ಬೀದಿ ಬದಿ ವ್ಯಾಪಾರಕ್ಕೆ ನಲುಗಿದ ಪುರಸಭೆ ಮಳಿಗೆಕಾರರು!

KannadaprabhaNewsNetwork |  
Published : Jul 15, 2024, 02:01 AM ISTUpdated : Jul 15, 2024, 11:38 AM IST
ಫೋಟೋ: 3ಜಿಎಲ್ಡಿ1- ಗುಳೇದಗುಡ್ಡದಲ್ಲಿರುವ  ಭಾರತ ಮಾರುಕಟ್ಟೆಯ ಅವ್ಯಸ್ಥಿತ ಸಂತೆ ಬಜಾರದ ರಸ್ತೆ  | Kannada Prabha

ಸಾರಾಂಶ

ಪಟ್ಟಣದಲ್ಲಿ ಭಾರತ ಮಾರುಕಟ್ಟೆಯಲ್ಲಿ ಪುರಸಭೆಯಿಂದ ಐವತ್ತು ಮಳಿಗೆಗಳು ಇವೆ. ಈ 50 ಮಳಿಗೆಗಳಲ್ಲಿ 10-15 ಮಳಿಗೆಗಳು ಮಾತ್ರ ಟೆಂಡರ್ ಮೂಲಕ ಹೋಗಿವೆ. ಉಳಿದ ಮಳಿಗೆಗಳು ಖಾಲಿ ಉಳಿದಿವೆ

ಡಾ.ಸಿ.ಎಂ.ಜೋಶಿ

 ಗುಳೇದಗುಡ್ಡ :  ಪಟ್ಟಣದಲ್ಲಿ ಭಾರತ ಮಾರುಕಟ್ಟೆಯಲ್ಲಿ ಪುರಸಭೆಯಿಂದ ಐವತ್ತು ಮಳಿಗೆಗಳು ಇವೆ. ಈ 50 ಮಳಿಗೆಗಳಲ್ಲಿ 10-15 ಮಳಿಗೆಗಳು ಮಾತ್ರ ಟೆಂಡರ್ ಮೂಲಕ ಹೋಗಿವೆ. ಉಳಿದ ಮಳಿಗೆಗಳು ಖಾಲಿ ಉಳಿದಿವೆ. ಆದರೆ, ಮಾರುಕಟ್ಟೆಯಲ್ಲಿ ಮಾರುಕಟ್ಟೆಯ ರಸ್ತೆಗಳಲ್ಲಿ ವ್ಯಾಪಾರ ಹೆಚ್ಚಾಗಿರುವ ಕಾರಣಕ್ಕೆ ಪುರಸಭೆಯಿಂದ ಮಳಿಗೆ ಪಡೆದಿರುವ ಮಳಿಗೆದಾರರ ಮಳಿಗೆಗಳತ್ತ ಜನರು ಹೋಗದೇ ಇರುವ ಕಾರಣಕ್ಕೆ ಅವರು ಆರ್ಥಿಕ ಹೊಡೆತ ಅನುಭವಿಸುವ ಸ್ಥಿತಿ ನಿರ್ಮಾಣಗೊಂಡಿದೆ. ಇತ್ತ ಪುರಸಭೆಯವರು ಕೂಡಾ ಕಣ್ಣಿದು ಕುರುಡರಂತೆ ವರ್ತಿಸುತ್ತಿರುವ ಕಾರಣ ಭಾರತ ಮಾರುಕಟ್ಟೆ ಅವ್ಯಸ್ಥೆಯ ಆಗರವಾಗಿ ಪರಿಣಮಿಸಿದೆ.

ಹೌದು, ಭಾರತ ಮಾರುಕಟ್ಟೆಯಲ್ಲಿ 50 ಮಳಿಗೆಗಳಿಗೆ ಈ ಕೆಲವು ವರ್ಷಗಳ ಹಿಂದೆ ಪುರಸಭೆಯಿಂದ ಟೆಂಡರ್‌ ಮಾಡಲಾಗಿತ್ತು. ಈ ವೇಳೆ ವ್ಯಾಪಾರಸ್ಥರು ನಿರಾಸಕ್ತಿ ತೋರಿದ್ದರಿಂದ ಕೇವಲ 10-15 ಮಳಿಗೆಗಳು ಮಾತ್ರ ಹರಾಜಾದವು. ಉಳಿದ ಮಳಿಗೆಗಳು ಖಾಲಿ ಬಿದ್ದು ಇದೀಗ ಹಾಳಾಗಿ ಹೋಗುತ್ತಿದೆ.

ವ್ಯಾಪಾರಿಗಳಿಗೆ ಸರಿಯಾದ ಸ್ಥಳ ತೋರಿಸದ ಕಾರಣ ತಳ್ಳುಗಾಡಿಗಳ ವ್ಯಾಪಾರಸ್ಥರು ರಸ್ತೆ ಮೇಲೆಯೇ ವ್ಯಾಪಾರ ಮಾಡುತ್ತಿದ್ದಾರೆ. ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಭಾರತ್‌ ಮಾರುಕಟ್ಟೆಯ ತಳ್ಳುಗಾಡಿಗಳಿಗೆ ಸೂಕ್ತ ಸ್ಥಳ ಒದಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಂಚಾರಕ್ಕೂ ಸಂಚಕಾರ:

ಪಟ್ಟಣದ ಕೇಂದ್ರ ಸ್ಥಳವಾಗಿರುವ ಭಾರತ್‌ ಮಾರ್ಕೆಟ್‌ನಲ್ಲಿ ಪ್ರತಿ ಬುಧವಾರ ಮತ್ತು ಗುರುವಾರ ಸಂತೆ ನಡೆಯುತ್ತದೆ. ಸಂತೆಗೆ ತಾಲೂಕಿನ ಸುಮಾರು 20ಕ್ಕೂ ಅಧಿಕ ಗ್ರಾಮಗಳ ರೈತರು ತರಕಾರಿ, ಹಣ್ಣು, ಧವಸಧಾನ್ಯ ಇತ್ಯಾದಿ ತಂದು ಮಾರಾಟ ಮಾಡುತ್ತಾರೆ. ಸಂತೆ ಬೆಳಗ್ಗೆ 11 ರಿಂದ 6 ಗಂಟೆವರೆಗೆ ಜನಜಂಗುಳಿಯಿಂದ ಕೂಡಿರುತ್ತದೆ. ಮಾರುಕಟ್ಟೆಯೊಳಗೆ ವ್ಯಾಪಾರಕ್ಕೆ ಸಾಕಷ್ಟು ಸ್ಥಳಾವಕಾಶವಿದ್ದರೂ ವ್ಯಾಪಾರಿಗಳು ಮಾತ್ರ ರಸ್ತೆ ಮೇಲೆ ಎರಡೂ ಬದಿಗೆ ವಸ್ತುಗಳನ್ನಿಟ್ಟು ವ್ಯಾಪಾರ ಮಾಡುತ್ತಾರೆ. ಇದರಿಂದ ವ್ಯಾಪಾರಕ್ಕೆ ಬರುವ ಸಾರ್ವಜನಿಕರಿಗೆ ರಸ್ತೆ ಮೇಲಿನ ಸಂಚಾರವೇ ದುಸ್ತರವಾಗುತ್ತಿದೆ.

ಅನಧಿಕೃತ ಶೆಡ್‌ಗಳ ನಿರ್ಮಾಣ:

ಭಾರತ ಮಾರುಕಟ್ಟೆ ಒಳಗೆ ಸಾಕಷ್ಟು ವಿಶಾಲವಾದ ಪ್ರಾಂಗಣ, ಅಂಗಡಿಗಳು, ವಿಶಾಲವಾದ ಸ್ಥಳ ಇದ್ದರೂ, ತಳ್ಳುಗಾಡಿಗಳು ಒಳಗೆ ವಸ್ತು ಮಾರಾಟ ಮಾಡದೇ ರಸ್ತೆ ಮೇಲೆಯೇ ವ್ಯಾಪಾರ ಮಾಡುವುದರಿಂದ ಸಣ್ಣಪುಟ್ಟ ವಾಹನಗಳ ಸಂಚಾರಕ್ಕೆ, ಸಂತೆಗೆ ರೈತರ ಚಕ್ಕಡಿಗಳಿಗೆ ದಾರಿಯೇ ಇಲ್ಲದಾಗುತ್ತದೆ. ಇದರಿಂದ ಗ್ರಾಹಕರಿಗೂ ಅಡಚಣೆ ಉಂಟಾಗುತ್ತಿದೆ. ಪುರಸಭೆ ಸಂತೆ ಕರ ವಸೂಲಿ ಮಾಡುತ್ತದೆ. ಆದರೆ, ಅವರಿಗೆ ನಿರ್ದಿಷ್ಟ ಸ್ಥಳ ಗುರುತು ಮಾಡಿ ಕೊಟ್ಟರೆ ವ್ಯಾಪಾರಕ್ಕೂ ಅನುಕೂಲವಾಗುತ್ತದೆ. ಮಾರುಕಟ್ಟೆ ಹೊರಗಡೆ ಹಲವಾರು ವ್ಯಾಪಾರಿಗಳು ಅನಧಿಕೃತ ಶೆಡ್ ನಿರ್ಮಿಸಿ ವ್ಯಾಪಾರ ಮಾಡುತ್ತಿದ್ದಾರೆ. ಆ ಶೆಡ್‌ಗಳ ಮುಂದೆ ಮತ್ತೆ ತರಕಾರಿ ಇನ್ನಿತರ ವ್ಯಾಪಾರವೂ ನಡೆಯುತ್ತದೆ. ಇದರಿಂದ ರಸ್ತೆ ಇಕ್ಕಟ್ಟಾಗಿ ವ್ಯಾಪಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ. ಕೆಲವೊಮ್ಮೆ ಸಂತೆಯಲ್ಲಿ ವಾಹನ ಸಂಚಾರ ಸ್ಥಗಿತವಾಗಿ ಪರಸ್ಪರರಲ್ಲಿ ಜಗಳಗಳು, ಸಂತೆಯಲ್ಲಿ ಬೀದಿ ದನಗಳ ಹಾವಳಿಗಳಿಂದ ಅಪಾಯವೂ ಕಂಡುಬರುತ್ತಿದೆ.

ಪುರಸಭೆ ಮುಖ್ಯಾಧಿಕಾರಿಗಳು ಎಚ್ಚೆತ್ತು ಭಾರತ ಮಾರುಕಟ್ಟೆ ಒಳಗೆ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕು. ತಳ್ಳುಗಾಡಿಗಳ ಹಾಗೂ ತರಕಾರಿ ಮಾರಾಟ ಮಾಡುವ ವ್ಯಾಪಾರಸ್ಥರಿಗೆ ರಸ್ತೆ ಮೇಲೆ ವ್ಯಾಪಾರ ಮಾಡದಂತೆ ಅವರನ್ನು ಸ್ಥಳಾಂತರ ಮಾಡಿ ಸೂಕ್ತ ಸ್ಥಳಾವಕಾಶ ನೀಡಿ ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಡಬೇಕು. ಇನ್ನೂ ಪುರಸಭೆಯಿಂದ ಮಳಿಗೆ ಪಡೆದು ವ್ಯಾಪಾರ ನಡೆಸುತ್ತಿರುವ ವ್ಯಾಪಾರಸ್ಥರಿಗೆ ಅನುಕೂಲವಾಗುವ ರೀತಿಯಲ್ಲಿ ಪುರಸಭೆ ತನ್ನ ನಡೆ ಅನುಸರಿಸಬೇಕು ಎಂದು ಇಲ್ಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.--

ಭಾರತ ಮಾರುಕಟ್ಟೆಯ ಅವ್ಯವಸ್ಥೆ ನಮ್ಮ ಗಮನಕ್ಕೂ ಬಂದಿದೆ. ರಸ್ತೆ ಮೇಲೆಯೇ ವ್ಯಾಪಾರ ಮಾಡುವ, ಅನಧಿಕೃತ ಶೆಡ್ ನಿರ್ಮಿಸಿಕೊಂಡಿರುವ ವ್ಯಾಪಾರಿಗಳಿಂದ ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತಿದೆ. ವ್ಯಾಪಾರಿಗಳಿಗೆ ಸೂಕ್ತ ಸ್ಥಳ ನೀಡಿ ವಾರದ ಸಂತೆ ಮತ್ತು ವ್ಯಾಪಾರಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ.

-ಎ.ಎಚ್. ಮುಜಾವರ, ಮುಖ್ಯಾಧಿಕಾರಿ ಪುರಸಭೆ ಗುಳೇದಗುಡ್ಡ

---

ನಾನು ಪುರಸಭೆಯಿಂದ ಮಳಿಗೆ ಪಡೆದುಕೊಂಡಿದ್ದೇನೆ. ಆದರೆ, ಅದೇಷ್ಟೋ ವ್ಯಾಪಾಸ್ಥರು ಬೀದಿ, ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಹೀಗಾಗಿ ಗ್ರಾಹಕರು ನಮ್ಮ ಮಳಿಗೆಗಳಿಗೆ ಬರುತ್ತಿಲ್ಲ. ಹೀಗಾಗಿ ನಮಗೆ ತುಂಬಾ ನಷ್ಟವಾಗುತ್ತಿದೆ. ಇದಕ್ಕೆ ಪುರಸಭೆಯವರೇ ಒಂದು ದಾರಿ ತೋರಿಸಬೇಕು.

-ಮಹೇಶ ಬಿಜಾಪುರ, ಕಿರಾಣಿ ಅಂಗಡಿ

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ