ಬೆಂಗಳೂರು ರೈಲ್ವೆ ಹಳಿಮೇಲೆ ನಂದೀಶ್ ಶವ ಪತ್ತೆ । ಕೊಲೆ ಮಾಡಿ ಬೀಸಲಾಡಲಾಗಿದೆ ಎಂಬ ಆರೋಪ ।ಅನ್ಯಾಯಕ್ಕೊಳಗಾದ ಕುಟುಂಬಸ್ಥರಿಗೆ ಬೆದರಿಕೆ, ಪಿಎಸೈ ಮಹೇಶ್, ಪೇದೆ ಮಾದೇಶ್ ಬಂಧನಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಬೆಂಗಳೂರಿನ ಯಶವಂತಪುರ ರೈಲು ಹಳಿಯಲ್ಲಿ ಕೊಳ್ಳೇಗಾಲದ ಯುವಕನ ಶವ ಪತ್ತೆಯಾದ ಹಿನ್ನೆಲೆ ಆತನನ್ನು ಕೊಲೆ ಮಾಡಿ ಬೆಂಗಳೂರಿನಲ್ಲಿ ಬಿಸಲಾಡಲಾಗಿದೆ. ತಪ್ಪಿತಸ್ಥರನ್ನು ಬಂಧಿಸಬೇಕು. ಕ್ಷುಲ್ಲಕ ಕಾರಣಕ್ಕಾಗಿ ಕೊಲೆ ಮಾಡಿರುವವರ ರಕ್ಷಣೆ ಮಾಡದೆ, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ ಮೃತ ಯುವಕನ ಸಂಬಂಧಿಗಳು ಮತ್ತು ವಿವಿಧ ಸಂಘಟನೆಗಳ ಮುಖಂಡರೊಡಗೂಡಿ ಸೋಮವಾರ ಪ್ರತಿಭಟನೆ ನಡೆಯಿತು. ಕೊಳ್ಳೇಗಾಲ ಲಿಂಗಣಾಪುರದ ನಂದೀಶ್(26) ಎಂಬ ಯುವಕನ ಶವ ಬೆಂಗಳೂರು ದೀಪಾಂಜಲಿ ನಗರ ವ್ಯಾಪ್ತಿಯಲ್ಲಿ ಮೂರು ತುಂಡುಗಳಾಗಿ ಪತ್ತೆಯಾಗಿದ್ದು, ಆತನನ್ನು ಮೂರ್ನಾಲ್ಕು ಮಂದಿ ಕೊಲೆಗೈದು ಬಿಸಾಡಿದ್ದಾರೆ.ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಹಲ್ಲೆಗೈದು ಕೊಲೆ ಮಾಡಿದ ಬಳಿಕ ರೈಲ್ವೆ ಹಳಿಯ ಮೇಲೆ ಎಸೆಯಲಾಗಿದೆ. ಕಳೆದ ರಾತ್ರಿ ಯುವಕನ ಸಂಬಂಧಿಗಳು ದೂರು ನೀಡಲು ಹೋದರೂ ಪೊಲೀಸರು ದೂರು ತೆಗೆದುಕೊಳ್ಳದೆ ನಾಳೆ ಬನ್ನಿ ಎನ್ನುವ ಮೂಲಕ ಉಡಾಫೆಯಾಗಿ ಉತ್ತರಿಸಿದ್ದಾರೆ. ಕೊಲೆ ಹಿನ್ನೆಲೆ ಪ್ರತಿಭಟನೆಗೆ ಕರೆ ನೀಡಿದ ಕಿರಣ್ ಎಂಬ ಯುವಕನನ್ನು ಕರೆದು ಧಮಕಿ ಹಾಕಲಾಗಿದ್ದು ನಿನ್ನ ಮೇಲೆ ರೌಡಿ ಶೀಟರ್ ಕೇಸ್ ಹಾಕುವೆ ಎಂದು ಪಿಎಸೈ ಮಹೇಶ್, ಪೇದೆ ಕಣ್ಣೂರು ಮಾದೇಶ ಬೆದರಿಕೆ ಹಾಕಿದ್ದಾರೆ. ನ್ಯಾಯ ನೀಡಬೇಕಾದವರೆ ಬೆದರಿಕೆ ಹಾಕಿದರೆ ಹೇಗೆ, ಇವರಿಬ್ಬರ ಮೇಲೂ ಕ್ರಮ ಆಗಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ನಂದೀಶನನ್ನು ಕೊಲೆ ಮಾಡಿ ಬಿಸಲಾಡಲಾಗಿದೆ. ಪ್ರಾಥಮಿಕ ತನಿಖೆ ಕೊಳ್ಳೇಗಾಲ ಪೊಲೀಸ್ ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯಬೇಕು, ಸ್ಥಳಕ್ಕೆ ಎಸ್ಪಿಯವರು ಬರುವ ತನಕ ಪ್ರತಿಭಟನೆ ಹಿಂಪಡೆಯಲ್ಲ ಎಂದು ಆಗ್ರಹಿಸಿದರಲ್ಲದೆ ತಪ್ಪಿತಸ್ಥರನ್ನು ಕೂಡಲೆ ಬಂಧಿಸಿ ಮೖತರ ಸಂಬಂಧಿಗಳಿಗೆ ನ್ಯಾಯ ಸಲ್ಲಿಬೇಕು ಎಂದು ಆಗ್ರಹಿಸಿದರಲ್ಲದೆ ಕೊಳ್ಳೇಗಾಲ ಪೊಲೀಸ್ ವ್ಯವಸ್ಥೆ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.ಈ ವೇಳೆ ಹಲವು ಮುಖಂಡರು ಮಾತನಾಡಿ, ಮೊದಲು ರಾತ್ರಿ ಆಗಮಿಸಿದ ಮೖತನ ಸಂಬಂಧಿಗಳಿಂದ ದೂರು ಸ್ವೀಕರಿಸದೆ ವಾಪಸು ಕಳುಹಿಸಲಾಗಿದೆ. ಬಳಿಕ ನನ್ನ ಮಗನ ಶವ ಪತ್ತೆಯಾಗುತ್ತಿದ್ದಂತೆ ಪ್ರತಿಭಟನೆಗೆ ಕರೆ ನೀಡಿದ ಕಿರಣ್ ಎಂಬಾತನ್ನು ಪೊಲೀಸರು ಬೆದರಿಸಿ ರೌಡಿ ಶೀಟರ್ ದಾಖಲಿಸುವ ಬೆದರಿಕೆವೊಡ್ಡಿರುವುದು ಖಂಡನೀಯ ಎಂದು ಆಕ್ರೋಶ ಹೊರಹಾಕಿದರು. ಬಸ್ ನಿಲ್ದಾಣದಲ್ಲೆ ಯುವಕನ ಮೇಲೆ ಹಲ್ಲೆ ನಡೆಸಿ ಕೊಲೆಗೈದಿರುವ ವಿಚಾರ ಹೇಯಕೃತ್ಯ, ಪೊಲೀಸ್ ವ್ಯವಸ್ಥೆಯ ಮೇಲೆ ಜನರಿಗೆ ನಂಬಿಕೆ ಇಲ್ಲದಾಗಿದೆ ಎಂದು ಅಸಮಾಧಾನ ಹೊರಹಾಕಿದರಲ್ಲದೆ ಸ್ಥಳಕ್ಕೆ ಎಸ್ಪಿ ಬರಬೇಕು, ನಮ್ಮ ಅಹವಾಲು ಸ್ವೀಕರಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಬಿಂದು ಲೋಕೇಶ್, ಮುಳ್ಳೂರು ಇಂದ್ರೇಶ್, ಬಸವರಾಜು, ದೊಡ್ಡಿಂದುವಾಡಿ ವೀರಭದ್ರ, ಮಹದೇವಸ್ವಾಮಿ(ಗುಂಡ), ಬಸವಣ್ಣ , ಸುಂದ್ರಪ್ಪ, ಮೖತ ಯುವಕನ ತಾಯಿ ದಾಕ್ಷಾಯಿಣಿ, ಸಂಘಟನೆ ಮುಖಂಡ ಬಸವರಾಜು, ರಾಜಶೇಖರಮೂರ್ತಿ ಇದ್ದರು.
ತಾಯಿಯ ಆಕ್ರಂದನ: ಸೆರಗೊಡ್ಡಿ ಬಿಡುವೆ, ನನಗೆ ನ್ಯಾಯ ನೀಡಿ, ಮಗನ ಕೊಲೆಗೈದವರಿಗೆ ಶಿಕ್ಷೆ ನೀಡಿ, ನನ್ನ ಮಗ ಬಹಳ ಒಳ್ಳೆಯವ, ಎಲ್ಲಾ ಕಡೆ ವಿಚಾರಿಸಿ, ಆತನಿಂದ ತಪ್ಪಾಗಿದೆ ಎಂದರೆ ಪ್ರಕರಣ ಹಿಂಪಡೆವೆ. ಕೊಳ್ಳೇಗಾಲ- ನನ್ನ ಮಗನನ್ನು ಕೊಲೆ ಮಾಡಲಾಗಿದೆ. ಸೆರೆಗೊಡ್ಡಿ ನ್ಯಾಯ ಬೇಡುವೆ. ಮಗನ ಕೊಂದವರಿಗೆ ಶಿಕ್ಷೆ ಆಗಬೇಕು, ನಮಗೂ ರಕ್ಷಣೆಬೇಕು ಎಂದು ಮೃತ ನಂದೀಶ್ ಅವರ ತಾಯಿ ದಾಕ್ಷಾಯಿಣಿ ಪೊಲೀಸ್ ಠಾಣೆ ಮುಂಭಾಗದಲ್ಲಿ ನಡೆದ ಪ್ರತಿಭಟನೆ ವೇಳೆ ದುಃಖಿತರಾಗಿ ರೋದಿಸಿದ ಘಟನೆ ಜರುಗಿತು. ನನ್ನ ಮಗನ ಮೇಲೆ ಹಲ್ಲೆ ಮಾಡಿದವರೇ ನಮ್ಮ ಮನಗೆ ಮೊಬೈಲ್ ನೀಡಿ ಬಸ್ ನಿಲ್ದಾಣದಲ್ಲಿ ಸಿಕ್ಕಿತು ಎಂದು ಹೇಳಿ ಹೋದರು. ನನ್ನ ಮಗನಿಗೆ 9.30ರಲ್ಲಿ ಪೋನ್ ಮಾಡಿದ ವೇಳೆ ಆತ ಪೋನ್ ತೆಗೆಯಲಿಲ್ಲ, ಆದರೆ ಕೌಶಿಕ್ ಎಂಬುವರ ನನ್ನ ಮಗನ ನಂಬರ್‌ನಿಂದಲೇ ಕರೆ ಮಾಡಿ ನಿಮ್ಮ ಮಗನ ಮೊಬೈಲ್ ಸಿಕ್ಕಿದೆ. ಆಸ್ಪತ್ರೆ ಬಳಿ ಬನ್ನಿ ಎಂದರು. ಪುನಃ ನಿಮ್ಮ ಮನೆ ವಿಳಾಸ ಹೇಳಿ ಎಂದು ಕೌಶಿಕ್ ಮತ್ತಿತರರು ಲಿಂಗಣಾಪುರಕ್ಕೆ ಬಂದು ಮೊಬೈಲ್ ನೀಡಿ ಹೋದರು. ಅವರೇ ನನ್ನ ಮಗನನ್ನು ಕೊಲೆ ಮಾಡಿ, ಬೆಂಗಳೂರು ದೀಪಾಂಜಲಿ ನಗರದ ರೈಲ್ವೆ ಹಳಿ ಮೇಲೆ ಎಸೆದು ಹೋಗಿದ್ದಾರೆ.ಹಿಂದಿನ ರಾತ್ರಿ ನನ್ನ ಮಗ ಮನೆಗೆ ಬಂದಿಲ್ಲ. ಮೊಬೈಲ್ ಬಸ್ ನಿಲ್ದಾಣದಲ್ಲಿ ಸಿಕ್ಕಿದೆ ಎಂದು ಕೆಲವರು ತಲುಪಿಸಿದ್ದಾರೆಂಬ ವಿಚಾರ ತಿಳಿಸಿ ದೂರು ನೀಡಿದರೂ ಪಟ್ಟಣ ಪೊಲೀಸರು ದೂರು ಸ್ವೀಕರಿಸಲಿಲ್ಲ, ನಾಳೆ ಬನ್ನಿ ಅಂದ್ರು, ಈ ವ್ಯವಸ್ಥೆ ಬಗ್ಗೆ ನಮಗೆ ನಂಬಿಕೆ ಇಲ್ಲ. ನಮಗೆ ರಕ್ಷಣೆ ನೀಡಬೇಕು,ನಮ್ಮ ಮಗನ ಕೊಲೆಗೈದವರಿಗೆ ಶಿಕ್ಷೆಯಾಗಬೇಕು ಎಂದು ದುಃಖದಿಂದಲೇ ತಮ್ಮ ಅಳಲು ಹೇಳಿಕೊಂಡರು.
ನಂದೀಶ್ ಗೆ ಹಲ್ಲೆ ಮಾಡಿದವರೆ ಪೋನ್ ಕಿತ್ತುಕೊಂಡು ಅವರ ಕುಟುಂಬಕ್ಕೆ ಸುಳ್ಳು ಹೇಳಿ ಪೋನ್ ನೀಡಿರುವುದು ಸತ್ಯ ಸಂಗತಿ , ಈ ಹಿನ್ನೆಲೆ ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಶಿಕ್ಷೆಯಾಗಬೇಕು, ಬಸ್ ನಿಲ್ದಾಣದಲ್ಲಿ ಹಲ್ಲೆ ನಡೆದಿರುವುದು ಖಂಡನೀಯ. ನಂದೀಶ್ ಕುಟುಂಬ ಕೂಡಲೇ ಪೋಲೀಸ್ ಠಾಣೆಗೆ ಬಂದು ದೂರು ನೀಡುವ ಕೆಲಸ ಮಾಡುತ್ತಾರೆ. ಆದರೆ ಪೊಲೀಸರು ದೂರು ಸ್ವೀಕರಿಸದೆ, ನಾಳೆ ಬನ್ನಿ ಎಂಬ ಉಡಾಫೆಯ ನೀತಿ ಪ್ರದರ್ಶಿಸಿರುವುದು ಸರಿಯಲ್ಲ. ನೊಂದ ಕುಟುಂಬಕ್ಕೆ ನ್ಯಾಯ ಸಲ್ಲಿಸಬೇಕು, ಕಾನೂನು ಚೌಕಟ್ಟಿನಡಿ ಆರೋಪಿಗಳ ವಿರುದ್ಧ ಕ್ರಮವಹಿಸಿ. ದೂರು ನೀಡಲು ಬಂದರೆ ದೂರದಾರರನ್ನೇಕೆ ಸಾಗಹಾಕಲಾದ ಬೆಳವಣಿಗೆ ಸರಿಯಲ್ಲ, ಈ ಪ್ರಕರಣಕ್ಕೆ ನ್ಯಾಯ ಸಿಗಬೇಕು, ಪ್ರಮಾಣಿಕ ತನಿಖೆ ನಡೆಯದಿದ್ದರೆ ಇಂತಹ ಘಟನೆಗಳು ನಿರಂತರವಾಗಿ ನಡೆಯಲಿದೆ. ಅಣಗಳ್ಳಿ ಬಸವರಾಜು. ಛಲವಾದಿ ಮಹಾಸಭೆ ರಾಜ್ಯ ಉಪಾಧ್ಯಕ್ಷ.