ಸಂಗೀತ, ನೃತ್ಯ ಮೈಮನಸ್ಸಿಗೆ ಟಾನಿಕ್‌: ಚಂದ್ರಶೇಖರ್‌

KannadaprabhaNewsNetwork | Published : Apr 28, 2024 1:15 AM

ಸಾರಾಂಶ

ಜೀವನ ಜಂಜಾಟದ ಒತ್ತಡದಲ್ಲಿ ಮೈ ಮನಸ್ಸಿಗೆ ಸಂಗೀತ, ನೃತ್ಯ ಟಾನಿಕ್‌ನಂತೆ ಕೆಲಸ ಮಾಡುತ್ತವೆ ಎಂದು ಮನೋವೈದ್ಯ ಸಿ.ಆರ್. ಚಂದ್ರಶೇಖರ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜೀವನ ಜಂಜಾಟದ ಒತ್ತಡದಲ್ಲಿ ಮೈ ಮನಸ್ಸಿಗೆ ಸಂಗೀತ, ನೃತ್ಯ ಟಾನಿಕ್‌ನಂತೆ ಕೆಲಸ ಮಾಡುತ್ತವೆ ಎಂದು ಮನೋವೈದ್ಯ ಸಿ.ಆರ್. ಚಂದ್ರಶೇಖರ್ ಹೇಳಿದರು.

ಶನಿವಾರ ಇಲ್ಲಿನ ಜಯನಗರ ಜಿಎಸ್ಎಸ್ ಸಭಾಂಗಣದಲ್ಲಿ ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಶನ್ ಟ್ರಸ್ಟ್‌ನಿಂದ ನಡೆದ ‘ಚೈತ್ರ ಸಂಗೀತೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜೀವನದ ಹಲವು ಘಟ್ಟದಲ್ಲಿ ಹತಾಶೆ ಆವರಿಸುತ್ತದೆ. ಆಗ ನಾವು ನೆಮ್ಮದಿ ಅರಸುತ್ತೇವೆ. ಈ ಜಂಜಾಟದಲ್ಲಿ ಮೈ ಮನಸ್ಸಿಗೆ ಸಂಗೀತ, ನೃತ್ಯ ಕಲೆಗಳು ಟಾನಿಕ್‌ನಂತೆ ಕೆಲಸ ಮಾಡುತ್ತವೆ. ನಿರಾಸೆ, ಹತಾಶೆ ದುಃಖದ ಸಂದರ್ಭದಲ್ಲಿ ಸಂಗೀತದ ಲಯ, ತಾಳ ಶೃತಿ ನಮ್ಮನ್ನು ಹಗುರಗೊಳಿಸಿ ಸೂಕ್ತ ತೀರ್ಮಾನ ಕೈಗೊಳ್ಳಲು ನೆರವಾಗುತ್ತವೆ ಎಂದು ಹೇಳಿದರು.

ಶಾಸ್ತ್ರೀಯ ನೃತ್ಯ ಕಲಾವಿದ, ನಟ ಡಾ। ಶ್ರೀಧರ್ ಮಾತನಾಡಿ, ಕಲಾವಿದರು ಕೇವಲ ಒಂದು ಕಲೆಗೆ ಸೀಮಿತವಾಗದೆ ಜೀವನದ ಎಲ್ಲ ಪಟ್ಟುಗಳನ್ನು ಅರಿತಿರಬೇಕು. ಪ್ರತಿ ಹೆಜ್ಜೆಗಳನ್ನು ಅಚ್ಚುಕಟ್ಟಾಗಿ ಇಡಬೇಕು. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಜಾಣ್ಮೆ ಇರಬೇಕು ಎಂದು ಹೇಳಿದರು.

ನಿವೃತ್ತ ಲೋಕಾಯುಕ್ತ ಸಂತೋಷ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲೆಯ ಮಹತ್ವ ಅಪಾರವಾದದ್ದು ಎಂದು ತಿಳಿಸಿದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪಂ. ಸತೀಶ್‌ ಹಂಪಿಹೊಳಿ ಸ್ವಾಗತಿಸಿದರು. ಕಾಂತಿ ಸ್ವೀಟ್ಸ್ ಸಹಸಂಸ್ಥಾಪಕಿ ಉಷಾದೇವಿ ಇದ್ದರು.

ಈ ವೇಳೆ ಪಂ. ಡಾ। ಮೃತ್ಯುಂಜಯ ಶೆಟ್ಟರ್ ಅವರು ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಶನ್ ಟ್ರಸ್ಟ್‌ನ ಯೂಟ್ಯೂಬ್ ಚಾನಲ್ ಅನಾವರಣ ಮಾಡಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಮುರಳಿಮೋಹನ ಕಲ್ವಕಲ್ವ ಅವರ ‘ನಾದಂ’ ತಂಡದಿಂದ ಒಂದು ಗಂಟೆ ಪ್ರಸ್ತುತವಾದ ಕಥಕ್ ನೃತ್ಯಾವಳಿ ಪ್ರೇಕ್ಷಕರ ಮನಸೂರೆಗೊಂಡಿತು.

ಗುರು ಗೌರವ ಪ್ರದಾನ:

ಕಾರ್ಯಕ್ರಮದಲ್ಲಿ ಪಂ.ಬಸವರಾಜ ಬೆಂಡಿಗೇರಿ ಸ್ಮರಣಾರ್ಥವಾಗಿ ಸಂಸ್ಥೆಯು ನೀಡುವ ‘ಗುರು ಗೌರವ ಪ್ರಶಸ್ತಿ’ಯನ್ನು ಖ್ಯಾತ ಕಥಕ್ ಕಲಾವಿದ ಮುರಳಿಮೋಹನ್ ಕಲ್ವಕಲ್ವ ಅವರಿಗೆ ಕರ್ನಾಟಕ ಕಲಾಶ್ರೀ ಡಾ। ಶ್ರೀಧರ್ ಅವರು ಪ್ರದಾನ ಮಾಡಿದರು. ಪ್ರಶಸ್ತಿಯು ₹25 ಸಾವಿರ ನಗದು, ಫಲಕವನ್ನು ಒಳಗೊಂಡಿದೆ.

Share this article