ಕುಡಿಯುವ ನೀರು ವಿಚಾರವಾಗಿ ಇಬ್ಬರು ಲಾರಿ ಕ್ಲಿನರ್‌ಗಳ ಮಧ್ಯೆ ಉಂಟಾದ ಜಗಳವು ಕೊಲೆಯೊಂದಿಗೆ ಅಂತ್ಯವಾಗಿರುವ ಘಟನೆ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕುಡಿಯುವ ನೀರು ವಿಚಾರವಾಗಿ ಇಬ್ಬರು ಲಾರಿ ಕ್ಲಿನರ್‌ಗಳ ಮಧ್ಯೆ ಉಂಟಾದ ಜಗಳವು ಕೊಲೆಯೊಂದಿಗೆ ಅಂತ್ಯವಾಗಿರುವ ಘಟನೆ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಂಧ್ರಪ್ರದೇಶದ ಹಿಂದೂಪುರ ಮೂಲದ ಬರ್ಕತ್ (35) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಸೀನಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಗೊರಗುಂಟೆಪಾಳ್ಯ ಸಮೀಪ ಮಂಗಳವಾರ ರಾತ್ರಿ ಊಟ ಮಾಡಿದ ಬಳಿಕ ಈ ಕ್ಲಿನರ್‌ಗಳ ಮಧ್ಯೆ ಜಗಳವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲವು ದಿನಗಳಿಂದ ಇಬ್ಬರು ಸ್ನೇಹಿತರಾಗಿದ್ದು, ರಾತ್ರಿ ವೇಳೆ ಒಟ್ಟಿಗೆ ಅವರು ಊಟ ಹಾಗೂ ಮದ್ಯ ಸೇವನೆ ಮಾಡುತ್ತಿದ್ದರು. ಎಂದಿನಂತೆ ಮಂಗಳವಾರ ರಾತ್ರಿ ಸೀನಪ್ಪ ಹಾಗೂ ಬರ್ಕತ್ ಊಟ ಮಾಡಿದ್ದಾರೆ. ಆಗ ಕುಡಿಯಲು ನೀರು ಕೊಡುವಂತೆ ಗೆಳೆಯನಿಗೆ ಸೀನಪ್ಪ ಕೇಳಿದ್ದಾನೆ. ಆದರೆ ಆತ ನೀರು ಕೊಡಲು ನಿರಾಕರಿಸಿದ್ದಾನೆ. ಈ ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆತ, ಚಾಕುವಿನಿಂದ ಬರ್ಕತ್‌ಗೆ ಇರಿದಿದ್ದಾನೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಬರ್ತಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಗಲಾಟೆ ಬಗ್ಗೆ ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಹತ್ಯೆ ಎಸಗಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.