ಮುಸ್ಲಿಂ ಜಾಗೃತಿ ಸಮಾಲೋಚನಾ ಸಭೆ

KannadaprabhaNewsNetwork |  
Published : Jul 11, 2025, 01:47 AM IST
ಚಿತ್ರ :  7ಎಂಡಿಕೆ1 : ಮುಸ್ಲಿಂ ಜಾಗೃತಿ ಸಮಾಲೋಚನಾ ಸಭೆ ನಡೆಯಿತು.  | Kannada Prabha

ಸಾರಾಂಶ

ಮುಸಲ್ಮಾನರ ಸವಾಂಗೀಣ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ವಿವಿಧ ಹಕ್ಕೊತ್ತಾಯಗಳನ್ನು ಸಭೆ ಮಂಡಿಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕರ್ನಾಟಕ ಮುಸ್ಲಿಂ ಯೂನಿಟಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಮುಸ್ಲಿಂ ಜಾಗೃತಿ ಸಮಾಲೋಚನಾ ಸಭೆ ನಡೆಯಿತು. ಮುಸಲ್ಮಾನರ ಸರ್ವಾಂಗೀಣ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ವಿವಿಧ ಹಕ್ಕೊತ್ತಾಯಗಳನ್ನು ಸಭೆ ಮಂಡಿಸಿತು.ಕುಶಾಲನಗರ ಸಮೀಪ ಗುಡ್ಡೆಹೊಸೂರಿನ ಖಾಸಗಿ ರೆಸಾರ್ಟ್ನಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಕರ್ನಾಟಕ ಮುಸ್ಲಿಂ ಯೂನಿಟಿಯ ರಾಜ್ಯಾಧ್ಯಕ್ಷ ಜಬ್ಬರ್ ಕಲ್ಬುರ್ಗಿ ಅವರು ಮುಸಲ್ಮಾನರು ಇಂದು ಸಾಮಾಜಿಕ ಮತ್ತು ರಾಜಕೀಯವಾಗಿ ತಾರತಮ್ಯಕ್ಕೆ ಒಳಗಾಗುತ್ತಿದ್ದು, ಸಂವಿಧಾನಾತ್ಮಕ ಹಕ್ಕುಗಳನ್ನು ಪಡೆಯಲು ನಾವೆಲ್ಲರು ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕು ಎಂದು ಕರೆ ನೀಡಿದರು.ಐಕ್ಯತೆಯ ಕೂಗಿನೊಂದಿಗೆ ಮುಸಲ್ಮಾನರ ಏಳಿಗೆಗಾಗಿ ಪ್ರಮುಖ ಹಕ್ಕೊತ್ತಾಯಗಳನ್ನು ಸರ್ಕಾರದ ಮುಂದಿಡಬೇಕಾಗಿದೆ ಎಂದು ಸಭೆಯ ಒಪ್ಪಿಗೆ ಪಡೆದರು.*ಹಕ್ಕೊತ್ತಾಯಗಳು*2ಬಿ ಯ ಶೇ.4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿರುವ ರಾಜ್ಯದ ಈ ಹಿಂದಿನ ಬಿಜೆಪಿ ಸರ್ಕಾರದ ನಿರ್ಧಾರವನ್ನು ಕೈಬಿಟ್ಟು ಮೀಸಲಾತಿಯನ್ನು ಯಥಾಸ್ಥಿತಿ ಮುಂದುವರಿಸಬೇಕು ಮತ್ತು ಜನಸಂಖ್ಯೆಯನ್ನು ಆಧರಿಸಿ ಶೇ.4 ರಷ್ಟಿರುವ ಮೀಸಲಾತಿಯನ್ನು ಶೇ.8 ಕ್ಕೆ ಏರಿಕೆ ಮಾಡಬೇಕು.ಸ್ಥಳೀಯ ಸಂಸ್ಥೆಗಳಲ್ಲಿರುವ ಓಬಿಸಿಯ ಒಟ್ಟು ಮೀಸಲಾತಿಯಲ್ಲಿ ಎಲ್ಲಾ ಜಾತಿಗಳಿಗೆ ಪ್ರತ್ಯೇಕ ಒಳಮೀಸಲಾತಿ ತರಲು ಕಾನೂನು ತಿದ್ದುಪಡಿ ಮಾಡಬೇಕು. ಅಲ್ಪಸಂಖ್ಯಾತ ಸಮುದಾಯದ ಆಡಳಿತ ಮಂಡಳಿಗಳು ನಡೆಸುತ್ತಿರುವ ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಅನುದಾನ ನೀಡಬೇಕು. ಶಿಕ್ಷಣ ಸಂಸ್ಥೆಗಳ ಕಟ್ಟಡ ಮತ್ತು ಮೂಲಭೂತ ಸೌಕರ್ಯಕ್ಕೆ ಕಾರ್ಯಯೋಜನೆ ಜಾರಿಗೊಳಿಸಬೇಕು.ವಕ್ಫ್ ಮಂಡಳಿಯಲ್ಲಿ ಬದಲಾವಣೆಯನ್ನು ತಂದು ವಕ್ಫ್ ನ ಹಕ್ಕು ಮತ್ತು ಸ್ವತಂತ್ರವನ್ನು ಮೊಟುಕುಗೊಳಿಸುವ ಕೇಂದ್ರ ಸರ್ಕಾರದ ಹೊಸ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ರಾಜ್ಯ ಸರ್ಕಾರ ನಿರ್ಣಯ ಕೈಗೊಳ್ಳಬೇಕು. ನಿರ್ಣಯದ ಪ್ರತಿಯನ್ನು ನ್ಯಾಯಾಲಯಕ್ಕೆ ಮತ್ತು ರಾಷ್ಟ್ರಪತಿಗಳಿಗೆ ನೀಡಬೇಕು.ರಾಜ್ಯದಲ್ಲಿ ಲೈಸೆನ್ಸ್ ಹೊಂದಿರುವ ಮುಸ್ಲಿಂ ಗುತ್ತಿಗೆದಾರರಿಗೆ ಆದ್ಯತೆ ಮತ್ತು ವಿಶೇಷ ಅವಕಾಶಗಳನ್ನು ನೀಡಿ ಸರ್ಕಾರ ತಾನು ಹೊರಡಿಸಿರುವ ಆದೇಶವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ದೇಶದಲ್ಲಿ ಜಾರಿಯಲ್ಲಿರುವ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮವನ್ನು ಕಡ್ಡಾಯವಾಗಿ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಮತ್ತು ಯೋಜನೆಗಳು ಜನರಿಗೆ ತಲುಪುವಂತೆ ಕ್ರಮಕೈಗೊಳ್ಳಬೇಕು. ಕರ್ನಾಟಕ ಅಲ್ಪಸಂಖ್ಯಾತ ಆಯೋಗ ಮತ್ತು ಇಲಾಖೆಗಳು ಜಂಟಿಯಾಗಿ ತ್ರೈ ಮಾಸಿಕ ಸಭೆಗಳನ್ನು ನಡೆಸುವ ಮೂಲಕ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಬೇಕು ಎಂದು ಕರ್ನಾಟಕ ಮುಸ್ಲಿಂ ಯೂನಿಟಿ ಒತ್ತಾಯಿಸಿತು.ಕೆ.ಎ.ಯಾಕುಬ್ ಅವಿರೋಧ ಆಯ್ಕೆಕರ್ನಾಟಕ ಮುಸ್ಲಿಂ ಯೂನಿಟಿಯ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಇದೇ ಸಂದರ್ಭ ಆಯ್ಕೆ ಮಾಡಲಾಯಿತು. ಸಭೆಯಲ್ಲಿದ್ದವರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ ಹಿನ್ನೆಲೆ ಹಿರಿಯರಾದ ಕೆ.ಎ.ಯಾಕುಬ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಹಾಗೂ ಅಮೀನ್ ಮೊಹಿಸಿನ್ ಅವರನ್ನು ಯುವ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷ ಕೆ.ಎ.ಯಾಕುಬ್ ಅವರು ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಒಂದು ಕೋಟಿಗೂ ಅಧಿಕ ಮುಸಲ್ಮಾನರಿದ್ದು, ನಮ್ಮ ಹಕ್ಕುಗಳನ್ನು ಪ್ರತಿಪಾದಿಸುವುದಕ್ಕಾಗಿ ಒಂದೇ ವೇದಿಕೆಯಡಿ ಗುರುತಿಸಿಕೊಂಡು ಒಗ್ಗಟ್ಟನ್ನು ಪ್ರದರ್ಶಿಸಿದ್ದೇವೆ. ಸಂಘಟನೆ ಮುಂದಿನ ದಿನಗಳಲ್ಲಿ ಮುಸಲ್ಮಾನರ ಹಕ್ಕುಗಳಿಗಾಗಿ ಹೋರಾಟ ನಡೆಸಲಿದೆ ಎಂದರು.ಸಮಾಲೋಚನಾ ಸಭೆಯಲ್ಲಿ ಮುಸ್ಲಿಂ ಯೂನಿಟಿಯ ಯುವ ಘಟಕದ ಅಧ್ಯಕ್ಷ ನೂರ್ ಅಹಮ್ಮದ್, ಮಹಿಳಾ ಘಟಕದ ಅಧ್ಯಕ್ಷೆ ಡಾ.ಫರ್ಹಾನಾ ಬೇಗಂ, ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ, ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷರುಗಳಾದ ಎ.ಬಿ.ಉಮ್ಮರ್, ಎಂ.ಹೆಚ್.ಮೊಹಮ್ಮದ್, ಎಂ.ಬಿ.ಹಮೀದ್, ಸಮಿತಿಯ ಸೋಮವಾರಪೇಟೆ ಅಧ್ಯಕ್ಷ ಕೆ.ಎ.ಆದಂ, ಮಂಗಳೂರು ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಉಪಾಧ್ಯಕ್ಷ ನಾಸಿರ್, ಸದಸ್ಯ ಅಮ್ಜದ್, ಎಕ್ಸ್ ಲೆನ್ಸಿ ರೆಸಾರ್ಟ್ ನ ಮಾಲೀಕ ಮೊಯ್ದು, ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಅಬ್ಬುಬಕ್ಕರ್ ಸಖಾಫಿ, ಜಿ.ಪಂ ಮಾಜಿ ಸದಸ್ಯ ಮೊಯ್ದೀನ್ ಕುಜ್ಞ, ಪ್ರಮುಖರಾದ ಸಿ.ಎಂ.ಹಮೀದ್ ಮೌಲವಿ ಸುಂಟಿಕೊಪ್ಪ, ಇಸ್ಮಾಯಿಲ್ ನಾಪೋಕ್ಲು, ಹಂಸ ಕೊಟ್ಟಮುಡಿ, ಅಬ್ದುಲ್ ಮಜೀದ್ ಕುಶಾಲನಗರ, ಮುಸ್ತಫ 7ನೇ ಹೊಸಕೋಟೆ, ಹಕೀಂ ನೆಲ್ಲಿಹುದಿಕೇರಿ, ಅಬ್ದುಲ್ ರೆಹಮಾನ್ ಬಾಪು ಗೋಣಿಕೊಪ್ಪ, ಇಜ್ಜಾಸ್ ವಿರಾಜಪೇಟೆ, ಮಜೀದ್ ಸಿದ್ದಾಪುರ, ಮೊಹಿದೀನ್ ಕುಟ್ಟ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

PREV