ಗದಗ: ಗದಗ-ಬೆಟಗೇರಿ ನಗರಸಭೆಯ ಅಮೂಲ್ಯ ಆಸ್ತಿಯನ್ನು ನಕಲಿ ಠರಾವು ಹಾಗೂ ಪೌರಾಯುಕ್ತರ ನಕಲು ಸಹಿ ಮಾಡಿ ಲೀಸ್ ನೀಡಿರುವ ನಗರಸಭೆಯ ಮಾಜಿ ಅಧ್ಯಕ್ಷೆ ಉಷಾ ದಾಸರ, ಸದಸ್ಯರಾದ ಅನಿಲ ಅಬ್ಬಿಗೇರಿ, ಮುತ್ತು ಮುಶಿಗೇರಿ, ನ್ಯಾಯಾಲಯಕ್ಕೆ ತಲುಪಿಸಿದ ವಿಜಯಲಕ್ಷ್ಮಿ ಶಿಗ್ಲಿಮಠ ಮತ್ತು ವಕಾರಗಳ (ಖಾಲಿ ಜಾಗ) ಸಂಘದ ಕಾರ್ಯದರ್ಶಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳುವಂತೆ ನಗರಸಭೆಯ ವಿರೋಧ ಪಕ್ಷದ ನಾಯಕ ಎಲ್.ಡಿ. ಚಂದಾವರಿ ಆಗ್ರಹಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆ ಆಸ್ತಿಯನ್ನು ಅಕ್ರಮವಾಗಿ ಲೀಸ್ ನೀಡುವ ಮೂಲಕ ಸರ್ಕಾರದ ಕಾನೂನನ್ನು ಉಲ್ಲಂಘಿಸಿದ್ದಾರೆ. ಅಷ್ಟೇ ಅಲ್ಲದೇ ಸರ್ಕಾರಿ ಅಧಿಕಾರಿಯ ಸಹಿ ನಕಲು ಮಾಡಿ ಬಹುದೊಡ್ಡ ಅಪರಾಧ ಎಸಗಿದ್ದಾರೆ ಎಂದರು.ಈ ಅಪರಾಧ 2024 ಜು. 22ರಂದೇ ನಡೆದಿದ್ದರೂ ಅಂದಿನಿಂದ ಇಂದಿನವರೆಗೂ ಯಾವುದೇ ಕಡತಗಳು ಯಾರಿಗೂ ಸಿಗದಂತೆ ನೋಡಿಕೊಂಡಿದ್ದಾರೆ. ನಮ್ಮ ಕೈಗೆ ಸಿಕ್ಕ ತಕ್ಷಣವೇ ಪೌರಾಯುಕ್ತರು, ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ ನಂತರ ಪ್ರಕರಣ ಸಂಪೂರ್ಣ ಹೊರಗಡೆ ಬಂದಿದೆ. ಈ ಅಕ್ರಮದಲ್ಲಿ ಮೂವರು ನಗರಸಭೆ ಸದಸ್ಯರು ಮಾತ್ರವಲ್ಲ, ಬಹುತೇಕ ಬಿಜೆಪಿ ಸದಸ್ಯರು ಶಾಮೀಲಾಗಿದ್ದಾರೆ. ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿದಾಗ ಇನ್ನಷ್ಟು ಸತ್ಯ ಹೊರಬರಲಿವೆ ಎಂದು ಹೇಳಿದರು.
ವಕಾರಗಳ ಲೀಸ್ ವಿಸ್ತರಣೆಯಲ್ಲಿ ₹ 2 ಕೋಟಿಗೂ ಅಧಿಕ ಹಣದ ವ್ಯವಹಾರ ನಡೆದಿದೆ. ಅದನ್ನು ಅಧ್ಯಕ್ಷರು ಹಾಗೂ ಇನ್ನಿತರ ಬಿಜೆಪಿ ಸದಸ್ಯರು ಪಡೆದುಕೊಂಡಿರುವ ಸಾಧ್ಯತೆ ಇದೆ. ಅದಕ್ಕಾಗಿ ಎಲ್ಲ ಸದಸ್ಯರನ್ನು ತನಿಖೆಗೆ ಒಳಪಡಿಸಬೇಕು. 120 ವರ್ಷಗಳ ಇತಿಹಾಸವಿರುವ ಗದಗ-ಬೆಟಗೇರಿ ನಗರಸಭೆಗೆ ಬಿಜೆಪಿಯವರ ಈ ಪ್ರಕರಣದಿಂದ ಕಳಂಕ ತಂದಿದ್ದಾರೆ ಎಂದು ದೂರಿದರು.ಸದ್ಯಕ್ಕೆ ಅಧಿಕಾರಿ ಪ್ರಶಾಂತ ವರಗಪ್ಪನವರ ನನ್ನ ಸಹಿ ನಕಲು ಮಾಡಲಾಗಿದೆ ಎಂದು ಪ್ರಕರಣ ದಾಖಲಿಸಿದ್ದಾರೆ. ಅದರ ಆಧಾರದಲ್ಲಿ ಪೊಲೀಸ್ ಇಲಾಖೆ ತನಿಖೆ ನಡೆಸುತ್ತದೆ. ತನಿಖೆಯ ಹಂತಗಳನ್ನು ಗಮನಿಸಿ ನಾವು ಮುಂದಿನ ಕಾನೂನು ಹೋರಾಟದ ಬಗ್ಗೆ ನಿರ್ಧರಿಸುತ್ತೇವೆ ಎಂದರು.
ಇದೇ ವಕಾರಗಳ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದ ರಾಜ್ಯ ಸರ್ಕಾರ (ಕಾಂಗ್ರೆಸ್) ನಗರಸಭೆಯಲ್ಲಿ ಆಡಳಿತ ಮಂಡಳಿ ಇದ್ದರೂ ಅಲ್ಲಿ ಚರ್ಚಿಸದೇ ನಿರ್ಧಾರ ತೆಗೆದುಕೊಂಡಿತ್ತು. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು, ಅದು ಸರ್ಕಾರ ಕ್ಯಾಬಿನೆಟ್‌ನಲ್ಲಿ ಮಾಡಿರುವ ನಿರ್ಧಾರ, ಅದನ್ನು ನಾವು ಪ್ರಶ್ನಿಸಲು ಬರುವುದಿಲ್ಲ ಎಂದರು. ಅದೇ ಮಾದರಿಯಲ್ಲಿ ಸರ್ಕಾರ ಗದಗ ಬೆಟಗೇರಿ ಅವಳಿ ನಗರದಲ್ಲಿ ಒತ್ತುವರಿಯಾಗಿರುವ, ಲೀಜ್ ಮುಗಿದಿರುವ ಎಲ್ಲ ಆಸ್ತಿಗಳನ್ನು ಮರು ಪಡೆದುಕೊಳ್ಳಲು ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.ಬಿಜೆಪಿಯವರನ್ನು ಸೆಳೆಯಲು ಮಾಡಿದ ಪ್ರಯತ್ನವೇ?
ಈ ಪ್ರಕರಣಕ್ಕೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೂ ಸಂಬಂಧವೇ ಇಲ್ಲ, ಬಿಜೆಪಿಯವರಿಗೆ ಸ್ಪಷ್ಟ ಬಹುಮತವಿದೆ. ಬಿಜೆಪಿಯ ಹಿಂದಿನ 30 ತಿಂಗಳ ಆಡಳಿತದಿಂದ ಅವರ ಸದಸ್ಯರೇ ರೋಸಿ ಹೋಗಿದ್ದಾರೆ. ಬೇಸರದಿಂದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ವೇಳೆಯಲ್ಲಿ ಯಾರಾದರೂ ನಮ್ಮ ಪಕ್ಷಕ್ಕೆ ಬರುವುದಾದರೆ ಬರಲಿ, ಆ ಬಗ್ಗೆ ನಂತರ ವಿಚಾರ ಮಾಡೋಣ ಎಂದರು.ಸುದ್ದಿಗೋಷ್ಠಿಯಲ್ಲಿ ಹಿರಿಯ ಸದಸ್ಯರಾದ ಬರ್ಕತಅಲಿ ಮುಲ್ಲಾ, ಚಂದ್ರು ಕರಿಸೋಮನಗೌಡ್ರ ಹಾಗೂ ಅನೇಕ ಕಾಂಗ್ರೆಸ್ ಸದಸ್ಯರು ಹಾಜರಿದ್ದರು.