ಕನ್ನಡಪ್ರಭ ವಾರ್ತೆ ಬೆಳಗಾವಿ
ಸಭೆಯಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು, ನಗರದಲ್ಲಿ ಘನ ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಜಾರಿಗೆ ತರಲು ಕೇಂದ್ರದಿಂದ ಮಂಜೂರಾದ ಸಿಟೀಸ್ 2.0 ಯೋಜನೆಗೆ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟು ₹135 ಕೋಟಿ ವೆಚ್ಚದ ಯೋಜನೆಗೆ ಮಾರ್ಗಸೂಚಿಯಂತೆ ಶೇ.40ರಷ್ಟು ಹಣವನ್ನು ಕೇಂದ್ರ ಸರ್ಕಾರ ಶೇ.40ರಷ್ಟು ರಾಜ್ಯ ಸರ್ಕಾರ ಹಾಗೂ ಶೇ.20ರಷ್ಟು ಪಾಲಿಕೆ ನೀಡಬೇಕಿದೆ. ಕೇಂದ್ರ ಹಾಗೂ ಪಾಲಿಕೆ ತಮ್ಮ ಪಾಲಿನ ಹಣ ನೀಡಲು ಸಿದ್ಧವಾಗಿದ್ದರೂ ರಾಜ್ಯ ಸರ್ಕಾರ ಅನುದಾನ ನೀಡಲು ವಿಳಂಬ ಮಾಡುತ್ತಿದ್ದು, ಯೋಜನೆ ಜಾರಿಗೆ ಅಡಚಣೆ ಉಂಟಾಗಿದೆ ಎಂದರು.ಕರ್ನಾಟಕದಲ್ಲಿ ಈ ಯೋಜನೆಗೆ ಅನುಮೋದನೆ ಪಡೆದ ಏಕೈಕ ನಗರ ಬೆಳಗಾವಿಯಾಗಿದ್ದು, ಅಗತ್ಯ ಪ್ರಕ್ರಿಯೆಗಳನ್ನು ಮಾ.31ರೊಳಗೆ ಪೂರ್ಣಗೊಳಿಸದಿದ್ದರೆ ಯೋಜನೆಯಿಂದ ವಂಚಿತವಾಗುವ ಸಾಧ್ಯತೆ ಇದೆ. ರಾಜ್ಯದ ಪಾಲಿನ ಹಣ ಸಿಗದಿದ್ದರೆ ಯೋಜನೆಯ ಗಾತ್ರವನ್ನು ₹135 ಕೋಟಿಯಿಂದ ₹75 ಕೋಟಿಗೆ ಇಳಿಸುವ ಪರಿಸ್ಥಿತಿ ಬರಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಮಾತನಾಡಿ, ಸರ್ಕಾರದ ನೋಟಿಸ್‌ಗೆ ಉತ್ತರಿಸಬೇಕಾಗುತ್ತದೆ. ಆದ್ದರಿಂದ ತೆರಿಗೆ ಹೆಚ್ಚಳ ಅನಿವಾರ್ಯ ಎಂದರು. ಪ್ರತಿಪಕ್ಷದ ಸದಸ್ಯರ ವಿರೋಧದ ನಡುವೆಯೇ ಶೇ.3 ರಷ್ಟು ತೆರಿಗೆ ಹೆಚ್ಚಳ ಜಾರಿಗೆ ತರುವ ನಿರ್ಧಾರ ಪ್ರಕಟಿಸಲಾಯಿತು. ಸಭೆಯಲ್ಲಿ ಸದಸ್ಯರು ಕೇಳಿದ ಮಾಹಿತಿಯನ್ನು ನಿಗದಿತ ಅವಧಿಯಲ್ಲಿ ನೀಡುತ್ತಿಲ್ಲ ಎಂಬ ಆರೋಪವೂ ಕೇಳಿಬಂತು. ಹತ್ತು ದಿನಗಳೊಳಗೆ ಮಾಹಿತಿ ನೀಡಬೇಕಾದ ನಿಯಮ ಪಾಲಿಸಲಾಗುತ್ತಿಲ್ಲ ಎಂದು ಕೆಲ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳನ್ನು ಸಭೆಗೆ ಕರೆಸಿ ವಿಚಾರಣೆ ನಡೆಸಬೇಕು ಎಂಬ ಆಗ್ರಹ ವ್ಯಕ್ತವಾಯಿತು. ಅಧಿಕಾರಿಗಳು ಮಾಹಿತಿ ನೀಡಲು ಸಿದ್ಧವಿದ್ದೇವೆ ಎಂದು ಸ್ಪಷ್ಟನೆ ನೀಡಿದರೂ ಸದಸ್ಯರು ಅದನ್ನು ಸಮರ್ಪಕ ಉತ್ತರ ಎಂದು ಪರಿಗಣಿಸಲಿಲ್ಲ.