ಕಸಾಪ ಅಧ್ಯಕ್ಷ ಸಿದ್ದಲಿಂಗಪ್ಪ ಅಭಿಮತ । ಕನ್ನಡ ಪದ ಅಂದ, ಕನ್ನಡ ಧ್ವನಿ ಚಂದ ಕಾರ್ಯಕ್ರಮಕ್ಕೆ ಚಾಲನೆ
ಸಂಗೀತ ದೇಶ, ಭಾಷೆ, ಜಾತಿ, ಪಂಥ, ಮತಗಳನ್ನು ಮೀರಿದ ಒಂದು ಕಲೆ. ತನ್ನ ಲಯಕ್ಕೆ ಎಂತಹವನ್ನು ತಲೆದೂಗು ವಂತೆ ಮಾಡುವ ಶಕ್ತಿಯನ್ನು ಹೊಂದಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಗರದ ಶ್ರೀ ಸಿದ್ಧಗಂಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸ್ವರಸಿಂಚನ ಸುಗಮ ಸಂಗೀತ, ಜಾನಪದ ಕಲಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಪದ ಅಂದ, ಕನ್ನಡ ದ್ವನಿ ಚಂದ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂಗೀತದ ಮಾಧುರ್ಯಕ್ಕೆ ಮನಸೋಲದ ವ್ಯಕ್ತಿಯೆ ಇಲ್ಲ ಎಂದರು.ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ. ಪುರುಷೋತ್ತಮ್ ಮಾತನಾಡಿ, ಪಾಶ್ಚಿಮಾತ್ಯ ಸಂಗೀತದತ್ತ ವಾಲುತ್ತಿರುವ ದಿನಗಳಲ್ಲಿ, ಕೆಂಕೆರೆ ಅವರು ಜಾನಪದ, ರಂಗಗೀತೆ, ಸುಗಮ ಸಂಗೀತದಂತಹ ಜನಪದರ ಹಾಡುಗಳಿಗೆ ದ್ವನಿಯಾಗುತ್ತಿರುವುದು ಎಲ್ಲರೂ ಮೆಚ್ಚುವಂತಹದ್ದು, ಇವರು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಉಪನ್ಯಾಸಕ ಉಮಾಮಹೇಶ್ ಮಾತನಾಡಿ, ಸಂಗೀತ ನಕರಾತ್ಮಕ ಭಾವನೆಗಳನ್ನು ತೊಲಗಿಸಿ, ಮನುಷ್ಯನಲ್ಲಿ ಸರಕಾರತ್ಮಕ ಭಾವನೆ ಮೂಡುವಂತೆ ಮಾಡುತ್ತದೆ. ಹಾಗಾಗಿ ವೈದ್ಯಕೀಯ ಶಿಕ್ಷಣದಲ್ಲಿಯೂ ಸಂಗೀತವನ್ನು ಒಂದು ತರಪಿಯಾಗಿ ಬಳಕೆ ಮಾಡಲಾಗುತ್ತಿದೆ. ಹಾಗಾಗಿ ಸಂಗೀತ, ಸಾಹಿತ್ಯದ ಬಗ್ಗೆ ಆಸಕ್ತಿ ಇದ್ದರೆ ನೆಮ್ಮದಿ, ಶಾಂತಿ ನೆಲೆಸಲಿದೆ ಎಂದರು.
ಕಾರ್ಯಕ್ರಮದ ಆಯೋಜಕರಾದ ಸ್ವರಸಿಂಚನ ಸುಗಮ ಸಂಗೀತ ಜಾನಪದ ಕಲಾ ಸಂಸ್ಥೆಯ ಅಧ್ಯಕ್ಷ ಕೆಂಕೆರೆ ಮಲ್ಲಿಕಾರ್ಜುನ್ ಮಾತನಾಡಿ, ಕಳೆದ 1999 ರಲ್ಲಿ ಮೊದಲ ಬಾರಿಗೆ ಸಿದ್ಧಗಂಗಾ ಮಠದಲ್ಲಿ ಸಂಗೀತ ಕಾರ್ಯಕ್ರಮ ಆರಂಭಿಸಿ, ಶ್ರೀಗಳ ಅಶೀರ್ವಾದದಿಂದ ಇಂದು ಪ್ರಧಾನಮಂತ್ರಿಗಳ ಕಾರ್ಯಕ್ರಮದಲ್ಲಿ ಹಾಡುಗಾರಿಕೆ ನಡೆಸುವಂತೆ ಗುರುತಿಸಿ ಕೊಂಡಿದ್ದೇನೆ. ನನ್ನಂತೆಯೇ ಅನೇಕರಿಗೆ ವೇದಿಕೆ ಕಲ್ಪಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದು, ಜಿಲ್ಲಾಸ್ಪತ್ರೆಯ ಸಹಯೋಗದಲ್ಲಿ ರೋಗಿಗಳ ವಾರ್ಡಿನಲ್ಲಿ ಪ್ರಯೋಗಾತ್ಮಕವಾಗಿ ಸಂಗೀತ ಕಛೇರಿ, ಹಾಗೆಯೇ ಕ್ಯಾನ್ಸರ್ ರೋಗಿಗಳ ಮುಂದೆಯೂ ಹಾಡುಗಾರಿಕೆ ನಡೆಸಲಾಗಿದೆ. ನಮ್ಮ ನಾಡಿನ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪೌರಕಾರ್ಮಿಕರಿಗಾಗಿ ಒಂದು ಕಾರ್ಯಕ್ರಮ ನೀಡಬೇಕೆಂಬ ಇಚ್ಛೆ ಇದೆ. ಪೈಪೋಟಿಯ ಕಾಲದಲ್ಲಿ ನನ್ನ ಕೈಹಿಡಿದ ನಡೆಸಿದ ಎಲ್ಲರನ್ನು ಸ್ಮರಿಸುವುದಾಗಿ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಜಗದೀಶ್ ಕುಮಾರ್ ಮಾತನಾಡಿ, ಹಿಂದಿನ ಗುರುಕುಲ ಶಿಕ್ಷಣದಲ್ಲಿ ಸಂಗೀತಕ್ಕೆ ಹೆಚ್ಚು ಒತ್ತು ನೀಡಿದ್ದರು. ಶಿಕ್ಷಣ, ಸಂಸ್ಕೃತಿ, ಪರಂಪರೆಗೆ ಅವಿನಾಭಾವ ಸಂಬಂಧವಿದೆ. ಇಂದು ನಮ್ಮ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ಲಾವಣಿ, ಜಾನಪದ, ಗೀಗಿ ಪದ, ವಚನ ಗಾಯನ ಪ್ರಸ್ತುತ ಪಡಿಸುವ ಮೂಲಕ ಒಳ್ಳೆಯ ಮನರಂಜನೆಯ ಜೊತೆಗೆ, ಕಲಾ ಪ್ರಕಾರಗಳನ್ನು ಪರಿಚಯಿಸುತ್ತಿರುವುದು ಸಂತೋಷದ ವಿಚಾರ ಎಂದರು.
ವೇದಿಕೆಯಲ್ಲಿ ಕವಿಯಿತ್ರಿ ಹಾಗೂ ಲೇಖಕಿ ಕಮಲ ರಾಜೇಶ್ ಉಪಸ್ಥಿತರಿದ್ದರು. ಕನ್ನಡ ಪದ ಅಂದ, ಕನ್ನಡ ದ್ವನಿ ಚಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಂಡಿತ್ ನಾಗರಾಜು ಶ್ಯಾವಿ ಮತ್ತು ತಂಡದವರಿಂದ ಕೊಳಲು ವಾದನ, ಸುನಯನ ಅರುಣ್ ಮತ್ತು ತಂಡದವರಿಂದ ಕನ್ನಡ ಕಾವ್ಯ ಗಾಯನ, ವಿದ್ವಾನ್ ನಾಗಭೂಷಣ್ ಮತ್ತು ತಂಡದಿಂದ ಭಕ್ತಿ ಸುಧೆ, ವಾದ್ಯ ಸಂಗೀತ, ಕೆ.ಸಿ. ಚಲ್ಲಯ್ಯ ಮತ್ತು ತಂಡದಿಂದ ಜಾನಪದ ಗೀತೆಗಳ ಗಾಯನ ನಡೆಯಿತು. ವಾದ್ಯ ಸಹಕಾರದಲ್ಲಿ ಗಣೇಶ್ ಪ್ರಸಾದ್, ಮೋಹನ್‌ಕುಮಾರ್, ಲೋಕೇಶ್ ಬಾಬು, ನಿಜಾನಂದ್ ಮತ್ತಿತರರು ಪಾಲ್ಗೊಂಡಿದ್ದರು.