ತಂಗಿಯನ್ನು ಪ್ರೀತಿಸುತ್ತಿದ್ದ ಯುವಕನ ಹತ್ಯೆ, ಆರೋಪಿ ಸಹೋದರನ ಬಂಧನMurder of a young man who was in love with his younger sister, accused brother arrested

KannadaprabhaNewsNetwork |  
Published : Aug 29, 2025, 01:00 AM IST
 ಹತ್ಯೆ | Kannada Prabha

ಸಾರಾಂಶ

ಮಂಗಳವಾರ ರಾತ್ರಿ ಮಂಜು ರಾಮಂದೂರು ಕೆರೆ ಬಳಿ ಹೋಗಿದ್ದ ಮಾಹಿತಿ ತಿಳಿದಿದ್ದ ಆರೋಪಿ ದರ್ಶನ್ ಹೋಗಿ ನನ್ನ ಸಹೋದರಿ ಜೊತೆಗಿನ ಸಂಬಂಧವನ್ನು ಬಿಟ್ಟು ಬಿಡುವಂತೆ ಜಗಳ ತೆಗೆದಿದ್ದಾನೆ. ನಂತರ ಪರಸ್ಪರ ಹೊಡೆದಾಟ ಮಾಡಿಕೊಂಡಿದ್ದರು. ಈ ವೇಳೆ ಗಲಾಟೆಯಲ್ಲಿ ನೆಲಕ್ಕೆ ಬಿದ್ದ ಮಂಜು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದನು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಂಗಿಯನ್ನು ಪ್ರೀತಿಸುತ್ತಿದ್ದಾನೆ ಎಂಬ ದ್ವೇಷದಿಂದ ಸಹೋದರನೇ ಯುವಕನನ್ನು ಹತ್ಯೆ ಮಾಡಿರುವ ಘಟನೆ ತಾಲೂಕಿನ ರಾಮಂದೂರು ಕೆರೆ ಬಳಿ ಮಂಗಳವಾರ ರಾತ್ರಿ ನಡೆದಿದ್ದು, ಯುವಕನನ್ನು ಹತ್ಯೆಗೈದಿದ್ದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಕಿರುಗಾವಲು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲೂಕಿನ ಕಲ್ಕುಣಿ ಗ್ರಾಮದ ಶಿವಸ್ವಾಮಿ ಅವರ ಪುತ್ರ ಮಂಜು(21) ಹತ್ಯೆಯಾದ ಯುವಕ. ಕೊಲೆ ಆರೋಪಿ ರಾಮನಾಥಮೊಳೆ ಗ್ರಾಮದ ದರ್ಶನ್ ಎಂಬಾತನನ್ನು ಬಂಧಿಸಲಾಗಿದೆ.

ಮೀನು ಹಿಡಿಯುವ ಕೆಲಸ ಮಾಡುತ್ತಿದ್ದ ಮಂಜು ತಮ್ಮ ಆಟೋ ತೆಗೆದುಕೊಂಡು ಮಂಗಳವಾರ ಸಂಜೆ ರಾಮಂದೂರು ಕೆರೆಯಲ್ಲಿ ಮೀನು ಹಿಡಿಯಲು ಬಲೆ ಬಿಡಲು ತಂದೆಯ ಸ್ನೇಹಿತನಾದ ಆಲದಹಳ್ಳಿ ಪುಟ್ಟಸ್ವಾಮಿ ಅವರ ಜೊತೆ ತೆರಳಿದ್ದರು.

ರಾತ್ರಿ 8.15ರ ವೇಳೆಗೆ ಪುಟ್ಟಸ್ವಾಮಿ ಶಿವಸ್ವಾಮಿ ಅವರಿಗೆ ಪೋನ್ ಮಾಡಿ ನಿಮ್ಮ ಮಗನ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ರಕ್ತ ಬರುತ್ತಿದೆ. ಆಟೋ ಚಿಕ್ಕ ಕಾಲುವೆ ಪಕ್ಕ ಉರುಳಿ ಬಿದ್ದಿದೆ ಎಂದು ತಿಳಿಸಿದರು. ಕೂಡಲೇ ಸ್ಥಳಕ್ಕೆ ತೆರಳಿದ್ದ ನೋಡಿದಾಗ ಮಂಜು ಸ್ಥಳದಲ್ಲಿಯೇ ಸಾವನ್ನಪ್ಪಿದ್ದನು.

ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ತಿಮ್ಮಯ್ಯ, ಡಿವೈಎಸ್ಪಿ ವಿ.ಕೃಷ್ಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂಬಂಧ ಮೃತನ ತಂದೆ ಕಿರುಗಾವಲು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರೇಮ ಪ್ರಕರಣದಿಂದ ಮಂಜು ಹತ್ಯೆ:

ಕೊಲೆಯಾದ ಮಂಜು ಮತ್ತು ಆರೋಪಿ ರಾಮನಾಥಮೊಳೆ ಗ್ರಾಮದ ದರ್ಶನ್ ಸಂಬಂಧಿಕರಾಗಿದ್ದು, ದರ್ಶನ್ ನ ಸಹೋದರಿ ಅಪ್ರಾಪ್ತ ಬಾಲಕಿಯನ್ನು ಮಂಜು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದನು. ಕೆಲ ತಿಂಗಳ ಹಿಂದೆ ಇಬ್ಬರು ಮನೆ ಬಿಟ್ಟು ಓಡಿ ಹೋಗಿದ್ದರು.

ನಂತರ ಬಾಲಕಿಯು ರಾಮನಾಥಮೊಳೆ ಗ್ರಾಮಕ್ಕೆ ವಾಪಸ್ ಬಂದಿದ್ದಳು. ಅಲ್ಲದೇ ಇನ್ನೂ ಒಂದು ತಿಂಗಳಿಗೆ ಬಾಲಕಿಗೆ 18 ವರ್ಷ ತುಂಬುತ್ತಿತ್ತು. ಹೀಗಾಗಿ ತನ್ನ ಸಹೋದರಿ ಮಂಜು ಜೊತೆ ಹೋಗುವ ಆತಂಕ ಆರೋಪಿ ದರ್ಶನನ್ನು ಕಾಡುತ್ತಿತ್ತು.

ಮಂಗಳವಾರ ರಾತ್ರಿ ಮಂಜು ರಾಮಂದೂರು ಕೆರೆ ಬಳಿ ಹೋಗಿದ್ದ ಮಾಹಿತಿ ತಿಳಿದಿದ್ದ ಆರೋಪಿ ದರ್ಶನ್ ಹೋಗಿ ನನ್ನ ಸಹೋದರಿ ಜೊತೆಗಿನ ಸಂಬಂಧವನ್ನು ಬಿಟ್ಟು ಬಿಡುವಂತೆ ಜಗಳ ತೆಗೆದಿದ್ದಾನೆ. ನಂತರ ಪರಸ್ಪರ ಹೊಡೆದಾಟ ಮಾಡಿಕೊಂಡಿದ್ದರು. ಈ ವೇಳೆ ಗಲಾಟೆಯಲ್ಲಿ ನೆಲಕ್ಕೆ ಬಿದ್ದ ಮಂಜು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದನು.

ಘಟನೆ ನಂತರ ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್, ಕಿರುಗಾವಲು ಪಿಎಸ್ಐ ಡಿ.ರವಿಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ಮಂಜುನನ್ನು ಹತ್ಯೆ ಮಾಡಿದ ಆರೋಪಿ ರಾಮನಾಥಮೊಳೆ ಗ್ರಾಮದ ದರ್ಶನ್(19) ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

PREV

Recommended Stories

ಬೆಂಗಳೂರು : ಗಣೇಶ ವಿಸರ್ಜನೆ ಹಿನ್ನೆಲೆ ಮದ್ಯ ಮಾರಾಟ ನಿಷೇಧ - ಎಲ್ಲೆಲ್ಲಿ?, ಯಾವಾಗ?
ಸತ್ಯ ಹೇಳಿದರೆ ಕೆಲವರು ಸಹಿಸುವುದಿಲ್ಲ : ಡಿಕೆಶಿ