ಹುಬ್ಬಳ್ಳಿ: ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಶನಿವಾರ ಸಂಜೆ ಕ್ಷಮತಾ ಸೇವಾ ಸಂಸ್ಥೆ ಹಾಗೂ ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯದ ಸಹಯೋಗದಲ್ಲಿ ಭಾರತ ರತ್ನ ಪಂ. ಭೀಮಸೇನ ಜೋಶಿ ಅವರಿಗೆ ಗೌರವಾರ್ಪಣೆ ನಿಮಿತ್ತ ಏರ್ಪಡಿಸಿದ್ದ ಸ್ವರ ಸಾಮ್ರಾಟ ಕಾರ್ಯಕ್ರಮ ಜನಮನಸೂರೆಗೊಂಡಿತು.
ಉದ್ಘಾಟನೆ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷಮತಾ ಸೇವಾ ಸಂಸ್ಥೆ ಅಧ್ಯಕ್ಷ ಗೋವಿಂದ ಜೋಶಿ, ದೇಶಿ ಕಲೆಗಳು ಮಾಯವಾಗುತ್ತಿವೆ. ಕ್ಷಮತಾ ಸಂಸ್ಥೆಯಿಂದ ಕಬಡ್ಡಿ, ಗಾಳಿಪಟ, ಸಂಗೀತೋತ್ಸವ ಏರ್ಪಡಿಸಿ ಉಳಿಸುವ ಕೆಲಸ ಮಾಡಲಾಗುತ್ತಿದೆ ಎಂದರು.ಎಲ್‌ಐಸಿ ಹಿರಿಯ ವಿಭಾಗೀಯ ವ್ಯವಸ್ಥಾಪಕ ಬಿ.ಎಸ್. ಚಕ್ರವರ್ತಿ ಮಾತನಾಡಿ, ಸಂಗೀತಕ್ಕೆ ಕಲ್ಲು ಕರಗಿಸುವ ಶಕ್ತಿ ಇದೆ. ಸಂಗೀತ ಹೊರಹೊಮ್ಮುತ್ತಿದ್ದಂತೆಯೇ ನಮ್ಮ ಮನಸ್ಸು, ದೇಹಕ್ಕೆ ಏಕಾಗ್ರತೆ ಫಲಿಸುತ್ತದೆ ಎಂದರು.
ಎಲ್‌ಐಸಿ ವಿಭಾಗೀಯ ಮಾರುಕಟ್ಟೆ ವ್ಯವಸ್ಥಾಪಕಿ ರತ್ನಪ್ರಭಾ ಶಂಕರ ಮಾತನಾಡಿದರು. ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯದ ಅಧ್ಯಕ್ಷೆ ವಿದುಷಿ ವೈಷ್ಣವಿ ಹಾನಗಲ್, ಕಾರ್ಯದರ್ಶಿ ವಿನಯ ನಾಯಕ್, ಬಾಲಚಂದ್ರ ನಾಕೋಡ, ಸಂತೋಷ ಮೊಕಾಶಿ, ಮುರಳೀಧರ ಮಳಗಿ ಸೇರಿದಂತೆ ಹಲವರಿದ್ದರು. ನಮ್ರತಾ ಜೋಶಿ ಪ್ರಾರ್ಥಿಸಿದರು. ಅರ್ಚನಾ ಜೋಶಿ ವಂದಿಸಿದರು.