ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಇಲ್ಲಿನ ಕುವೆಂಪು ಸಭಾಂಣದಲ್ಲಿ ಭಾರತೀ ಶಿಕ್ಷಣ ಸಂಸ್ಥೆಯಿಂದ ಮೈಸೂರಿನ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವತಿಯಿಂದ ಭಾರತೀ ಸಂಗೀತ ಮತ್ತು ಲಲಿತಕಲೆಗಳ ಮಹಾವಿದ್ಯಾಲಯ ಉದ್ಘಾಟನೆ ಸಮಾರಂಭದ ಹಿನ್ನಲೆಯಲ್ಲಿ ಶೈಕ್ಷಣಿಕ ವರ್ಷಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಂಡ್ಯ, ಮೈಸೂರು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಸಂಗೀತ ಶಾಲೆ ಇಲ್ಲ. ಸಂಗೀತ ಮತ್ತು ಲಲಿತಕಲೆಗಳ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಅವಕಾಶಗಳು ಲಭ್ಯವಾಗಬೇಕೆಂಬ ಉದ್ದೇಶದಿಂದ ಸಂಸ್ಥೆ ಆರಂಭಿಸಲು ಆಶಯ ಹೊಂದಿದ್ದೆ. ಈಗ ಅದು ಸಾಕಾರಗೊಂಡಿರುವುದು ಸಂತಸ ತಂದಿದೆ ಎಂದರು.ವಿದ್ಯಾರ್ಥಿಗಳು ಕೇವಲ ಪುಸ್ತಕದ ಓದಿಗೆ ಸೀಮಿತರಾಗದೆ ಸಂಗೀತ, ನೃತ್ಯ, ಲಲಿತಕಲೆ ಹಾಗೂ ಇತರ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಕಲಿಕೆಗೆ ವಯಸ್ಸಿನ ಮಿತಿಯಿಲ್ಲ. ಕಲಿಯುವ ಆಸಕ್ತಿ ಮತ್ತು ಛಲ ಇದ್ದರೆ ಜೀವನದ ಯಾವುದೇ ಹಂತದಲ್ಲಿಯೂ ಹೊಸ ಜ್ಞಾನ ಮತ್ತು ಕೌಶಲ್ಯಗಳನ್ನು ಸಂಪಾದಿಸಬಹುದು ಎಂದರು.
ಭಾರತೀ ಶಿಕ್ಷಣ ಸಂಸ್ಥೆಯಿಂದ ವಿವಿಧ ಶಿಕ್ಷಣ ಕ್ಷೇತ್ರಗಳಲ್ಲಿ ಅನೇಕ ಕಾಲೇಜುಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶಗಳನ್ನು ಕಲ್ಪಿಸಲಾಗಿದೆ. ತಮ್ಮ ಅವಧಿಯಲ್ಲಿ 20ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಆರಂಭಗೊಂಡಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದರು.
ಭಾರತೀ ಸಂಗೀತ ಮತ್ತು ಲಲಿತಕಲೆಗಳ ಮಹಾವಿದ್ಯಾಲಯದ ಪ್ರಾಂಶುಪಾಲೆ ವಿದೂಷಿ ಎಂ.ಎನ್.ಸುಶ್ಮಿತಾ ಮಾತನಾಡಿ, ಕಲೆಗೆ ದೊರೆತಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮಲ್ಲಿರುವ ವಿಭಿನ್ನ ರೀತಿಯ ಪ್ರತಿಭೆಯನ್ನು ಹೊರತರಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಸಂಸ್ಥೆ ಅಧ್ಯಕ್ಷ ಮಧು ಜಿ.ಮಾದೇಗೌಡರು ವಿದ್ಯಾರ್ಥಿಗಳಿಗೆ ಗೆಜ್ಜೆ ನೀಡಿದರು. ಸಂಸ್ಥೆ ವಿವಿಧ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಎಲ್.ಸುರೇಶ್, ಡಾ.ಎಂ.ಎಸ್ ಮಹದೇವಸ್ವಾಮಿ, ಜಿ.ಬಿ.ಪಲ್ಲವಿ, ಸಿ.ರಮ್ಯ, ಎಚ್.ಬಿ.ಪ್ರತಿಮಾ, ನಂದಾ ಯಲಮಾಲ ಸೇರಿದಂತೆ ಹಲವರಿದ್ದರು.