ಭಟ್ಕಳ:
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ಸಹಯೋಗದೊಂದಿಗೆ ಮುರ್ಡೇಶ್ವರದಲ್ಲಿ ಮಾ. 8ರ ಸಂಜೆ ಹಮ್ಮಿಕೊಂಡ ಮಹಾಶಿವರಾತ್ರಿ ಜಾಗರಣೆ ಉತ್ಸವ ಅದ್ಧೂರಿಯಾಗಿ ನಡೆಸಲು ನಿರ್ಧರಿಸಿದ್ದು, ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರೂ ಸೇರಿದಂತೆ ಅನೇಕ ಖ್ಯಾತ ಕಲಾವಿದರು ಭಾಗವಹಿಸುತ್ತಿದ್ದಾರೆ ಎಂದು ಸಹಾಯಕ ಆಯುಕ್ತೆ ಡಾ. ನಯನಾ ಎನ್. ಹೇಳಿದರು.ತಮ್ಮ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಶಿವರಾತ್ರಿ ಪ್ರಯುಕ್ತ ಮುರ್ಡೇಶ್ವರದಲ್ಲಿ ಸಂಪೂರ್ಣ ಜಾಗರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ಸಂಜೆ 6ರಿಂದ ಶನಿವಾರ ಬೆಳಗ್ಗೆ ೬ರ ವರೆಗೆ ಭಕ್ತಿಪ್ರಧಾನವಾದ ಕಾರ್ಯಕ್ರಮ ನಡೆಯಲಿದೆ ಎಂದರು.ಪ್ರಥಮ ಬಾರಿಗೆ ಮಹಾಶಿವರಾತ್ರಿ ಜಾಗರಣೆ ಉತ್ಸವ ಕಾರ್ಯಕ್ರಮ ನಡೆಯುತ್ತಿದ್ದು ಇದು ನಿರಂತರವಾಗಿ ಪ್ರತಿ ವರ್ಷ ನಡೆಯಬೇಕು ಎನ್ನುವುದು ಎಲ್ಲರ ಹಾರೈಕೆಯಾಗಿದೆ. ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರೂ ಸೇರಿ ರಾಷ್ಟ್ರಮಟ್ಟದ ಕಲಾವಿದರಿಂದ ಮನೋರಂಜನೆ, ಧ್ಯಾನ, ಧಾರ್ಮಿಕ ಕಾರ್ಯಕ್ರಮ, ಪ್ರಪ್ರಥಮ ಬಾರಿಗೆ ಲೇಜರ್ ಶೋ ಮತ್ತು ತ್ರೀಡಿ ಮ್ಯಾಪಿಂಗ್ ಕಾರ್ಯಕ್ರಮ ನಡೆಯಲಿದೆ. ಗಾಯಕಿ ಅನನ್ಯ ಭಟ್, ಶಂಧ್ಯಾ ಯೋಗ, ಖ್ಯಾತ ನಿರೂಪಕರಾದ ಪ್ರತಿಭಾ ಗೌಡ, ನಿರಂಜನ್ ದೇಶಪಾಂಡೆ, ಗಾನವಿ ಲಕ್ಷಣ್, ಅಶ್ವಿನ್ ಶರ್ಮ, ವಿಧುಶ್ರೀ ವೀಣಾ ವಾರುಣಿ ಮತ್ತು ತಂಡ, ಬಿಗ್‌ಬಾಸ್ ವಿಜೇತ ಕಾರ್ತಿಕ್ ಮಹೇಶ ಮತ್ತು ತಂಡ, ಸೆಲೆಬ್ರಿಟಿ ಕಲಾವಿದರಾದ ಬಾಯ್ಸ್ಜೋನ್ ಕ್ರೀವ್ ಮಂಗಳೂರು, ಫೇಮ್, ಜ್ಞಾನ ಇತ್ತಾಲ್ ಗೆಜ್ಜೆನಾದ ಟೀಮ್ ಮೊದಲಾದವರು ಪ್ರದರ್ಶನ ನೀಡಲಿದ್ದಾರೆ. ಅಲ್ಲದೇ ಜಿಲ್ಲೆಯ ಎಲ್ಲ ತಾಲೂಕಿನ ಕಲಾವಿದರೂ ಭಾಗವಹಿಸಲಿದ್ದಾರೆ ಎಂದ ಅವರು, ಭಟ್ಕಳದ ನೃತ್ಯ ತಂಡ, ಯಕ್ಷಗಾನ ತಂಡ ತಮ್ಮ ಪ್ರದರ್ಶನ ನೀಡಲಿದೆ ಎಂದರು.ಕಾರ್ಯಕ್ರಮಕ್ಕೆ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದು ಶುಕ್ರವಾರ ಬೆಳಗ್ಗೆಯಿಂದಲೇ ಜನಜಾತ್ರೆ ಆರಂಭವಾಗುವ ಸಾಧ್ಯತೆ ಇದೆ. ಸಂಜೆಯಾಗುತ್ತಲೇ ೬ ಸಾವಿರದಷ್ಟು ಜನ ಸೇರುವ ನಿರೀಕ್ಷೆ ಇದ್ದು ಜಿಲ್ಲಾಡಳಿತ, ತಾಲೂಕಾಡಳಿತ ಜನರಿಗೆ ಅನುಕೂಲ ಕಲ್ಪಿಸಲು, ಕಲಾವಿದರಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲು ಕೂಡಾ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.ಸಂಜೆ ೬ ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ವಿಪ ಸಭಾಪತಿ ಬಸವರಾಜ ಹೊರಟ್ಟಿ ಹಾಜರಿರಲಿದ್ದು ಸಂಸದ ಅನಂತಕುಮಾರ ಹೆಗಡೆ, ಶಾಸಕರಾದ ಆರ್.ವಿ. ದೇಶಪಾಂಡೆ, ಸತೀಶ ಸೈಲ್, ಎಸ್.ವಿ. ಸಂಕನೂರು, ಶಿವರಾಮ ಹೆಬ್ಬಾರ್, ದಿನಕರ ಶೆಟ್ಟಿ, ಶಾಂತಾರಾಮ ಸಿದ್ಧಿ, ಗಣಪತಿ ಉಳ್ವೆಕರ್, ಭೀಮಣ್ಣ ನಾಯ್ಕ, ಗ್ರಾಪಂ ಅಧ್ಯಕ್ಷರು ಉಪಸ್ಥಿತರಿರುವರು ಎಂದು ಹೇಳಿದರು.