ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ದಸಂಸ ತಮಟೆ ಚಳವಳಿ

KannadaprabhaNewsNetwork |  
Published : Sep 13, 2024, 01:34 AM IST
5 | Kannada Prabha

ಸಾರಾಂಶ

. ಇದು ಕಳೆದ 30 ವರ್ಷಗಳ ಹೋರಾಟಕ್ಕೆ ಸಿಕ್ಕ ಜಯವಾಗಿದ್ದು, ಮೀಸಲಾತಿ ವ್ಯವಸ್ಥೆಯಲ್ಲಿ ಬಹಳ ಮುಖ್ಯವಾದ ಹೆಜ್ಜೆಯಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಕಲ್ಪಿಸಲು ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ತಕ್ಷಣವೇ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯವರು ನಗರದ ಪುರಭವನ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಗುರುವಾರ ತಮಟೆ ಚಳವಳಿ ಹಮ್ಮಿಕೊಂಡಿದ್ದರು.

ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಗಳಿಗೆ ಸಂವಿಧಾನ ಬದ್ಧವಾದ ಅಧಿಕಾರ ಇದೆ ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಇದು ಕಳೆದ 30 ವರ್ಷಗಳ ಹೋರಾಟಕ್ಕೆ ಸಿಕ್ಕ ಜಯವಾಗಿದ್ದು, ಮೀಸಲಾತಿ ವ್ಯವಸ್ಥೆಯಲ್ಲಿ ಬಹಳ ಮುಖ್ಯವಾದ ಹೆಜ್ಜೆಯಾಗಿದೆ. ಸುಪ್ರೀಂಕೋರ್ಟ್ 7 ನ್ಯಾಯಮೂರ್ತಿಗಳ ಸಂವಿಧಾನಿಕ ಪೀಠವು ಈ ವಿಚಾರದಲ್ಲಿದ್ದ ಗೊಂದಲ ಪರಿಹರಿಸಿದೆ ಎಂದು ಅವರು ತಿಳಿಸಿದರು.

ಒಳಮೀಸಲಾತಿ ಸಮಾನತೆ ಸಾಧಿಸಲು ಅಗತ್ಯ ಎಂದು ನ್ಯಾಯಾಲಯ ಹೇಳಿದೆ. ಈ ಜಾತಿಗಳ ಒಳಗೆ ಇರುವ ಕೆಲವು ಉಪ ಜಾತಿಗಳಿಗೆ ಮೀಸಲಾತಿಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ, ಇಂತಹ ಉಪ ಜಾತಿಗಳು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿವೆ. ಹಿಂದುಳಿದಿರುವಿಕೆಯ ಆಧಾರದಲ್ಲಿ ಒಳಮೀಸಲಾತಿ ನೀಡಿದರೆ ಈವರೆಗೆ ಮೀಸಲಾತಿಯ ಲಾಭ ಪಡೆದುಕೊಳ್ಳಲು ಸಾಧ್ಯವಾಗದ ಸಮುದಾಯಗಳಿಗೆ ಪ್ರಯೋಜನವಾಗಲಿದೆ. ಹೀಗಾಗಿ ಕೂಡಲೇ ಒಳಮೀಸಲಾತಿ ಜಾರಿಗೊಳಿಸುವಂತೆ ಅವರು ಆಗ್ರಹಿಸಿದರು.

ಪರಿಶಿಷ್ಟ ಜಾತಿಗಳಲ್ಲಿ ನೂರೊಂದು ಉಪಜಾತಿಗಳಿವೆ. ಸುಪ್ರೀಂಕೋರ್ಟ್ ಆದೇಶ ಬಂದು ಒಂದು ತಿಂಗಳು ಕಳೆದಿದ್ದರೂ ರಾಜ್ಯ ಸರ್ಕಾರ ಆದೇಶ ಅನುಷ್ಠಾನಗೊಳಿಸಿಲ್ಲ. ಕೂಡಲೇ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಆದೇಶ ಅನುಷ್ಠಾನಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ದಸಂಸ ಸಂಸ್ಥಾಪಕ ಪ್ರೊ.ಬಿ. ಕೃಷ್ಣಪ್ಪ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು. ಬಾಕಿ ಉಳಿದಿರುವ ಬ್ಯಾಕ್‌ ಲಾಗ್ ಹುದ್ದೆ, ಹೊಸ ನೇಮಕಾತಿ ಪ್ರಕ್ರಿಯೆಗಳನ್ನು ಒಳ ಮೀಸಲಾತಿ ಜಾರಿಯಾಗುವವರೆಗೆ ತಡೆ ಹಿಡಿಯಬೇಕು. ಬಗರ್ ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸಿ ಹಕ್ಕು ಪತ್ರ ನೀಡಬೇಕು ಎಂದು ಅವರು ಆಗ್ರಹಿಸಿದರು.

ದಸಂಸ ವಿಭಾಗೀಯ ಸಂಚಾಲಕ ಲೋಕೇಶ, ಜಿಲ್ಲಾ ಸಂಚಾಲಕ ಉಗ್ರಪ್ಪ, ಮುಖಂಡರಾದ ಎಚ್.ಎಸ್. ಗೋಪಾಲಕೃಷ್ಣಸ್ವಾಮಿ, ಪುಟ್ಟರಸು, ಆರ್. ಮಹೇಶ್, ಅನಿಲ್‌ ಕುಮಾರ್, ಕೆ.ಎಚ್. ವೆಂಕಟೇಶ್, ಮಹದೇವ್ ಹರವೆ, ವಿನಾಯಕ್, ಶಿವಣ್ಣ ಪಿಲ್ಲಳ್ಳಿ, ರಾಚಪ್ಪ ಜೆಟ್ಟಿಹುಂಡಿ, ಎಂ. ಮಲ್ಲೇಶ್, ಶಿವಪ್ಪ, ವೆಂಕಟೇಶ್, ವಿಜಯಕುಮಾರ್, ಲೋಕೇಶ್, ಸುನಿಲ್, ಸಿದ್ದರಾಜು, ಸೃಜನ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ