ಹುಮನಾಬಾದ್: ಪುರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ರವರ ಮಧ್ಯೆ ಮಾತಿನ ಚಕುಮಕಿ ನಡೆದು ಕೆಲ ಕಾಲ ಸಭೆಯು ಉದ್ರಿಕ್ತಗೊಂಡಿತ್ತು.ಪಟ್ಟಣದ ಪುರಸಭೆಯಲ್ಲಿ ಒಂದು ವರ್ಷದ ಬಳಿಕ ಪುರಸಭೆ ಅಧ್ಯಕ್ಷೆ ಪಾರ್ವತಿ ಶೇರಿಕಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಪಾರ್ವತಿ ಶೇರಿಕಾರಿ ಶಾಸಕರ ಕುಟುಂಬಕ್ಕೆ ಸೇರಿದ ಮೌನೇಶ್ವರ ಶಾಲೆಯು ಪುರಸಭೆಯ ಆಸ್ತಿಯಾಗಿದ್ದು, ಈ ಆಸ್ತಿಯನ್ನು ಶಾಲೆಗೆ ಬಾಡಿಗೆಗೆ ನೀಡಲಾಗಿದ್ದು, ವಾಪಸ್ ಪಡೆಯುವಂತೆ ಸಭೆಯ ನಡುವಳಿಕೆಯಲ್ಲಿ ನೋಂದಾಯಿಸುವಂತೆ ಪ್ರಸ್ತಾವನೆ ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಮಾತನಾಡಿ, ಪುರಸಭೆ ಉದ್ಯಾನವನದಲ್ಲಿ ನಿರ್ಮಿಸಲಾದ ಟೌನ್ ಹಾಲ್ ಪುರಸಭೆಗೆ ಹಸ್ತಾಂತರಿಸಿದ್ದು, ಇಗೀಗ ಅದರಲ್ಲಿರುವ ಎಸಿ, ವಿದ್ಯುತ್ ಉಪಕರಣಗಳು, ಕುರ್ಚಿ ಸೇರಿದಂತೆ ಅನೇಕ ಸಾಮಾನುಗಳು ಮಾಯವಾಗಿವೆ. ಈ ಕುರಿತು ತನಿಖೆ ನಡೆಸಿ ಶಿಘ್ರದಲ್ಲೇ ಟೆಂಡರ್ ಕರೆಯುವ ಮೂಲಕ ನಿರ್ವಹಣೆಗೆ ಖಾಸಗಿಯವರಿಗೆ ನೀಡುವಂತೆ ಆಗ್ರಹಿಸಿದರು.2019ರಲ್ಲಿ ಲಕ್ಷಾಂತರ ರುಪಾಯಿ ಅನುದಾನದಲ್ಲಿ ನಿರ್ಮಿಸಲಾದ ಯುಜಿಡಿ ಕಾಮಗಾರಿ ಅಪೂರ್ಣವಿದ್ದು, ಲೋಕಾಯುಕ್ತ ತನಿಖೆಗೆ ಸರ್ವ ಸದಸ್ಯರು ಆಗ್ರಹಿಸಿದರು.
ಪುರಸಭೆ ಅಧ್ಯಕ್ಷೆ ಪಾರ್ವತಿ ಶೇರಿಕಾರ, ಉಪಾಧ್ಯಕ್ಷ ಮುಕ್ರಮಜಾ, ಸದಸ್ಯ ಅಫ್ಸರಮಿಯ್ಯ, ಎಂಎ ಬಾಸೀದ್, ರಮೇಶ ಕಲ್ಲೂರ, ಕಾಳಪ್ಪ (ಸುನೀಲ) ಪಾಟೀಲ್, ಧನಲಕ್ಷ್ಮಿ, ವಿಜಯಕುಮಾರ ಹಾಗೂ ವಿರೇಶ ಸೀಗಿ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.