ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆತ ತಪ್ಪಿಸಲು ರಂಗೋಲಿಗೆ ಮೊರೆ ಹೋದ ಪಾಲಿಕೆ ಸಿಬ್ಬಂದಿ

KannadaprabhaNewsNetwork |  
Published : Jan 31, 2026, 02:30 AM IST
ಬಳ್ಳಾರಿಯ ಮಯೂರ ಹೋಟೆಲ್ ಬಳಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ತೆರವುಗೊಳಿಸಿದ ಪಾಲಿಕೆ ಸಿಬ್ಬಂದಿ ಸ್ಥಳ ಶುಚಿಗೊಳಿಸಿ ರಂಗೋಲಿ ಹಾಕಿದರಲ್ಲದೆ, ಸುತ್ತಮುತ್ತಲ ಜನರಿಗೆ ಇಲ್ಲಿ ಕಸ ಹಾಕರಬಾರದು ಎಂದು ಮನವರಿಕೆ ಮಾಡಿಕೊಟ್ಟರು.  | Kannada Prabha

ಸಾರಾಂಶ

ರಸ್ತೆಯಲ್ಲಿ ಕಸ ಸುರಿಯುವ ಪರಿಪಾಠ ತಪ್ಪಿಸಲು ಮಹಾನಗರ ಪಾಲಿಕೆ ವಿನೂತನ ಮಾರ್ಗ ಕಂಡುಕೊಂಡಿದೆ

ಮಂಜುನಾಥ್ ಕೆ.ಎಂ

ಬಳ್ಳಾರಿ: ಸಾರ್ವಜನಿಕ ಸ್ಥಳದಲ್ಲಿ ಕಸ ಬಿಸಾಡುವುದನ್ನು ತಪ್ಪಿಸಲು ಈಗಾಗಲೇ ಅನೇಕ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವ ಮಹಾನಗರ ಪಾಲಿಕೆ ಇದೀಗ ಕಸ ಹಾಕುವ ಜಾಗದಲ್ಲಿ ಬಣ್ಣಬಣ್ಣದ ರಂಗೋಲಿ ಹಾಕಿ ಜನರಲ್ಲಿ ಅರಿವು ಮೂಡಿಸಲು ಮುಂದಾಗಿದೆ.

ನಗರದ ಸಾರ್ವಜನಿಕ ಜಾಗಗಳಲ್ಲಿ ಸ್ಥಳೀಯರು, ಹೋಟೆಲ್, ಅಂಗಡಿಯವರು ತ್ಯಾಜ್ಯವನ್ನು ರಸ್ತೆಯಲ್ಲಿ ಎಸೆಯುತ್ತಿದ್ದು, ಇದನ್ನು ತಪ್ಪಿಸಲು ಪಾಲಿಕೆಯ ಸಿಬ್ಬಂದಿ ತ್ಯಾಜ್ಯ ತುಂಬಿದ ಜಾಗ ಸ್ವಚ್ಛಗೊಳಿಸಿ ರಂಗೋಲಿ ಹಾಕುತ್ತಿದ್ದಾರೆ. ಬಳಿಕ ಸುತ್ತಮುತ್ತಲ ಅಂಗಡಿ, ಹೋಟೆಲ್‌ಗಳ ಮಾಲೀಕರಿಗೆ ಕಸವನ್ನು ರಸ್ತೆಯಲ್ಲಿ ಎಸೆಯುವಂತಿಲ್ಲ. ತ್ಯಾಜ್ಯ ಎಸೆಯುವ ಕೃತ್ಯ ಮುಂದುವರಿದರೆ ಪಾಲಿಕೆಯಿಂದಲೇ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ.

ರಂಗೋಲಿ ಬಿಡಿಸಿದ ಜಾಗದಲ್ಲಿ "ಇಲ್ಲಿ ಕಸ ಹಾಕಬಾರದು " ಎಂದು ಬರೆದು, ಮತ್ತೊಮ್ಮೆ ಕಸ ಹಾಕಿದವರಿಗೆ ದಂಡ ಪ್ರಯೋಗ ಮಾಡುವುದಾಗಿ ಮನವರಿಕೆ ಮಾಡಿಕೊಡುತ್ತಿದ್ದಾರೆ.

ಕಸ ರಸ್ತೆಗೆ ಎಸೆಯುತ್ತಾರೆ

ನಗರದ ಎಲ್ಲ ವಾರ್ಡ್‌ಗಳು ಪ್ರಮುಖ ರಸ್ತೆಗಳಲ್ಲಿ ನಿತ್ಯ ಮಹಾನಗರ ಪಾಲಿಕೆಯ ವಾಹನ ತೆರಳಿ ಕಸ ಸಂಗ್ರಹಿಸುತ್ತದೆ. ಬೆಳಗಿನ ಜಾವದಿಂದಲೇ ವಾಹನ ಮನೆಯ ಮುಂದೆ ಬಂದು ಕಸ ನೀಡುವಂತೆ ಮನವಿ ಮಾಡುತ್ತದೆ. ಆದಾಗ್ಯೂ ಕೆಲವರು ಕಸವನ್ನು ರಸ್ತೆಯಲ್ಲಿ ಸುರಿಯುವ ಪರಿಪಾಠ ಮುಂದುವರಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯದಂತೆ ಎಷ್ಟು ಬಾರಿ ತಿಳಿಸಿ ಹೇಳಿದರೂ ಪ್ರಯೋಜನವಾಗಿಲ್ಲ. ಕಸ ಎಸೆಯುವ ಜಾಗವನ್ನು ಪಾಲಿಕೆಯ ಸಿಬ್ಬಂದಿಯೇ ಸ್ವಚ್ಛಗೊಳಿಸಿ, ನಿಗದಿತ ಜಾಗದಲ್ಲಿ ರಂಗೋಲಿ ಹಾಕಲಾಗುತ್ತದೆ. ಇದೇ ವೇಳೆ ಅಕ್ಕಪಕ್ಕದ ಮನೆಗಳು, ಅಂಗಡಿ, ಹೋಟೆಲ್‌ನವರಿಗೆ ಇಲ್ಲಿ ಕಸ ಹಾಕಬಾರದು ಎಂಬ ಎಚ್ಚರಿಕೆ ಸಹ ನೀಡುತ್ತದೆ. ಇಷ್ಟಾಗಿಯೂ ಕಸ ಹಾಕುವುದು ಮುಂದುವರಿಸಿದರೆ ಮುಂದಿನ ಹಂತದ ಕ್ರಮ ವಹಿಸಲು ಪಾಲಿಕೆ ನಿರ್ಧರಿಸಿದ್ದು, ಹೀಗೆ ನಗರದ ನಾನಾ ಕಡೆಗಳಲ್ಲಿ ಕಸ ಹಾಕುವ ಜಾಗವನ್ನು ಗುರುತಿಸಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದೆ.

ನಗರದ ಹೋಟೆಲ್ ಮಯೂರ ಬಳಿ ಸಂಗ್ರಹಗೊಂಡಿದ್ದ ತ್ಯಾಜ್ಯವನ್ನು ಪಾಲಿಕೆ ಸಿಬ್ಬಂದಿ ತೆರವುಗೊಳಿಸಿ, ನೀರು ಹಾಕಿ ಶುಚಿಗೊಳಿಸಿದರು. ಬಳಿಕ ವಿವಿಧ ಬಗೆಯ ರಂಗೋಲಿ ಹಾಕಿ ಚಿತ್ತಾರ ಬಿಡಿಸಿದರು. ಇಲ್ಲಿ ಕಸ ಹಾಕಿದರೆ ದಂಡ ಹಾಕುವ ಎಚ್ಚರಿಕೆಯ ಬೋರ್ಡ್‌ನ್ನು ಬರೆದು ಕಸ ಎಸೆಯುವವರಿಗೆ ಮುಂದಿನ ಹಂತದಲ್ಲಿ ಶಿಸ್ತು ಕ್ರಮ ಜರುಗಿಸುವ ಸಂದೇಶ ರವಾನಿಸಿದರು.

ನಗರದಲ್ಲಿ ತ್ಯಾಜ್ಯ ನಿರ್ವಹಣೆಯೇ ದೊಡ್ಡ ಸವಾಲಾಗಿದೆ. ನಗರದ ಮುಖ್ಯ ರಸ್ತೆಗಳು, ವೃತ್ತಗಳು, ವಿವಿಧ ಬಡಾವಣೆಗಳಲ್ಲಿ ಬೀದಿಯಲ್ಲಿ ಬಿಸಾಡುವ ಕಸವನ್ನು ನಿಯಂತ್ರಿಸಲು ಪಾಲಿಕೆ ಸಿಬ್ಬಂದಿ ರಂಗೋಲಿಯ ಮೊರೆ ಹೋಗಿದೆ. ಆದರೆ, ಇದು ಎಷ್ಟರ ಮಟ್ಟಿಗೆ ಫಲ ನೀಡುತ್ತದೆಯೋ ಕಾದು ನೋಡಬೇಕಿದೆ.ಧ್ವಜಸ್ತಂಭ ನಿರ್ಮಾಣ

ಅತ್ಯಂತ ಸುಶಿಕ್ಷಿತರು, ಉದ್ಯೋಗಸ್ಥರು, ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನಲಾದ ಬಳ್ಳಾರಿಯ ಪಾರ್ವತಿನಗರದಲ್ಲಿ ಕಸವನ್ನು ರಸ್ತೆಗೆ ಎಸೆಯುವವರ ಸಂಖ್ಯೆ ದೊಡ್ಡದಿದೆ. ಇದರಿಂದ ಪಾರಾಗಲು ಕಾಲನಿಯ 2ನೇ ತಿರುವು ರಸ್ತೆಯ ನಿವಾಸಿಗಳು ಕಸ ಬಿಸಾಡುವ ಜಾಗದಲ್ಲಿ "ಇಲ್ಲಿ ಕಸ ಹಾಕಬೇಡಿ " ಎಂದು ಬೋರ್ಡ್ ಬರೆಸಿದರು. ಆದರೂ ಕಸ ಎಸೆಯುವ ಕೃತ್ಯ ನಿಲ್ಲಲಿಲ್ಲ. ಗೋಡೆಗೆ ದೇವರ ಫೋಟೋಗಳನ್ನು ಅಂಟಿಸಿದರು. ಇಷ್ಟಾಗಿಯೂ ಕಸ ಬಿಸಾಡುವವರ ವಿಕೃತ ಮನಸ್ಸು ಬದಲಾಗದ ಹಿನ್ನೆಲೆಯಲ್ಲಿ ನಿರ್ದಿಷ್ಟ ಜಾಗದಲ್ಲಿ ಧ್ವಜಸ್ತಂಭ ನಿರ್ಮಿಸಿ, ಎದುರಿಗೆ ಸಿಸಿಟಿವಿ ಅಳವಡಿಸಿದ್ದಾರೆ. ಧ್ವಜಸ್ತಂಭ ನಿರ್ಮಾಣದ ಬಳಿಕ ರಾಷ್ಟ್ರೀಯ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಧ್ವಜಾರೋಹಣ ವೇಳೆ ಬರುವ ಜನರಿಗೆ ಸ್ವಚ್ಛತೆಯ ಅರಿವು ಮೂಡಿಸುವುದರ ಜೊತೆ ಕಾಲನಿಯನ್ನು ಸುಂದರವಾಗಿಟ್ಟುಕೊಳ್ಳುವ ಸಂಕಲ್ಪ ಮಾಡಿದ್ದಾರೆ.

ನಗರದ ನಾನಾ ಕಡೆ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯಲಾಗುತ್ತಿದ್ದು, ಪಾಲಿಕೆ ಸಿಬ್ಬಂದಿ ತ್ಯಾಜ್ಯ ತೆರವುಗೊಳಿಸಿ ಸ್ವಚ್ಛಗೊಳಿಸುತ್ತದೆ. ಬಳಿಕ ರಂಗೋಲಿ ಹಾಕಿ, ಸುತ್ತಮುತ್ತಲ ಜನರಿಗೆ ಕಸ ಹಾಕದಂತೆ ಮನವರಿಕೆ ಮಾಡಿಕೊಡಲಾಗುತ್ತದೆ. ಈ ಕೆಲಸ ನಿರಂತರವಾಗಿ ಪಾಲಿಕೆಯಿಂದ ನಡೆಯುತ್ತದೆ ಎಂದು ಬಳ್ಳಾರಿ ಮಹಾನಗರ ಪಾಲಿಕೆ ಹೆಲ್ತ್ ಇನ್ಸ್‌ಸ್ಪೆಕ್ಟರ್ ಸುಮಾ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟಿಬಿ ಗೇಟ್‌ ಬದಲಿಸಲು ಹಣ ಕೊಡಿ : ಬಿವೈವಿ
ರಾಯ್‌ ಸಾವಿಗೆ ಐ.ಟಿ. ಕಿರುಕುಳ ಕಾರಣ : ಬಾಬು