ನಗರಸಭೆ ಅಧಿಕಾರಿಗಳ ದಿಢೀರ್ ಕಾರ್ಯಾಚರಣೆ । ಸಾರ್ವಜನಿಕರ ಪ್ರಶಂಸೆ । ಜೆಸಿಬಿ ಮೂಲಕ ಕಾರ್ಯಾಚರಣೆ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ನಗರದ ಚಿತ್ರದುರ್ಗ ರಸ್ತೆಯೂ ಸೇರಿದಂತೆ ವಿವಿಧೆಡೆಗಳಲ್ಲಿ ಫುಟ್‌ಪಾತ್ ಆಕ್ರಮಿಸಿಕೊಂಡು ಶೆಡ್ ನಿರ್ಮಿಸಿ ಸಾರ್ವಜನಿಕರು, ವಾಹನ ಓಡಾಟಕ್ಕೆ ತೊಂದರೆ ಉಂಟು ಮಾಡುತ್ತಿದ್ದ ಹಿನ್ನೆಲೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಗರಸಭೆ ಆಡಳಿತ ಬುಧವಾರ ಬೆಳ್ಳಂಬೆಳಗ್ಗೆ ಮಿಂಚಿನ ವೇಗದಲ್ಲಿ ಪಾದಚಾರಿ ಮಾರ್ಗದ ತೆರವು ಕಾರ್ಯಾಚರಣೆ ನಡೆಸಿತು.ಪಾದಚಾರಿ ಮಾರ್ಗ ತೆರವುಗೊಳಿಸುವಂತೆ ಸಾರ್ವಜನಿಕರು ಹಲವಾರು ಬಾರಿ ಶಾಸಕರು, ನಗರಸಭೆ ಆಡಳಿತ ಹಾಗೂ ತಾಲೂಕು ಆಡಳಿತಕ್ಕೆ ನಿರಂತರ ಮನವಿ ಮಾಡಿದ್ದರು. ಪೌರಾಯುಕ್ತ ಜಗರೆಡ್ಡಿ, ಕಂದಾಯಾಧಿಕಾರಿ ಸತೀಶ್, ನೈರ್ಮಲ್ಯ ಎಂಜಿನಿಯರ್ ನರೇಂದ್ರಬಾಬು, ಹಿರಿಯ ಆರೋಗ್ಯ ನಿರೀಕ್ಷಕರಾದ ಮಹಾಲಿಂಗಪ್ಪ, ಗಣೇಶ್, ಗೀತಾಕುಮಾರಿ, ರುದ್ರಮುನಿ,ನಗರಸಭೆ ಅಧಿಕಾರಿ ವರ್ಗ ಹಾಗೂ ಪೊಲೀಸ್ ಇಲಾಖೆ ಸಹಕಾರದಿಂದ ಪುಟ್‌ಬಾತ್ ತೆರವು ಕಾರ್ಯಾಚರಣೆ ಆರಂಭಿಸಿದರು.
ಎರಡು ದಿನಗಳ ಮೊದಲೇ ನಗರಸಭೆ ಆಡಳಿತ ಈ ಬಗ್ಗೆ ಸಾರ್ವಜನಿಕರಿಗೆ ಮನವಿ ಮಾಡಿ ಫುಟ್‌ಪಾತ್‌ಗಳಲ್ಲಿ ಅಕ್ರಮವಾಗಿ ಅಂಗಡಿಗಳನ್ನು ನಡೆಸುವವರು ಕೂಡಲೇ ತೆರವುಗೊಳಿಸುವಂತೆ ಸೂಚನೆ ನೀಡಿದ್ದರು. ಆದರೂ ಯಾರೂ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಅಂತಿಮವಾಗಿ ಬುಧವಾರ ಬೆಳಿಗ್ಗೆ ಕಾರ್ಯಾಚರಣೆ ಆರಂಭಿಸಿ ಹಲವಾರು ಶೆಡ್‌ಗಳನ್ನು ಜೆಸಿಬಿ ಸಹಕಾರದಿಂದ ನೆಲಸಮಗೊಳಿಸಿದರು. ಪುಟ್‌ಬಾತ್ ಅಂಗಡಿ ವ್ಯಾಪಾರಸ್ಥರಿಗೆ ನಗರಸಭೆಯ ದಿಢೀರ್ ಕಾರ್ಯಾಚರಣೆ ಭಯ ಹುಟ್ಟಿಸಿತು.
ಪ್ರಾರಂಭದಲ್ಲಿ ನಗರಸಭೆ ಅಧಿಕಾರಿಗಳೊಂದಿಗೆ ಫುಟ್‌ಪಾತ್ ಅಂಗಡಿ ಮಾಲೀಕರು ನಮಗೆ ನೋಟಿಸ್ ನೀಡದೆ ಖಾಲಿಮಾಡಿಸುವುದು ಸರಿಯಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಪ್ರತಿನಿತ್ಯವೂ ನಗರಸಭೆ ತಮ್ಮ ವಾಹನಗಳ ಮೂಲಕ ಸಾರ್ವಜನಿಕರಿಗೆ ಫುಟ್‌ಪಾತ್ ತೆರವು ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡುತ್ತ ಬಂದಿದ್ದರು.