ಕನ್ನಡಪ್ರಭ ವಾರ್ತೆ ಮುಳಬಾಗಿಲು
ತನ್ನ ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿಯನ್ನು ಕೊಲೆಗೈದ ಘಟನೆ ಶುಕ್ರವಾರ ರಾತ್ರಿ ಮುಳಬಾಗಿಲು ತಾಲೂಕು ಮಲ್ಲಸಂದ್ರದ ಬಳಿ ಜೆಡಿಎಸ್ ಮುಖಂಡ ವೆಂಕಟರಾಮೇಗೌಡರಿಗೆ ಸೇರಿದ ಕಾಂಕ್ರಿಟ್ ಮಿಕ್ಸಿಂಗ್ ಯೂನಿಟ್‌ನಲ್ಲಿ ನಡೆದಿದೆ.ಬಿಹಾರ ಮೂಲದ ಉಮೇಶ್ ಕುಮಾರ್ ಸಿಂಗ್(38) ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಈತನು ಕಾಂಕ್ರಿಟ್ ಮಿಕ್ಷಿಂಗ್ ಯುನಿಟ್ ನಲ್ಲಿ ಕಳೆದ ೮ ವರ್ಷಗಳಿಂದ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಇಲ್ಲಿಯೇ ಒರಿಸ್ಸಾ ಮೂಲದ ಕೌಶಾಲ್ ಪಾಲ್ ಸಹ ಕೆಲಸ ಮಾಡಿಕೊಂಡಿದ್ದ, ಕಳೆದ ೧೦ ದಿನಗಳ ಹಿಂದೆಯಷ್ಟೇ ತನ್ನ ಪತ್ನಿಯನ್ನು ಕೌಶಾಲ್ ಪಾಲ್ ಕರೆದುಕೊಂಡು ಬಂದಿದ್ದ, ಆದರೆ ಉಮೇಶ್ ಕುಮಾರ್ ಸಿಂಗ್ ಎಂಬಾತನು ಕೈಲಾಶ್ ಪಾಲ್ ಪತ್ನಿ ಶಿವಾನಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದ್ದು, ಅನುಮಾನಗೊಂಡ ಕೌಶಲ್ ಪಾಲ್ ತನ್ನ ಪತ್ನಿಯನ್ನು ವಿಚಾರಣೆ ನಡೆಸಿದ್ದಾನೆ, ಹಲವು ಬಾರಿ ಉಮೇಶ್‌ಗೆ ಈ ವಿಚಾರದಲ್ಲಿ ಎಚ್ಚರಿಕೆಯನ್ನೂ ಸಹ ಕೊಟ್ಟಿದ್ದಾನೆ. ಆದರೂ ಸರಿಹೋಗದ ಉಮೇಶ್ ಕುಮಾರ್‌ನನ್ನು ತನ್ನ ಸ್ನೇಹಿತರಾದ ಕಲಬುರ್ಗಿಯ ರಮೇಶ್ ಹಾಗೂ ಸೋಮಶೇಖರ್ ಜೊತೆಗೆ ಸೇರಿ ಉಮೇಶ್ ಕುಮಾರ್ ತಲೆಗೆ ರಾಡ್ ಹಾಗೂ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ. ಕೊಲೆ ಬಳಿಕ ಸುಮಾರು ೨೦೦ ಮೀಟರ್ ದೂರ ಉಮೇಶ್ ಶವವನ್ನು ಎಳೆದುಕೊಂಡು ಹೋಗಿ ರಸ್ತೆಗೆ ಹಾಕಿ ಅಪಘಾತ ಎಂದು ಬಿಂಬಿಸಲು ಮುಂದಾಗಿದ್ದಾರೆ.
ಕೂಡಲೇ ವಿಷಯ ತಿಳಿದು ಕಾರ್ಯ ಪ್ರವೃತ್ತರಾದ ಮುಳಬಾಗಿಲು ಗ್ರಾಮಾಂತರ ಪೊಲೀಸರು ಸ್ಥಳದಲ್ಲಿದ್ದ ಕೆಲವು ಸುಳಿವುಗಳನ್ನು ಆಧರಿಸಿ ಹಾಗೂ ರಕ್ತದ ಕಲೆಗಳನ್ನು ಗಮನಿಸಿ ಅನುಮಾನಗೊಂಡು ಆರೋಪಿಗಳನ್ನು ವಿಚಾರಣೆ ನಡೆಸಿದ ವೇಳೆ ಈ ಸತ್ಯ ಹೊರಬಿದ್ದಿದೆ.ಘಟನಾ ಸ್ಥಳಕ್ಕೆ ಕೋಲಾರ ಎಸ್ಪಿ ನಿಖಿಲ್.ಬಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಕೊಲೆ ಮಾಡಿದ ಕೈಲಾಶ್ ಪಾಲ್, ಪತ್ನಿ ಶಿವಾನಿ, ಸ್ನೇಹಿತರಾದ ರಮೇಶ್ ಹಾಗೂ ಸೋಮಶೇಖರ್ ನಾಲ್ವರನ್ನು ಮುಳಬಾಗಿಲು ಗ್ರಾಮಾಂತರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.