ಪತಿಯ ಹತ್ಯೆ: ಪತ್ನಿ, ಪ್ರಿಯಕರನಿಗೆ ಜೀವಾವಧಿ ಶಿಕ್ಷೆ

KannadaprabhaNewsNetwork | Published : Jul 31, 2024 1:00 AM

ಸಾರಾಂಶ

ಮೂಡಲಗಿ : ಭೀಮನ ಅಮಾವಾಸ್ಯೆ ನಿಮಿತ್ತ ಪತಿಯ ಪಾದಪೂಜೆ ಮಾಡಿದ ಪತ್ನಿ ಬಳಿಕ ದೇವಸ್ಥಾನಕ್ಕೆ ಕರೆದೊಯ್ದು ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿದ್ದ ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಕನ್ನಡಪ್ರಭ ವಾರ್ತೆ ಮೂಡಲಗಿ

ಭೀಮನ ಅಮಾವಾಸ್ಯೆ ನಿಮಿತ್ತ ಪತಿಯ ಪಾದಪೂಜೆ ಮಾಡಿದ ಪತ್ನಿ ಬಳಿಕ ದೇವಸ್ಥಾನಕ್ಕೆ ಕರೆದೊಯ್ದು ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿದ್ದ ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿ ಗೋಕಾಕದ 12ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ತಾಲೂಕಿನ ವಡೇರಹಟ್ಟಿ ಗ್ರಾಮದ ಶಂಕರ ಸಿದ್ದಪ್ಪ‌ ಜಗಮುತ್ತಿ (25) ಹತ್ಯೆಯಾದ ಯುವಕ.

ಘಟನೆ ಹಿನ್ನೆಲೆ :

ಅಪರಾಧಿಗಳಾದ ಶ್ರೀಧರ ಮತ್ತು ಪ್ರಿಯಾಂಕಾ ಒಂದೇ ಊರಿನವರಾಗಿದ್ದು, ಆರನೇ ತರಗತಿಯಿಂದಲೇ ಇಬ್ಬರ ನಡುವೆ ಸ್ನೇಹ ಬೆಳೆದು ನಂತರ ಪರಸ್ಪರ ಪ್ರೀತಿಸುತ್ತಿದ್ದರು.

ಈ ನಡುವೆ ಮನೆಯವರು ಪ್ರಿಯಾಂಕಾಳನ್ನು ಮೃತ ಶಂಕರ್‌ ಜತೆಗೆ ವಿವಾಹ ನಿಶ್ಚಯ ಮಾಡಿದ್ದರು. ಪ್ರಿಯಾಂಕಾ ಮನೆಯವರ ಮಾತು ಮೀರಲಾಗದೆ ಮದುವೆಗೆ ಒಪ್ಪಿದ್ದಳು. ಆದರೆ, ಪ್ರಿಯಕರ ಶ್ರೀಧರ, ನೀನು

ಪ್ರಿಯಾಂಕಾಳನ್ನು ಮದುವೆ ಮಾಡಿಕೊಳ್ಳಬೇಡ, ಅವಳು ನನಗೆ ಬೇಕು ಎಂದು ಎಂದು ಶಂಕರ್ ಮುಂದೆ ಮನವಿ ಮಾಡಿದ್ದ ಎನ್ನಲಾಗಿದೆ. ಆದರೆ, ಶ್ರೀಧರನ ಮಾತು ಧಿಕ್ಕರಿಸಿ ಶಂಕರ ಪ್ರಿಯಾಂಕಾಳನ್ನು ಮದುವೆಯಾಗಿದ್ದ. ಆವತ್ತಿನಿಂದಲೇ ಶ್ರೀಧರ ಸೇಡು ತೀರಿಸಿಕೊಳ್ಳಲು ಹವನಿಸುತ್ತಿದ್ದ. ಇದಕ್ಕೆ ಸಾಥ್‌ ನೀಡಿದ್ದ ಪ್ರಿಯಾಂಕಾ ಪ್ಲಾನ್‌ ಮಾಡಿ ಭೀಮನ ಅಮಾವಾಸ್ಯೆ ಎಂದು ಹೇಳಿ ಪಾದಪೂಜೆ ಮಾಡಿ ದೇವಸ್ಥಾನಕ್ಕೆ ಹೋಗೋಣ ಎಂದು 2023ರ ಜುಲೈ 17ರಂದು ಬೆಳಗ್ಗೆ ಗ್ರಾಮದ ಹೊರವಲಯದ ಶಂಕರಲಿಂಗೇಶ್ವ ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದಳು. ಮೊದಲೇ ಹೊಂಚುಹಾಕಿ ಕುಳಿತಿದ್ದ ಶ್ರೀಧರ ಶಂಕರ ಬರುತ್ತಲೇ ಮಾರಾಕಾಸ್ತ್ರದಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದ.

ಪ್ರಕರಣ ಮೂಡಲಗಿ ಠಾಣೆಯಲ್ಲಿ ದಾಖಲಾಗಿತ್ತು. ಆಗಿನ ಸಿಪಿಐ ಶ್ರೀಶೈಲ ಬ್ಯಾಕೋಡ ಅವರು ಪ್ರಕರಣದ ಸಮಗ್ರ ತನಿಖೆ ನಡೆಸಿ ಹಂತಕರ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಸಾಕ್ಷ್ಯಾಧಾರಗಳಿಂದ ಆರೋಪ ಸಾಬೀತಾಗಿ 12ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ತಾರಕೇಶ್ವರಗೌಡ ಪಾಟೀಲ ಅಪರಾಧಿಗಳೆಂದು ಘೋಷಿಸಿ, ಇಬ್ಬರಿಗೂ ಕಠಿಣ ಜೀವಾವಧಿ ಜೈಲು ಶಿಕ್ಷೆ ಮತ್ತು ತಲಾ ₹3 ಲಕ್ಷ ದಂಡ ವಿಧಿಸಿ ತೀರ್ಪು ನೀಡಲಾಗಿದೆ. ಗೋಕಾಕ ಸರ್ಕಾರಿ ಅಭಿಯೋಜಕ ಸುನೀಲ ಎಂ.ಹಂಜಿ ವಕಾಲತು ವಹಿಸಿದ್ದರು.

Share this article