ಹುಬ್ಬಳ್ಳಿ:
ಬೆಂಗಳೂರಿನ ರುದ್ರೇಶ್ ಭಜಂತ್ರಿ ಶಹನಾಯಿ ವಾದನದಲ್ಲಿ ರಾಗ ಶಾಮ ಕಲ್ಯಾಣ ನುಡಿಸುವುದರೊಂದಿಗೆ ಚಾಲನೆ ನೀಡಿದ ನಂತರ ಗಾಯಕ ಪಂ. ವೆಂಕಟೇಶ ಕುಮಾರ ರಾಗ ತಿಲಕ ಕಾಮೋದನಲ್ಲಿ ಡಮರು ಡಮರು ಬಾಜೆ ಗೀತ ಗಾಯನ ಮಾಡಿ ಶಿವನಾಮ ಸ್ಮರಣೆಗೆ ನಾಂದಿ ಹಾಡಿದರು. ಜತೆಗೆ ತೊರೆದು ಜೀವಿಸಬಹುದೇ ಹಾಡಿ ಕೇಳುಗರನ್ನು ಖುಷಿಗೊಳಿಸಿದರು.
ರಾಗ ಮಾಲಕಂಸದಲ್ಲಿ ಪ್ರತಿಮಾ ಜೋಶಿ ಫಾಲನೇತ್ರ ಹರ ಗೀತೆಗೆ ತಲೆದೂಗಿದ ಕೇಳುಗರು, ವೈಷ್ಣವಿ ಹಾನಗಲ್ ಬೈರಾಗಿ ಭೈರವ್ ರಾಗದಲ್ಲಿ ಹಾಡಿದ ಶಿವಶಂಕರ ಮಹಾದೇವ ಭೋಲಾ ಬಂದಿಶ್‌ಗೆ ಸೈ ಎಂದರು. ಡಾ. ಪದ್ಮಿನಿ ಓಕ್ ಶಿವನಾಮ ಸ್ಮರಣೆ ಮಾಡಿ ಓಂ ಶಂಭೋ ಶಶಿಶೇಖರ ಗೀತೆ ಹಾಡಿದರೆ, ಗಾಯಕ ಶ್ರೀಕಾಂತ ಬಾಕಳೆ ಮಾರು ಬಿಹಾಗ ರಾಗವನ್ನು ಹಾಡಿದರು. ಡಾ. ಗುರುಬಸವ ಮಹಾಮನೆ ಹಾಗೂ ಅವರ ಸಣ್ಣ ವಯಸ್ಸಿನ ಪುತ್ರ ಸಾತ್ವಿಕ ವಯಲಿನ್ ದ್ವಂದ್ವ ವಾದನವು ಕೇಳುವಂತಿತ್ತು.ಸುನೀತಾ ಪೂಜಾರಿ ಅವರ ಗರಡಿಯಲ್ಲಿ ತಯಾರಾದ ವಿದ್ಯಾರ್ಥಿಗಳು ಸಮುದ್ರ ಮಥನದಲ್ಲಿ ಶಿವ ಹಾಲಾಹಲ ಕುಡಿದಿದ್ದು, ಮನ್ಮಥನ ಬಾಣಕ್ಕೆ ಮೋಹಗೊಂಡಿದ್ದು ಹಾಗೂ ಗಿರಿಜಾ ಕಲ್ಯಾಣ ನೃತ್ಯ ರೂಪಕ ಪ್ರಸ್ತುತಪಡಿಸಿದರು. ಇದಕ್ಕೂ ಮೊದಲು ಸಜನಿ ಪೂಜಾರಿ ಅಳಗಿರಿ ನಂದಿನಿ ಹಾಡಿಗೆ ಭಾವಪೂರ್ಣವಾಗಿ ಪ್ರಸ್ತುತಪಡಿಸಿದ ನೃತ್ಯವು ಸಭಿಕರನ್ನು ಬೆರಗಾಗಿಸಿತು.
ಶ್ರೀಧರ ಮಾಂಡ್ರೆ, ಸಾತಲಿಂಗಪ್ಪ ದೇಸಾಯಿ, ಪರಶುರಾಮ, ಬಸವರಾಜ ಹಿರೇಮಠ, ಬಸವರಾಜ ವಂದಲಿ, ಅಶೋಕ ಪಾಟೀಲ, ವಿಜಯಕುಮಾರ ಅರ್ಕಸಾಲಿ, ಆಂಜನೇಯ, ವಿನೋದ ಪಾಟೀಲ, ಅವರಯ್ಯ ಹಿರೇಮಠ, ವಿಜಯಕುಮಾರ ಸುತಾರ ಮೊದಲಾದವರು ಹಾರ್ಮೋನಿಯಂ, ತಬಲಾ, ತಂಬೂರಿ ಸಾಥ್ ನೀಡಿದರು. ಆರತಿ ದೇವಶಿಖಾಮಣಿ ಸಂಗೀತ ಕಾರ್ಯಕ್ರಮ ನಿರೂಪಿಸಿದರು.