ಕನ್ನಡಪ್ರಭ ವಾರ್ತೆ ಉಡುಪಿ
ಜೂನ್ 17ರಂದು ಕರಾವಳಿಯಾದ್ಯಂತ ಮುಸ್ಲಿಂ ಬಾಂಧವರು ಸಂಭ್ರಮದಿಂದ ಪ್ರೀತಿ, ತ್ಯಾಗ, ಬಲಿದಾನದ ಸಂಕೇತವಾಗಿ ಬಕ್ರೀದ್ ಹಬ್ಬ ಆಚರಿಸಿದರು. ಈ ನಡುವೆ ಉಚ್ಚಿಲದ ಖಾಸಗಿ ಬಸ್‌ನ ಮುಸ್ಲಿಂ ಚಾಲಕ, ನಿರ್ವಾಹಕರು ತಮ್ಮ ಸಹೋದ್ಯೋಗಿ ಬಸ್ ಚಾಲಕ, ನಿರ್ವಾಹಕರಿಗೆ ಬಿರಿಯಾನಿ ಹಂಚಿ ಸಂಭ್ರಮಪಟ್ಟರು.
ಉಡುಪಿ-ಮಂಗಳೂರು ನಡುವೆ ಸಂಚಾರ ನಡೆಸುವ ಖಾಸಗಿ ಎಕ್ಸ್‌ಪ್ರೆಸ್, ಸರ್ವಿಸ್, ಸರ್ಕಾರಿ ಮತ್ತು ಇತರ ಬಸ್‌ಗಳ ಸುಮಾರು 450 ಮಂದಿಗೆ ಬಕ್ರೀದ್ ಸಂಭ್ರಮದ ಅಂಗವಾಗಿ ಈ ತಂಡ ಬಿರಿಯಾನಿಯನ್ನು ವಿತರಿಸಿತು.ಇದೇ ಮಾರ್ಗದಲ್ಲಿ ಸಂಚಾರ ನಡೆಸುವ ಖಾಸಗಿ ಬಸ್‌ನ ಸಿಬ್ಬಂದಿಯಾದ ಜಾವೇದ್, ಶನವಾಜ್, ನಾಸಿರ್, ನಿಜಾಮ್, ಮೌಜಿ, ಮುನ್ನ ಅವರ ತಂಡದ ಈ ಕಾರ್ಯಕ್ಕೆ ವಿವಿಧ ಬಸ್‌ನ ಮಾಲಕರು ಮತ್ತು ಇತರ ಸಿಬ್ಬಂದಿ ಕೂಡ ಸಾಥ್ ನೀಡಿದ್ದರು.
ಸದಾ ವಿವಿಧ ಕೋಮು ಸೂಕ್ಷ್ಮ ವಿಷಯಗಳಿಗೆ ಸುದ್ದಿಯಲ್ಲಿರುತ್ತಿದ್ದ ಕರಾವಳಿಯಲ್ಲಿ ಇಂತಹ ಯುವಕರ ಸೌಹಾರ್ದದ ನಡೆಗಳು, ಸೌಹಾರ್ಯದತೆಯ ಹೊಸ ಹುರುಪನ್ನು ಮೂಡಿಸಿವೆ.