ್ಯಾಪ್ತಿಯಲ್ಲಿರುವ 23 ವಾರ್ಡ್‌ಗಳಲ್ಲಿಯೂ ಇರುವ ಸಿಬ್ಬಂದಿ ನೆರವಿನಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಘಿದೆ. ಕೆಲ ಬಡವಾವಣೆಗಳ ನಿವಾಸಿಗಳು ಹಸಿಕಸ, ಒಣಕಸ, ಸ್ಯಾನಿಟೈಸರ್ ಕಸ, ವಿಶೇಷ ಕಾಳಜಿಯುಳ್ಳ ಕಸ ಎಂದು ವಿಂಗಡಿಸಿ ಪುರಸಭೆಯ ಕಸದ ಗಾಡಿಗಳಿಗೆ ಕೊಡುತ್ತಿಲ್ಲ. ಬದಲಿಗೆ ರಾತ್ರಿ ಸಮಯದಲ್ಲಿ ಈ ಕಸಗಳನ್ನು ತಂದು ರಸ್ತೆಗೆ ಸುರಿಯುತ್ತಿದ್ದಾರೆ. ಅಂಥ ನಿರ್ಲಕ್ಷ್ಯದ ನಾಗರಿಕರ ಮೇಲೆ ತೀವ್ರ ನಿಗಾ ಇಡಲಾಗಿದೆ. ಯಾರಾದರೂ ಮನಬಂದಂತೆ ಎಸೆಯುವುದು, ರಸ್ತೆ ಬದಿಗಳಲ್ಲಿ ತಂದು ಸುರಿಯುವುದು ಮಾಡಿದರೆ ಅಂಥವರ ವಿರುದ್ಧ ದಂಡ ವಿಧಿಸುವ ಜೊತೆಗೆ ಕಠಿಣ ಕಾನೂನು ಕ್ರಮಗಳನ್ನೂ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
- - -
ಚನ್ನಗಿರಿ ಪಟ್ಟಣದ ಜನತೆಗೆ ಕುಡಿಯುವ ನೀರನ್ನು ಸಮರ್ಪಕವಾಗಿ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನೀರು ವಿತರಣೆಯಲ್ಲಿ ಆಗಿರುವ ತಾಂತ್ರಿಕ ತೊಂದರೆಗಳನ್ನು ಶೀಘ್ರವೇ ಪರಿಹರಿಸುವ ಬಗ್ಗೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಕೆಲವರು ತಮ್ಮ ಮನೆಗಳನ್ನು ಚರಂಡಿಗಳ ಮೇಲೆಯೂ ವಿಸ್ತರಿಸಿದ್ದಾರೆ. ಇದರಿಂದ ಚರಂಡಿಗಳನ್ನು ಸ್ವಚ್ಛತೆ ಮಾಡಲು ಸಾಧ್ಯವಾಗುತ್ತಿಲ್ಲ. ಒತ್ತುವರಿ ತೆರವುಗೊಳಿಸಿ, ಸ್ವಚ್ಛತೆ ಕಾಪಾಡಲು ಪುರಸಭೆಯೊಂದಿಗೆ ನಾಗರೀಕರು ಕೈ ಜೋಡಿಸಬೇಕು.
- - -
ಚನ್ನಗಿರಿ ಪಟ್ಟಣದ ಪೇಟೆ ಬೀದಿಯಲ್ಲಿ ಪುರಸಭೆ ಮುಖ್ಯಾಧಿಕಾರಿ ಜೆ.ವಿ.ಮಂಜುನಾಥ್, ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಕಿರಿಯ ಆರೋಗ್ಯ ನಿರೀಕ್ಷಕ ಲೋಕೇಶ್ ತಂಡ ಸ್ವಚ್ಛತಾ ಪರಿಶೀಲನೆ ನಡೆಸಿದರು.