ಮುರುರ್ಡೇಶ್ವರ ಸಮುದ್ರದಲ್ಲಿ ಒಬ್ಬ ನೀರುಪಾಲು, ಮತ್ತೊಬ್ಬನ ರಕ್ಷಣೆ

KannadaprabhaNewsNetwork |  
Published : Oct 07, 2024, 01:30 AM IST
ಮುರ್ಡೇಶ್ವರ ಸಮುದ್ರದಲ್ಲಿ ಮೃತಪಟ್ಟ ಬೆಂಗಳೂರಿನ ವಿದ್ಯಾರ್ಥಿ ಗೌತಮ್ | Kannada Prabha

ಸಾರಾಂಶ

ಬೆಂಗಳೂರಿನಿಂದ ಸುಮಾರು ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿನ ಪ್ರವಾಸಕ್ಕೆಂದು ಮುರ್ಡೇಶ್ವರಕ್ಕೆ ಆಗಮಿಸಿದ್ದರು. ದುರ್ಘಟನೆ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಭಟ್ಕಳ: ಮುರುರ್ಡೇಶ್ವರ ಸಮುದ್ರದಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿಗಳಲ್ಲಿ ಒಬ್ಬ ಸಮುದ್ರದ ಅಲೆಗೆ ಕೊಚ್ಚಿ ಹೋಗಿ ನೀರುಪಾಲಾದರೆ, ಇನ್ನೋರ್ವನನ್ನು ಲೈಫ್ ಗಾರ್ಡ್‌ಗಳು ರಕ್ಷಿಸಿದ ಘಟನೆ ಭಾನುವಾರ ನಡೆದಿದೆ.

ನೀರುಪಾಲಾದ ವಿದ್ಯಾರ್ಥಿಯನ್ನು ಬೆಂಗಳೂರು ವಿದ್ಯಾ ಸೌಧ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿ ಗೌತಮ್ (೧೭) ಎಂದು ಗುರುತಿಸಲಾಗಿದೆ. ಇದೇ ಕಾಲೇಜಿನ ಇನ್ನೋರ್ವ ವಿದ್ಯಾರ್ಥಿ ಧನುಷ್ ಸಮುದ್ರ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿ, ತಕ್ಷಣ ಸಮುದ್ರಕ್ಕಿಳಿದ ಲೈಫ್ ಗಾರ್ಡ್‌ಗಳು ರಕ್ಷಣೆ ಮಾಡಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಈತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಆತ ಅಪಾಯದಿಂದ ಪಾರಾಗಿದ್ದಾನೆ.

ಸಮುದ್ರದ ಅಲೆಗೆ ಕೊಚ್ಚಿ ಹೋದ ಗೌತಮ್ ಮೃತದೇಹ ಸ್ವಲ್ಪ ಹೊತ್ತಿನಲ್ಲೇ ಸಿಕ್ಕಿದೆ. ಬೆಂಗಳೂರಿನಿಂದ ಸುಮಾರು ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿನ ಪ್ರವಾಸಕ್ಕೆಂದು ಮುರ್ಡೇಶ್ವರಕ್ಕೆ ಆಗಮಿಸಿದ್ದರು. ದುರ್ಘಟನೆ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನೋಡುನೋಡುತ್ತಿದ್ದಂತೆಯೇ ತಮ್ಮ ಸಹಪಾಠಿ ನೀರಿನಲ್ಲಿ ಕೊಚ್ಚಿ ಹೋಗಿದ್ದರಿಂದ ಎಲ್ಲ ವಿದ್ಯಾರ್ಥಿಗಳೂ ಒಮ್ಮೆ ಗಾಬರಿಗೊಂಡು ಬೊಬ್ಬೆ ಹಾಕಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಕೆಲಕಾಲ ಸಮುದ್ರ ತೀರದಿಂದ ಎಲ್ಲರನ್ನೂ ಹೊರಗೆ ಕಳುಹಿಸಿ, ಕೆಲಕಾಲ ಸಮುದ್ರ ತೀರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರು. ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಸಮುದ್ರಕ್ಕೆ ಇಳಿಯಲು ಅವಕಾಶ ಕಲ್ಪಿಸಲಾಯಿತು. ಮುರ್ಡೇಶ್ವರ ಸಮುದ್ರದಲ್ಲಿ ಪ್ರವಾಸಿಗರೇ ಹೆಚ್ಚು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಸಮುದ್ರದ ಆಳ ಮತ್ತು ಅಲೆಗಳ ಆರ್ಭಟದ ಬಗ್ಗೆ ಸರಿಯಾದ ತಿಳಿವಳಿಕೆ ಇರುವುದಿಲ್ಲ. ಜತೆಗೆ ಸರಿಯಾಗಿ ಈಜು ಬಾರದವರೂ ನೀರಿಗಿಳಿಯುತ್ತಾರೆ. ಬೈಕ್ ಡಿಕ್ಕಿ: ಪಾದಚಾರಿ ಮಹಿಳೆ ಸಾವು

ಮುಂಡಗೋಡ: ಬೈಕ್ ಡಿಕ್ಕಿಯಾಗಿ ಪಾದಚಾರಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ.ಪಟ್ಟಣದ ಇಂದಿರಾನಗರ ನಿವಾಸಿ ಶಂಕ್ರವ್ವ ದೇವಪ್ಪ ಕುರುಬರ(೫೨) ಮೃತಪಟ್ಟ ದುರ್ದೈವಿ. ಪಟ್ಟಣದ ಹುಬ್ಬಳ್ಳಿ ರಸ್ತೆಯ ಟ್ರಿನಿಟಿ ಹಾಲ್ ಬಳಿ ನಡೆದುಕೊಂಡು ಹೋಗುತ್ತಿದ್ದ ಇವರಿಗೆ ಹಿಂದಿನಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಜೆಟಲ್ಲಿ ಹೇಳಿದಂತೆ 15 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಶೀಘ್ರ: ಮಧು
ಬೆಂಗಳೂರಿನ ಕೊಳಚೆ ನೀರಿಂದ ತರಕಾರಿಯೂ ವಿಷ : ಸಂಸತ್ತಲ್ಲಿ ಗೌಡ